ದೊಡ್ಡಬಳ್ಳಾಪುರ: ಕೆರೆ, ಕುಂಟೆ ಮೊದಲಾಗಿ ಪರಿಸರವನ್ನು ಸಂರಕ್ಷಿಸಬೇಕಾಗಿರುವುದು ಬರೀ ಇಲಾಖೆಗಳು ಹಾಗೂ ಸ್ಥಳೀಯ ಆಡಳಿತದ ಜವಾಬ್ದಾರಿ ಎಂದು ಕುಳಿತರೆ, ಅದರ ಘೋರ ಪರಿಣಾಮ ನಾವೇ ಎದುರಿಸ ಬೇಕಾಗುತ್ತದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಇದು ನಮ್ಮ ಹೊಣೆಗಾರಿಕೆ ಎಂದು ಅರಿತು ಕಾರ್ಯೋನ್ಮುಖರಾಗಬೇಕಿದ್ದು, ಪರಿಸರ ಸಂರಕ್ಷಣೆ ಕಾರ್ಯ ಆಂದೋಲನವಾಗಿ ರೂಪುಗೊಳ್ಳಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾಮಟ್ಟದ ಕೆರೆ ಸಂರಕ್ಷಣಾ ಸಮಿತಿ ಸದಸ್ಯ ಸಂದೀಪ್ ಸಾಲಿಯಾನ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ,ಕೆರೆ ಸಂರಕ್ಷಣಾ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಸಹ ಯೋಗದಲ್ಲಿ ತಾಲೂಕಿನ ಬಾಶೆಟ್ಟಿಹಳ್ಳಿಯ ಅಜಾಕ್ಸ್ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ನಡೆದ ತಾಲೂಕುಮಟ್ಟದ ಕೆರೆ ಸಂರಕ್ಷಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದಲ್ಲೇ ನಮ್ಮ ಕೆರೆ, ನದಿ ಹಾಗೂ ಜೀವಸಂಕುಲ ಉಳಿಸುವ ಕುರಿತಾಗಿ ನಮ್ಮ ಹೊಣೆಗಾರಿಕೆಯಿದೆ. ಆದರೆ, ಇದು ಪಾಲನೆಯಾಗುತ್ತಿಲ್ಲ. ಕೆರೆಗಳಲ್ಲಿ ಕಳೆ ಬೆಳೆಯುವುದು, ಕಲುಷಿತಗೊಳ್ಳುವುದನ್ನು ನೋಡು ತ್ತಾ ಇರುವುದು ಕಂಡರೆ ಮನಸ್ಸಿಗೆ ಬೇಸರವಾಗುತ್ತದೆ ಎಂದರು.
ಪ್ರಾಕೃತಿಕ ವಸ್ತುಗಳಿಗಾಗಿ ಹಾಹಾಕಾರ: ಬೇರೆ ಯಾರೋ ಬಂದು ನಮ್ಮ ಕೆರೆ, ಜಲಮೂಲಗಳನ್ನು ರಕ್ಷಿಸುತ್ತಾರೆ ಎನ್ನುವುದು ಸರಿಯಲ್ಲ. ಪೂಜೆ ಮಾಡುವ ಜಲಮೂಲಗಳಲ್ಲಿ ಪೂಜೆಯ ತ್ಯಾಜ್ಯ ಹಾಕಿ ಕಲುಷಿತ ಮಾಡಲಾಗುತ್ತಿದೆ. ಅರಣ್ಯ ಇಲಾಖೆ, ಕೆರೆ ಸಂರಕ್ಷಣೆ ಸಮಿತಿ, ನ್ಯಾಯಾಲಯ ಕೆರೆ ಸಂರಕ್ಷಣೆ ಮಾಡುವುದಾದರೆ ಅವರು ಮಾತ್ರ ಈ ದೇಶದ ಪ್ರಜೆಗಳೇ ಎನ್ನುವ ಪ್ರಶ್ನೆ ಮೂಡುತ್ತದೆ. ಪರಿಸರದ ಬಗ್ಗೆ ಎಲ್ಲರೂ ನಿರ್ಲಕ್ಷ್ಯ ವಹಿಸಿದರೆ ಮುಂದಿನ ಪೀಳಿಗೆ ನೀರು, ಮೊದಲಾದ ಪ್ರಾಕೃತಿಕ ವಸ್ತುಗಳಿಗಾಗಿ ಹಾಹಾಕಾರ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್‌ನ ಸಂಚಾಲಕ ಲಿಯೋ ಎಫ್ ಸಲ್ದಾನ ಮಾತನಾಡಿ, ಸಹಸ್ರಾರು ವರ್ಷದ ಹಿಂದೆಯೇ ಕೆರೆ, ಕುಂಟೆ ಜಲಮೂಲಗಳನ್ನು ಸಂರಕ್ಷಿಸಿಕೊಂಡಿರುವ ನಿದರ್ಶನಗಳಿವೆ. ಆದರೆ, ಇಂದು ಕೆರೆಕುಂಟೆ ಮೊದಲಾದ ಜಲಮೂಲಗಳನ್ನು ನಾಶ ಮಾಡುತ್ತಿರುವ ಪರಿಣಾಮ ಹರಿಯುವ ನೀರು ವಿಷವಾಗುತ್ತಿದೆ. ನೂರಾರು ಕೆರೆಗಳಿದ್ದ ಬೆಂಗಳೂರು ನಗರದಲ್ಲಿ ಇಂದು ಬೆರಳೆಕೆಯಷ್ಟಿವೆ. ನೀರು ಹರಿಯುವ ಕಾಲುವೆ, ಕುಂಟೆ, ಬಾವಿಗಳನ್ನು ರಕ್ಷಿಸದಿದ್ದರೆ ಕೆರೆಗಳನ್ನು ರಕ್ಷಿಸಲು ಸಾಧ್ಯವಿಲ್ಲ ಎಂದರು.
ಕೆರೆ ಸಂರಕ್ಷಣೆ ಸಮಿತಿ ರಚನೆ: ಪ್ರತಿ ಜಿಲ್ಲೆಯಲ್ಲಿ ಕೆರೆ ಸಂರಕ್ಷಣೆ ಸಮಿತಿ ನೇಮಿಸಿದ್ದು, ಕೆರೆಗಳು ಕಲುಷಿತವಾಗುವುದು, ಒತ್ತುವರಿ ಮೊದಲಾಗಿ ಅಕ್ರಮಗಳು ಕಂಡರೆ ದೂರು ನೀಡಬಹುದಾಗಿದೆ. 9 ಇಲಾಖೆಗಳಿಗೆ ಕೆರೆ ಸಂರಕ್ಷಣೆ ವ್ಯಾಪ್ತಿಗೆ ಒಳಪಡುತ್ತವೆ. ದೊಡ್ಡಬಳ್ಳಾ ಪುರ ತಾಲೂಕಿನಲ್ಲಿ ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಘಟಕದಿಂದ ಪರಿಸರ ಕಲುಷಿತವಾಗಿರುವುದು, ಕಸದ ರಾಶಿಗೆ ಬೆಂಕಿ ಇಡುವುದು ಮೊದಲಾದ ದೂರು ಬರುತ್ತಿದ್ದು, ಮುಂದೆ ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ದೊಡ್ಡತುಮಕೂರು ಕೆರೆ ಹೋರಾಟ ಸಮಿತಿ ವಸಂತ್ ಕುಮಾರ್ ಮಾತನಾಡಿದರು. ದೊಡ್ಡತುಮಕೂರು ಕೆರೆ ಕಲುಷಿತವಾಗದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಬಾಶೆಟ್ಟಿ ಹಳ್ಳಿ ಪಪಂನ ಮುಖ್ಯಾಧಿಕಾರಿ ಮುನಿರಾಜ್ ಅವರಿಗೆ ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಸೂಚಿಸಿದರು.
ಉಪವಲಯ ಅರಣ್ಯಾಧಿಕಾರಿ ಲಕ್ಷ್ಮೀ, ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಮಂಜುನಾಥ್, ಬಾಶೆಟ್ಟಿ ಹಳ್ಳಿ ಪಪಂನ ಮುಖ್ಯಾಧಿಕಾರಿ ಮುನಿರಾಜ್, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್‌ನ ಟ್ರಸ್ಟೀ ಭಾರ್ಗವಿ ಎಸ್. ರಾವ್, ಪ್ರಸನ್ನ, ಅಜಾಕ್ಸ್ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ, ತಾಲೂಕು ಸೇವಾ ಸಮಿತಿ ಕೃಷ್ಣಪ್ರಸಾದ್ ಇದ್ದರು.
ಇಲಾಖೆಗಳ ಸಹಕಾರ ದೊರೆಯುತ್ತಿಲ್ಲ: ಚಿದಾನಂದ್
ದೊಡ್ಡಬಳ್ಳಾಪುರದಲ್ಲಿ ಹಲವಾರು ಪರಿಸರ ಸಂಘಟನೆ, ಪರಿಸರಾಸಕ್ತರಿಂದ ಕೆರೆಗಳ ಪುನಶ್ಚೇತನ ಮೊದಲಾದ ಕಾರ್ಯಗಳಾಗುತ್ತಿವೆ. ಆದರೆ ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಸಹಕಾರ ದೊರೆಯುತ್ತಿಲ್ಲ. ಕೆರೆ ಸಂರಕ್ಷಣೆ ಸಮಿತಿಯ ಹೆಚ್ಚಿನ ಬೆಂಬಲ ದೊರೆತರೆ ಇನ್ನಷ್ಟು ಪರಿಸರ ಉಳಿಸುವ ಕಾರ್ಯಗಳಾಗುತ್ತವೆ ಎಂದು ಯುವ ಸಂಚಲನದ ಅಧ್ಯಕ್ಷ ಚಿದಾನಂದ್ ಹೇಳಿದರು.