Advertisement
ಮಹಾಮಳೆಯ ಕಾರಣದಿಂದಾಗಿ ಕಾಪು ಪುರಸಭೆ ವ್ಯಾಪ್ತಿಯ ಕಾಪು, ಮಲ್ಲಾರು ಮತ್ತು ಉಳಿಯಾರಗೋಳಿ ಗ್ರಾಮಗಳ ವ್ಯಾಪ್ತಿ ಮತ್ತು ಮಜೂರು, ಮಲ್ಲಾರು, ಉಚ್ಚಿಲ, ಬೆಳಪು, ಎಲ್ಲೂರು, ಕಳತ್ತೂರು ಸಹಿತ ವಿವಿಧ ಗ್ರಾ. ಪಂ. ವ್ಯಾಪ್ತಿಗಳಲ್ಲಿ ವಿವಿಧ ರೀತಿಯ ಸಮಸ್ಯೆ ಕಾಣಿಸಿಕೊಂಡಿದ್ದವು.ಕೆಲವೊಂದು ಕಡೆಗಳಲ್ಲಿ ಮಳೆ ಯಿಂದಾಗಿ ಉಂಟಾಗಿದ್ದ ಸಮಸ್ಯೆ ಬಗೆಹರಿಸುವ ಚಿಂತನೆಯೊಂದಿಗೆ ತತ್‌ಕ್ಷಣಕ್ಕೆ ಕಂಡುಕೊಂಡಿದ್ದ ಪರಿಹಾರ ಕ್ರಮಗಳು ಅಂದಿಗೆ ಮಾತ್ರಾ ಪರಿಹಾರ ಸೂತ್ರವಾಗಿ ಕಂಡು ಬಂದಿದ್ದು, ಅನಂತರದ ದಿನಗಳಲ್ಲಿ ಸ್ಥಳೀಯ ಜನರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿವೆ.
ಲಾಭವೂ .. ನಷ್ಟವೂ
ಮಹಾಮಳೆಯ ಕಾರಣದಿಂದಾಗಿ ಕಾಪು ಪೇಟೆಯಲ್ಲಿ ಮಳೆ ನೀರಿನ ಸರಾಗ ಹರಿವಿಗೆ ತೊಂದರೆಯುಂಟಾಗಿ ಆಂಗಡಿಗಳೊಳಗೆ ನೀರು ತುಂಬಿತ್ತು. ತತ್‌ಕ್ಷಣ ಎಚ್ಚೆತ್ತ ಪುರಸಭೆ ಮಳೆ ನೀರು ಹರಿಯಲು ತಡೆಯುಂಟು ಮಾಡುತ್ತಿದ್ದ ಚರಂಡಿಗಳ ಹೂಳೆತ್ತಿ ನೀರಿನ ಹರಿವಿಗೆ ಅವಕಾಶ ಮಾಡಿಕೊಲು ಮುಂದಾಗಿತ್ತು. ಇದರಿಂದಾಗಿ ಪೇಟೆಯ ಜನತೆ ಪುರಸಭೆಯ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಕಾಪು ಮಾರಿಗುಡಿ ರಸ್ತೆಯಲ್ಲಿ ತೆರೆಯಲಾಗಿರುವ ಚರಂಡಿಯನ್ನು ಮುಚ್ಚದ ಪರಿಣಾಮ ಜನರು ನಡೆದಾಡಲು ಮತ್ತು ವಾಹನಗಳು ಸುಲಲಿತವಾಗಿ ಸಂಚರಿಸಲು ತೀವ್ರವಾಗಿ ಪರದಾಡುವಂತಾಗಿದೆ. ಇನ್ನು ಕೆಲವೆಡೆಗಳಲ್ಲಿ ಪುರಸಭೆ ವತಿಯಿಂದ ನೀರಿನ ಹರಿವಿಗಾಗಿ ತೆರೆದು ಕೊಡಲಾಗಿರುವ ಚರಂಡಿಯನ್ನು ವ್ಯಾಪಾರಸ್ಥರು ಮತ್ತೆ ಮುಚ್ಚಿ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
Related Articles
ಪುರಸಭೆ ವ್ಯಾಪ್ತಿಯ ಮಲ್ಲಾರು ರಾಣ್ಯಕೇರಿ ಮಿಷನ್ ಕಂಪೌಂಡ್ ವ್ಯಾಪ್ತಿಯಲ್ಲಿ ಕಂಡು ಬಂದಿದ್ದ ನೆರೆ ಪರಿಸ್ಥಿತಿ ಸರಿಪಡಿಸಲು ಜನರೇ ಕಾಂಕ್ರೀಟ್ ರಸ್ತೆ ಅಗೆದಿದ್ದರು. ಆದರೆ ಇಲ್ಲಿ ರಸ್ತೆ ಕಡಿದು ವಾರ ಕಳೆದರೂ ರಸ್ತೆ ದುರಸ್ತಿಗೆ ಪುರಸಭೆಯಾಗಲೀ, ಗುತ್ತಿಗೆದಾರರಾಗಲೀ ಮುಂದೆ ಬರದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಕಾಲನಿಯ ನಿವಾಸಿಗಳು, ಶಾಲಾ ವಿದ್ಯಾರ್ಥಿಗಳು ಕಡಿದ ರಸ್ತೆಯ ಮೇಲೆ ಹಾಕಿರುವ ತುಂಡು ಹಲಗೆಯ ಮೇಲಿ ನಿಂದಲೇ ನಡೆದಾಡಬೇಕಿದ್ದು ಸಂಚಕಾರ ಎದುರಿಸುವಂತಾಗಿದೆ. ಇದರಿಂದಾಗಿ ಕೆಲವು ಮನೆಗಳ ಮುಂಭಾಗದಲ್ಲಿ ಕೂಡ ನೀರು ನಿಲ್ಲುವ ಭೀತಿ ಎದುರಾಗಿದೆ.
ಉಚ್ಚಿಲ ಸಂತೆ ಮಾರ್ಕೆಟ್ಬಡಾ ಗ್ರಾ.ಪಂ. ವ್ಯಾಪ್ತಿಯ ಉಚ್ಚಿಲ ಸಂತೆ ಮಾರ್ಕೆಟ್ ಬಳಿ ಕೂಡಾ ಮಳೆ ನೀರು ನಿಂತು ಅಂಗಡಿ ಮತ್ತು ಮನೆಯವರಿಗೆ ತೊಂದರೆಯುಂಟಾದ ಕಾರಣ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಹಾಸುಕಲ್ಲುಗಳನ್ನು ತೆಗೆದು ನೀರಿನ ಹರಿವಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಕಲ್ಲು ತೆಗೆದು, ರಸ್ತೆ ಕಡಿದು ವಾರ ಕಳೆದರೂ ಅಲ್ಲಿನ ಪರಿಸ್ಥಿತಿ ಹಾಗೆಯೇ ಉಳಿದಿದ್ದು, ಜನ ಮುಂದೇನು? ಎಂದು ನೋಡುವಂತಾಗಿದೆ. ಕಾಪು ಮಾರ್ಕೆಟ್ ಬಳಿ ಚರಂಡಿಗೆ ಕಲ್ಲು
ಉಳಿದಂತೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಸಂತೆ ಮಾರ್ಕೆಟ್ ಬಳಿ ಕೂಡ ಮಹಾಮಳೆಗೆ ನೀರು ಹರಿಯಲು ಚರಂಡಿ ತೆರೆದುಕೊಡಲಾಗಿತ್ತಾದರೂ ಆ ಬಳಿಕ ಮತ್ತದೇ ಯಥಾಸ್ಥಿತಿ ಮುಂದುವರಿದಿದೆ. ಪುರಸಭೆ ಸದಸ್ಯ ಅನಿಲ್ ಕುಮಾರ್ ಮಳೆಯಲ್ಲಿ ನಿಂತು ಪರಿಶ್ರಮ ಪಟ್ಟು ಮಾಡಿಸಿರುವ ಕೆಲಸಕ್ಕೆ ಪ್ರತಿಯೆಂಬಂತೆ ಶುಕ್ರವಾರದ ಸಂತೆಗೆ ಬಂದ ವ್ಯಾಪಾರಸ್ಥರು ಚರಂಡಿಗೆ ಅಡ್ಡಲಾಗಿ ಕಲ್ಲುಗಳನ್ನು ಇರಿಸಿಹೋಗಿದ್ದು, ಮತ್ತೆ ಮಳೆ ಬಂದರೆ ಮಾರ್ಕೆಟ್‌ನಲ್ಲಿ ನೆರೆ ಭೀತಿ ಗ್ಯಾರಂಟಿ ಎಂಬಂತಾಗಿದೆ. ಮಜೂರು ಗ್ರಾಮದ ಜಲಂಚಾರು ಹೊಳೆ ಪರಿಸರದಲ್ಲಿ, ಬೆಳಪು ಗ್ರಾಮದ ಬೆಳಪು – ಮೂಳೂರು ರಸ್ತೆಯಲ್ಲಿ, ಎಲ್ಲೂರು ಗ್ರಾಮದ ಕುಂಜೂರಿನ ಖಾಸಗಿ ಲೇಔಟ್ ಪರಿಸರ ಸಹಿತವಾಗಿ ಹಲವು ಕಡೆಗಳಲ್ಲಿನ ಪರಿಸ್ಥಿತಿಯೂ ಇನ್ನೂ ಸುಧಾರಿಸದೇ ಹಾಗೆಯೇ ಉಳಿದಿರುವುದು ಗ್ರಾಮೀಣ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮೆಸ್ಕಾಂಗೆ ಭಾರೀ ನಷ್ಟ
ಮಹಾಮಳೆಯಿಂದಾಗಿ ಕಾಪು ಕ್ಷೇತ್ರದಲ್ಲಿ ಮೆಸ್ಕಾಂಗೆ 14 ಲ.ರೂ. ವರೆಗೆ ನಷ್ಟ ಉಂಟಾಗಿದೆ. ಸುಮಾರು 121 ವಿದ್ಯುತ್ ಕಂಬಗಳು ಮತ್ತು 14 ಟ್ರಾನ್ಸ್‌ಫಾರ¾ರ್‌ಹಾನಿಗೊಳಗಾಗಿದ್ದು, ಎಲ್ಲ ಕಡೆಗಳಲ್ಲೂ ತುರ್ತಾಗಿ ಸ್ಪಂದಿಸಿ ವಿದ್ಯುತ್ ವ್ಯವಸ್ಥೆ ಜೋಡಿಸಿ ಕೊಡಲಾಗಿದೆ. ಕನಿಷ್ಠ 3 ದಿನದಲ್ಲಿ ವಿದ್ಯುತ್ ವ್ಯವಸ್ಥೆ ಸರಿಪಡಿಸಿಕೊಡಲಾಗಿದ್ದು, ಎಲ್ಲ ಹಂತಗಳಲ್ಲೂ ಕಾರ್ಯ ನಿರ್ವಹಿಸಲು ಮೆಸ್ಕಾಂ ತಂಡ ಸಿದ್ಧವಾಗಿದೆ .
– ಜೆ.ಪಿ. ರಾಮ, ಮೆಸ್ಕಾಂ ಅಧಿಕಾರಿ ಚುನಾವಣಾ ನೀತಿ ಸಂಹಿತೆ ಅಡ್ಡಿ
ಪುರಸಭೆ ವ್ಯಾಪ್ತಿಯ ಕಾಪು ಪೇಟೆಯ ಚರಂಡಿ ಬಿಡಿಸುವ, ಹೂಳೆತ್ತುವಿಕೆ ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದೆ. ಮಲ್ಲಾರು ರಾಣ್ಯಕೇರಿ – ಮಿಷನ್ ಕಂಪೌಂಡ್ ವ್ಯಾಪ್ತಿಯಲ್ಲಿ ರಸ್ತೆ ಅಗೆತದ ವಿಚಾರ ಗಮನಕ್ಕೆ ಬಂದಿದ್ದು, ಅಲ್ಲಿ ಮೋರಿ ನಿರ್ಮಿಸಿ ಕೊಡುವ ಅಗತ್ಯವಿದೆ. ಆದರೆ ಚುನಾವಣಾ ನೀತಿ ಸಂಹಿತೆ ಮತ್ತು ಇಂಜಿನಿಯರ್ ಚುನಾವಣಾ ಕರ್ತವ್ಯದಲ್ಲಿ ಇರುವುದರಿಂದ ಕಾಮಗಾರಿಗೆ ತೊಂದರೆಯಾಗಿದೆ. 2-3 ದಿನಗಳಲ್ಲಿ ಅಲ್ಲಿನ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡಲಾಗುವುದು.
– ಶೀನ ನಾಯ್ಕ ,ಮುಖ್ಯಾಧಿಕಾರಿ – ರಾಕೇಶ್ ಕುಂಜೂರು