Advertisement

ದೀಪಗಳ ದರ್ಬಾರಿನಲಿ ದೀಪಾವಳಿ ಬೆಳಗಲಿ

06:56 PM Oct 22, 2019 | Lakshmi GovindaRaju |

ಭಾರತೀಯ ಸಂಪ್ರದಾಯದಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಹೆಚ್ಚಿನ ಮಹತ್ವವಿದೆ. ಐದು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುವ ಈ ಹಬ್ಬದಲ್ಲಿ ದೀಪಗಳೇ ಕೇಂದ್ರಬಿಂದು. ಕೆಲವರು ಹಬ್ಬಕ್ಕಾಗಿ ದೀಪಗಳ ಖರೀದಿಯಲ್ಲಿ ತೊಡಗಿದ್ದರೆ, ಇನ್ನು ಕೆಲವರು ಹಳೆಯ ದೀಪಗಳನ್ನೇ ಸ್ವಚ್ಛಗೊಳಿಸಲು ಅಣಿಯಾಗಿದ್ದಾರೆ. ಹಳೆಯ ದೀಪಗಳನ್ನು ಬಳಸುವವರಿಗೆ ಇಲ್ಲಿ ಕೆಲವು ಟಿಪ್ಸ್‌ಗಳಿವೆ.

Advertisement

– ಹಿತ್ತಾಳೆ, ಬೆಳ್ಳಿ, ತಾಮ್ರ, ಕಂಚಿನ ದೀಪಗಳನ್ನು ಬಿಸಿ ನೀರಿನಲ್ಲಿ ಸೋಪ್‌ ಪೌಡರ್‌ ಹಾಕಿ ನೆನೆಸಿಟ್ಟು ತೊಳೆದು, ನಂತರ ಹುಣಸೆ ಹಣ್ಣು- ಉಪ್ಪಿನಿಂದ ಉಜ್ಜಿದರೆ ಜಿಡ್ಡು ಹೋಗುತ್ತದೆ.

– ವಿಭೂತಿ ಬಳಸಿ ಉಜ್ಜಿದರೂ ದೀಪಗಳು ಫ‌ಳಫ‌ಳ ಹೊಳೆಯುತ್ತವೆ.

-ಪಿಂಗಾಣಿ ಮತ್ತು ಬಣ್ಣ ಬಣ್ಣದ ದೀಪಗಳಲ್ಲಿ ಎಣ್ಣೆಯ ಜಿಡ್ಡು ಇದ್ದರೆ, ಸೋಪ್‌ ಆಯಿಲ್‌ ಹಾಕಿ ನೆನೆಸಿಟ್ಟು, ಬ್ರಷ್‌ನಿಂದ ತೊಳೆದು, ಹತ್ತಿ ಬಟ್ಟೆಯಿಂದ ಒರೆಸಿ.

– ಮಣ್ಣಿನ ಹಣತೆಯ ಜಿಡ್ಡು ತೆಗೆಯಲು, ಸೋಪಿನ ಪೌಡರ್‌/ ಶ್ಯಾಂಪೂ ಹಾಕಿದ ಬಿಸಿನೀರಿನಲ್ಲಿ ಅರ್ಧಗಂಟೆ ನೆನೆಸಿ, ನಂತರ ತೊಳೆಯಿರಿ.

Advertisement

-ಹಣತೆ ಜಿಡ್ಡುಗಟ್ಟಿ ಕಪ್ಪಾಗಿದ್ದರೆ, ಬಿಸಿ ನೀರಿಗೆ ಸ್ವಲ್ಪ ಸೋಡಾ ಬೆರೆಸಿ ಅದರಲ್ಲಿ ನೆನೆಸಿಟ್ಟು ನಂತರ ಬಟ್ಟೆ ಸೋಪು ಹಾಕಿ ಉಜ್ಜಿ.

ಎಣ್ಣೆ ಸೋರದಂತೆ ತಡೆಯಲು
-ದೀಪದಿಂದ ಎಣ್ಣೆ ಸೋರದಂತೆ ತಡೆಯಲು, ಮಧ್ಯಕ್ಕೆ ಬರುವಂತೆ ಬತ್ತಿಗಳನ್ನು ಹಾಕಬೇಕು.

– ಉದ್ದದ ಬತ್ತಿ ಬಳಸುವುದಾದರೆ, ತುಪ್ಪದಲ್ಲಿ ಅದ್ದಿ ಹಾಕಬೇಕು. ಆಗ ಹೆಚ್ಚು ಹೊತ್ತು ಉರಿಯತ್ತದೆ ಮತ್ತು ದೀಪ ಕೊಳೆಯಾಗುವುದಿಲ್ಲ.

-ದೀಪಕ್ಕೆ ಯಾವಾಗಲೂ ಮುಕ್ಕಾಲು ಭಾಗದಷ್ಟು ಮಾತ್ರ ಎಣ್ಣೆ ಹಾಕಬೇಕು.

-ಬತ್ತಿ ಸಣ್ಣದಾಗಿ ಮಾಡಿ ಹಾಕಿದರೆ ದೀಪ ಹೆಚ್ಚು ಸಮಯ ಉರಿಯುತ್ತದೆ.

ದೀಪಗಳ ಅಲಂಕಾರ: ಮನೆಯ ಕಿಟಕಿ, ಬಾಗಿಲು, ತುಳಸಿ ಕಟ್ಟೆ, ಜಗುಲಿಯ ಮೇಲೆ ದೀಪಗಳ ಜೊತೆಗೆ ಹೂವುಗಳನ್ನು ಇಟ್ಟು ಅಲಂಕರಿಸಿದರೆ, ಹಬ್ಬಕ್ಕೆ ಮತ್ತಷ್ಟು ಅದ್ಧೂರಿ ಕಳೆ ಸಿಗುತ್ತದೆ. ದುಬಾರಿ ಹೂವುಗಳೇ ಆಗಬೇಕಿಲ್ಲ; ಮನೆಯಂಗಳದಲ್ಲಿ ಬೆಳೆಯುವ ಹೂವುಗಳೇ ಸಾಕು.

ಗುಲಾಬಿ ಹೂವಿನ ಅಲಂಕಾರ: ಡಿಸೈನ್‌ ಇರುವ ದೊಡ್ಡ ಸ್ಟೀಲ್‌ ಅಥವಾ ಪ್ಲಾಸ್ಟಿಕ್‌ ತಟ್ಟೆಯ ನಡುವೆ ದೀಪವನ್ನಿಟ್ಟು, ಅದರ ಸುತ್ತಲೂ ಗುಲಾಬಿ ದಳವನ್ನು ಹಾಕಿ. ಅದರ ಮೇಲೆ ಸಂಪಿಗೆ, ಬಿಳಿ, ಹಳದಿ,ನೀಲಿ ಬಣ್ಣದ ಚಿಕ್ಕ ಚಿಕ್ಕ ಹೂವುಗಳಿಂದ ಅಲಂಕರಿಸಬಹುದು.

ದಾಸವಾಳದ ಅಲಂಕಾರ: ದೊಡ್ಡ ಸ್ಟೀಲ್‌ ಬೌಲ್‌ ತೆಗೆದುಕೊಂಡು ಅದರಲ್ಲಿ ನೀರು ತುಂಬಿಸಿ. ನಡುವೆ ಒಂದು ಚಿಕ್ಕ ಪ್ಲೇಟ್‌ ಇಟ್ಟು, ಅದರಲ್ಲಿ ದೀಪವನ್ನು ಇಡಿ. ನೀರಿನ ಮೇಲೆ ಕೆಂಪು, ಬಿಳಿ ಬಣ್ಣದ ದಾಸವಾಳದ ಹೂವಿನ ತೊಟ್ಟು ತೆಗೆದು ಸುತ್ತಲೂ ಹಾಕಿ ಬೌಲ್‌ಅನ್ನು ಟೇಬಲ್‌ ಅಥವಾ ಟೀಪಾಯಿ ಮೇಲೆ ಇಟ್ಟರೆ ಅಂದವಾಗಿ ಕಾಣಿಸುತ್ತದೆ.

ಚೆಂಡು ಹೂವಿನ ಮೋಡಿ: ದೊಡ್ಡ ತಟ್ಟೆಯ ನಡುವೆ ಮತ್ತು ಸುತ್ತಲೂ ದೀಪಗಳನ್ನು ಇಟ್ಟು, ಸುತ್ತಲೂ ಚೆಂಡು ಹೂವುಗಳನ್ನಿಡಿ. ಉಳಿದ ಜಾಗದಲ್ಲಿ ಸಂಪಿಗೆ ದಳಗಳನ್ನಿಟ್ಟು ಸಿಂಗರಿಸಬೇಕು. ಹೂವಿನ ದಳಕ್ಕೆ ಸಣ್ಣಗೆ ನೀರಿನ ಹನಿಗಳನ್ನು ಚಿಮುಕಿಸಿ ಟೇಬಲ್‌ ಮೇಲಿಡಿ.

ಎಲ್ಲಿಟ್ಟರೆ ಚೆನ್ನ?
-ನಡುಮನೆಯ ನಡುವೆ ಟೇಬಲ್‌ ಅಥವಾ ಟೀಪಾಯಿ ಮೇಲೆ ಅಲಂಕೃತ ದೀಪದ ಪ್ಲೇಟ್‌ ಅಥವಾ ಗಾಜಿನ ಬೌಲ್‌ನಲ್ಲಿ ಸಿಂಗರಿಸಿದ ದೀಪಗಳನ್ನು ಇಡಬಹುದು.

-ದೇವರ ಮನೆಯ ಮುಂದೆ ಬಣ್ಣ ತುಂಬಿದ ರಂಗೋಲಿಯ ಮೇಲೆ ದೀಪವಿಟ್ಟರೆ ಮನೆ ಸುಂದರವಾಗಿ ಕಾಣುತ್ತದೆ.

– ತುಳಸಿ ಕಟ್ಟೆಯ ಸುತ್ತ, ಕಿಟಕಿಗಳ ಮೇಲೆ, ಮನೆಯ ಮುಂದೆ ಬಿಡಿಸಿದ ರಂಗೋಲಿಯ ಮೇಲೆ ಇಟ್ಟರೆ ಮನೆಯ ಅಂಗಳ ಸುಂದರವಾಗಿ ಕಾಣುತ್ತದೆ.

* ಭಾಗ್ಯಾ ಆರ್‌. ಗುರುಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next