Advertisement

ಸಾಹಿತ್ಯ ಸೇವೆಗೆ ಅವಕಾಶ ಕೊಡಿ: ನಿರಗುಡಿ

06:17 PM Apr 13, 2021 | Team Udayavani |

ವಾಡಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರ ಎಂಬುದು ಸರಕಾರಿ ನೌಕರಿಯಲ್ಲ. ಅದೊಂದು ಸಾಹಿತ್ಯ ಸೇವಾ ವಲಯ. ಅಧ್ಯಕ್ಷ ಗಾದಿಗಾಗಿ ಪದೇ ಪದೇ ಸ್ಪರ್ಧೆ ಮಾಡುವ ಆಸೆ ನನಗಿಲ್ಲ. ಒಮ್ಮೆ ಅವಕಾಶ ಕೊಟ್ಟರೆ ಮತ್ತೂಮ್ಮೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ ಅಭ್ಯರ್ಥಿ, ಬರಹಗಾರ ಬಿ.ಎಚ್‌.ನಿರಗುಡಿ ಸ್ಪಷ್ಟಪಡಿಸಿದರು.

Advertisement

ನಾಲವಾರ ಕೋರಿಸಿದ್ಧೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ ಅವರು, ಮಠದ ಪೀಠಾಧಿಪತಿ ಡಾ.ಸಿದ್ಧ ತೋಟೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಕಸಾಪ ಸದಸ್ಯರೊಂದಿಗೆ ಮಾತುಕತೆ ನಡೆಸಿ ಮಾತನಾಡಿದರು. ಕಸಾಪ ಅಧ್ಯಕ್ಷ ಸ್ಥಾನವನ್ನು ಕೆಲವರು ಸರಕಾರಿ ನೌಕರಿ ಎಂದು ತಿಳಿದ್ದಾರೆ. ಮೂರ್‍ನಾಲ್ಕು ಬಾರಿ ಅವಕಾಶ ದೊರೆತರೂ ಸಾಹಿತ್ಯ ಚಟುವಟಿಕೆಗಳಿಗೆ ಆದ್ಯತೆ ನೀಡದೆ ಬರಹ ಲೋಕ ಬಡವಾಗಿಸಿದ್ದಾರೆ. ಮತ್ತೆ ಮತ್ತೆ ಅವಕಾಶಕ್ಕಾಗಿ ಹಪಹಪಿಸುತ್ತಿದ್ದಾರೆ.

ಹೊಸಬರಿಗೆ ಅವಕಾಶ ಒದಗಿಸಬೇಕು ಎನ್ನುವ ಮನೋಭಾವ ಇಲ್ಲದವರು ಕೇವಲ ಕಟ್ಟಡಗಳನ್ನು ಮಾತ್ರ ಕಟ್ಟಬಹುದು. ಆದರೆ ಸಾಹಿತ್ಯ ಮನಸ್ಸುಗಳನ್ನು ಕಟ್ಟಲಾರರು ಎಂದು ಆರೋಪಿಸಿದರು. ಜಿಲ್ಲಾ ಸಾಹಿತ್ಯ ಕ್ಷೇತ್ರದ ಹಿರಿಯ ಕಿರಿಯ ಬರಹಗಾರರನ್ನು ಗುರುತಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಸಾಹಿತ್ಯ ಕಮ್ಮಟಗಳನ್ನು ಹೆಚ್ಚೆಚ್ಚು ಸಂಘಟಿಸುವ ಮನೋಭಾವ ಹೊಂದಿದ್ದೇನೆ.

ಕನ್ನಡಪರ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆಗಳು ಹಮ್ಮಿಕೊಳ್ಳುವ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಕನ್ನಡ ಭವನದ ರಂಗಂದಿರ ಬಳಕೆಗೆ ರಿಯಾಯಿತಿ ನೀಡಲಾಗುವುದು. ಶಾಲಾ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯದ ಕುರಿತು ಅರ್ಥಪೂರ್ಣ ವಾತಾವರಣ ಸೃಷ್ಟಿಸಲಾಗುವುದು. ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ ನೀಡಲಾಗುವುದು. ಈಗಾಗಲೇ ಹಲವು ಸಂಘ, ಸಂಸ್ಥೆಗಳು ಮತ್ತು ಹಿರಿಯ, ಕಿರಿಯ ಸಾಹಿತಿಗಳು ಮುಕ್ತವಾಗಿ ನನಗೆ ಬೆಂಬಲ ಸೂಚಿಸಿದ್ದಾರೆ. ಎಲ್ಲಾ ಕಸಾಪ ಸದಸ್ಯರು ಒಮ್ಮೆ ನನಗೆ ಅಧ್ಯಕ್ಷನಾಗಲು ಆಶೀರ್ವಾದ ಮಾಡಿಬೇಕು ಎಂದು ನಿರಗುಡಿ ಮನವಿ ಮಾಡಿದರು.

ಡಾ.ಸಿದ್ಧ ತೋಟೇಂದ್ರ ಶ್ರೀಗಳು ಮಾತನಾಡಿ, ಕನ್ನಡ ಸಾಹಿತ್ಯದ ತೇರು ಎಳೆಯುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ನಿರಗುಡಿಯವರು ಬರಹಗಾರರಾಗಿದ್ದಾರೆ. ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಕರ್ತರಾಗಿ, ಉಪನ್ಯಾಸಕರಾಗಿ ನಿರಂತರವಾಗಿ ಕನ್ನಡದ ಸೇವೆಯಲ್ಲಿದ್ದಾರೆ. ಅಧಿ ಕಾರಕ್ಕಾಗಿ ಹಂಬಲಿಸುವವರಿಗಿಂತ ಅಧಿಕಾರ ಎಲ್ಲರಿಗೂ ಸಿಗುವಂತಾಗಬೇಕು. ಸಿಕ್ಕ ಅವಕಾಶವನ್ನು ಸಾಹಿತ್ಯ ಕ್ಷೇತ್ರದ ಪ್ರಗತಿಗಾಗಿ ಬಳಕೆಯಾಗಬೇಕು ಎಂಬ ಮನದಾಸೆ ಹೊಂದಿರುವುದು ಅವರ ದೊಡ್ಡ ಗುಣ ಎಂದು ಹರಸಿದರು. ನಾಲವಾರ ಕಸಾಪದ ಮಹಾದೇವ ಗವ್ಹಾರ, ಕಸಾಪ ಕಲಬುರಗಿ ತಾಲೂಕು ಅಧ್ಯಕ್ಷ ಸಿ.ಎಸ್‌.ಮಾಲಿಪಾಟೀಲ, ಉಪಾಧ್ಯಕ್ಷ ಭೀಮಾಶಂಕರ ಎನ್‌.ಯಳಮೇಲಿ, ಶರಣಗೌಡ ಪಾಟೀಲ, ವೇದಕುಮಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next