Advertisement

ಸಾಹಿತ್ಯ ಕ್ಷೇತ್ರ ಸಮೃದ್ಧವಾಗಲಿ

12:10 PM Mar 20, 2018 | Team Udayavani |

ಬೆಂಗಳೂರು: ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿರಬೇಕು, ಸಾಹಿತ್ಯ ದೃಷ್ಟಿಕೋನದಲ್ಲಿ ಶ್ರೀಮಂತಿಕೆ ಕಂಡುಕೊಳ್ಳಬೇಕು ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರತಿಯೊಂದು ಪ್ರಾಕಾರಗಳು ವಿಜೃಂಭಿಸಲು ಬೇಕಾದ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

Advertisement

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಹಾಗೂ 2016ನೇ ಸಾಲಿನ ಪುಸ್ತಕ ಬಹುಮಾನ ವಿತರಿಸಿ ಮಾತನಾಡಿದ ಅವರು, ಕಲಾವಿದರು ಮತ್ತು ಸಾಹಿತಿಗಳ ಬಗ್ಗೆ ಕಾಳಜಿ ಹಾಗೂ ಬದ್ಧತೆಯಿಂದ ಕೆಲಸ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಅಕಾಡೆಮಿಗಳಲ್ಲಿ ಇರುವ ಪ್ರಶಸ್ತಿಗಳ ಸಂಖ್ಯೆ ಏರಿಸಿ, ಅದರ ಮೊತ್ತವನ್ನು ಹೆಚ್ಚಿಸಿದ್ದೇವೆ. ಹಿಂದಿನ ಸರ್ಕಾರ ಬಾಕಿ ಉಳಿಸಿದ್ದ ಎರಡು ಮೂರು ವರ್ಷಗಳ ಪ್ರಶಸ್ತಿಯನ್ನು ಕೊಟ್ಟಿದ್ದೇವೆ. ಪಿಂಚಣಿಗೆ ಸಂಬಂಧಿಸಿದಂತೆ ಕಲಾವಿದರ 8 ಸಾವಿರ ಅರ್ಜಿಯನ್ನು ವಿಲೇವಾರಿ ಮಾಡಿ, 2017-18ನೇ ಸಾಲಿನ ಸಂದರ್ಶನ ಈಗ ನಡೆಯುತ್ತಿದೆ ಎಂದರು.

ಸಾಹಿತ್ಯ ಶ್ರೀ ಪ್ರಶಸ್ತಿಗೆ 45 ವರ್ಷ ಹಾಗೂ ಗೌರವ ಪ್ರಶಸ್ತಿಗೆ 60 ವರ್ಷದ ಮಾನದಂಡ ನಿಗದಿ ಮಾಡಿದ್ದೇವೆ. ಹಿರಿಯರು ಪ್ರಶಸ್ತಿಗಾಗಿ ಅರ್ಜಿ ಹಾಕುವುದಿಲ್ಲ. ಅವರನ್ನು ಗುರುತಿಸುವ ಮನಸ್ಥಿತಿ ನಮ್ಮಲ್ಲಿ ಇರಬೇಕು. ಆದ್ದರಿಂದಲೇ ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷ ನಿಗದಿ ಮಾಡಿದ್ದೇವೆ. ಈ ಐದು ವರ್ಷದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿದ ಹೆಮ್ಮೆ ಇದೆ ಎಂದು ಹೇಳಿದರು.

ಕಸಾಪ ಅಧ್ಯಕ್ಷ ಮನು ಬಳಿಗಾರ್‌, ಇಲಾಖೆ ನಿರ್ದೇಶಕ ಎನ್‌. ಆರ್‌.ವಿಶುಕುಮಾರ್‌, ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಉಪಸ್ಥಿತರಿದ್ದರು.

Advertisement

ಇನ್ನಾದರೂ ಲಕ್ಷ್ಮೀ ಒದಗಲಿ…: ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಸಾಹಿತ್ಯ ಶ್ರೀ ಎಂದು ನಾಮಕರಣ ಮಾಡಿ, ಅದರ ಸಂಖ್ಯೆಯನ್ನು ಐದರಿಂದ ಹತ್ತಕ್ಕೆ ಏರಿಸಲಾಗಿದೆ. ಸಾಹಿತ್ಯ “ಶ್ರೀ’ ಎಂಬ ಹೆಸರು ಉಮಾ”ಶ್ರೀ’ಯಿಂದ ಪ್ರೇರಿತವಾಗಿಲ್ಲ, ಉಮಾಶ್ರೀಯಲ್ಲಿ ಪಾರ್ವತಿ ಮತ್ತು ಲಕ್ಷ್ಮೀ ಇದ್ದಾರೆ. ಉಮಾ ಎಂದರೆ ಪಾರ್ವತಿ.  ಸಾಹಿತ್ಯದಲ್ಲಿ ಸರಸ್ವತಿ ಇರ್ತಾಳೆ, ಲಕ್ಷ್ಮೀ ಇರುವುದಿಲ್ಲ. ಅದಕ್ಕೆ ಶ್ರೀ ಸೇರಿಸಿದ್ದಾರೆ. ಇನ್ನಾದರೂ, ಲಕ್ಷ್ಮೀ ಒದಗಿ ಬರಲಿ ಎಂಬ ಉದ್ದೇಶದಿಂದ ಮಾಡಿರಬಹುದು ಎಂದು ಸಚಿವೆ ಉಮಾಶ್ರೀ ಹೇಳಿದರು.

ಎರಡು ಗಂಟೆ ವಿಳಂಬ: ಆಹ್ವಾನ ಪ್ರತಿಕೆಯಲ್ಲಿ ಕಾರ್ಯಕ್ರಮ ಸಂಜೆ 4 ಗಂಟೆಗೆ ಆರಂಭವಾಗಲಿದೆ ಎಂದು ಉಲ್ಲೇಖೀಸಿದ್ದರು. ಸನ್ಮಾನಿತರಾಗಲಿರುವ ಎಲ್ಲಾ ಸಾಹಿತಿಗಳು, ಸಾಧಕರು, ಲೇಖಕರು ಅಷ್ಟೋತ್ತಿಗೆ ಬಂದಿದ್ದರು. ಆದರೆ, ಸಚಿವೆ ಉಮಾಶ್ರೀ ತಡವಾಗಿ ಬಂದಿದ್ದರಿಂದ ಕಾರ್ಯಕ್ರಮ ಸುಮಾರು 2 ಗಂಟೆ ವಿಳಂಬವಾಗಿತ್ತು.  ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನದ ವೇಳೆ ಎರಡು ಬಾರಿ ವಿದ್ಯುತ್‌ ಕೈ ಕೊಟ್ಟಿತ್ತು.

ಬನ್ನಂಜೆ ಬೇಸರ: ಪ್ರಶಸ್ತಿ ಪಡೆದವರ ಪರವಾಗಿ ಐದು ನಿಮಿಷ ಮಾತಾಡುವಂತೆ ಆಯೋಜಕರು ಹೇಳಿದ್ದರು, ನಂತರ ಅದನ್ನು ಮೂರು ನಿಮಿಷಕ್ಕೆ ಇಳಿಸಿದರು, ಕೊನೆಗೆ ಎರಡು ಮೂರು ನಿಮಿಷದೊಳಗೆ ಮುಗಿಸಿ ಎಂದು ಆಯೋಜಕರು ಹೇಳಿದರು ಎಂದು ಬನ್ನಂಜೆಯವರು ಬೇಸರ ವ್ಯಕ್ತಪಡಿಸಿದರು.
ನಾನು ಎಂದೂ ಪ್ರಶಸ್ತಿಯ ಹಿಂದೆ ಹೋಗಿಲ್ಲ. ಕಾರಣ, ಇಂದು ಪ್ರಶಸ್ತಿಗಳು ತನ್ನ ಮಾನ ಕಳೆದುಕೊಂಡಿದೆ. ಇಲ್ಲಿ ಪುರಸ್ಕೃತರಾದವರು ಪ್ರಶಸ್ತಿಗಾಗಿ ಬರೆದು ಪ್ರಶಸ್ತಿ ಪಡೆದಿಲ್ಲ ಹಾಗೂ ಪ್ರಶಸ್ತಿಯ ನಿರೀಕ್ಷೆಯನ್ನು ಮಾಡಿಲ್ಲ ಎಂದರು.

ಸಾಹಿತ್ಯದ ದೋಣಿ ಚುನಾವಣೆಯ ಅಬ್ಬರದಲ್ಲಿ ಬಳಕೆಯಾಗುತ್ತಿರುವಾಗ ಬಾಷೆಯಲ್ಲಿ ಕಳೆದು ಹೋಗದಂತೆ ನೋಡಿಕೊಳ್ಳಬೇಕು. ರಾಜಕಾರಣಿಗಳಿಗೆ ಭಾಷೆಯ ಬಳಕೆ ಮತ್ತು ಸಂಸ್ಕೃತಿಯ ತರಬೇತಿಯನ್ನು ಇಲಾಖೆಯಿಂದ ನೀಡಬೇಕು. ಗಂಭೀರ ಭಾಷೆಯ ಬಳಕೆ ರಾಜಕಾರಣದಲ್ಲಿ ಮರೆಯಾಗುತ್ತಿದೆ.
-ನಟರಾಜ ಹುಳಿಯಾರ್‌, ಸಾಹಿತಿ

ರಂಗಭೂಮಿ ಬರವಣಿಗೆ ರಾಜಕಾರಣ ಹಾಗೂ ಪ್ರತಿರೋಧವನ್ನು ಒಡಲಲ್ಲೇ ಇಟ್ಟುಕೊಂಡು ಸಾಗಬೇಕು. ಎಲ್ಲವೂ ರಾಜಕೀಯವಾಗಿರುವ ಇಂದಿನ ದಿನದಲ್ಲಿ ಪ್ರತಿರೋಧವೂ ಒಂದು ಆಯ್ಕೆ ಎಂಬುದನ್ನು ಸಾಹಿತಿಗಳು ತೋರಿಸುತ್ತಿದ್ದಾರೆ.
-ಪ್ರೀತಿ ನಾಗರಾಜ್‌, ಲೇಖಕಿ

Advertisement

Udayavani is now on Telegram. Click here to join our channel and stay updated with the latest news.

Next