Advertisement

ಮೊಳಹಳ್ಳಿ: ಹಕ್ಕು ಪತ್ರ ಸಿಗಲಿ, ನೀರಿನ ಕೊರತೆ ನೀಗಲಿ

02:58 PM Aug 08, 2022 | Team Udayavani |

ತೆಕ್ಕಟ್ಟೆ: ಮೊಳಹಳ್ಳಿ ಗ್ರಾ.ಪಂ. ಸೀತಾನದಿಯ ತಟದಲ್ಲಿದೆ. ಇಲ್ಲಿನ ಹೆಚ್ಚಿನ ಜನ ಅವಲಂಬಿಸಿರುವುದು ಕೃಷಿಯನ್ನು. ಜತೆಗೆ ತೋಟಗಾರಿಕೆ, ಹೈನುಗಾರಿಕೆ ಇಲ್ಲಿನವರ ಆರ್ಥಿಕ ಶಕ್ತಿಯಾಗಿದೆ. ಮರತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಶಕ್ತಿ ಗಣಪತಿ ದೇವಸ್ಥಾನ, ಶಿವರಾಯನ ಗರಡಿ ಈ ಗ್ರಾಮದ ಆರಾಧ್ಯ ದೇಗುಲ-ದೈವಸ್ಥಾನಗಳು.

Advertisement

ಗ್ರಾಮದಲ್ಲಿ ಜನಸಂಖ್ಯೆ 4,079. 5,051.49 ಹಕ್ಟೇರ್‌ ವಿಸ್ತೀರ್ಣ. ಕೃಷಿ ಅವಲಂಬಿತ ಗ್ರಾಮ. ಶೇ. 50 ರಷ್ಟು ಪ್ರದೇಶ ಕಸ್ತೂರಿ ರಂಗನ್‌ ವರದಿ ಯಂತೆ ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಸುಮಾರು 119 ಕುಟುಂಬಗಳು ಸರಕಾರಿ ನಿವೇಶನದಲ್ಲಿ ಮನೆ ನಿರ್ಮಿಸಿ ವಾಸ್ತವ್ಯವಿದ್ದರೂ ಸೂಕ್ತ ದಾಖಲೆಯ ಕೊರತೆ ಯಿಂದಾಗಿ ಹಕ್ಕು ಪತ್ರ ದೊರೆತಿಲ್ಲ.

ಗ್ರಾಮದಲ್ಲಿ ರಸ್ತೆಯೇನೋ ಪರವಾಗಿಲ್ಲ. ಆದರೆ ಬೇಸಗೆಯಲ್ಲಿ ಈ ಪರಿಸರದಲ್ಲಿ ಅಂತರ್ಜಲಮಟ್ಟ ಕುಸಿತವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ. ಇನ್ನು ಗ್ರಾ.ಪಂ ವ್ಯಾಪ್ತಿಯ ಗಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಸುಮಾರು 5 ಕಿ.ಮೀ. ದೂರದ ಬಿದ್ಕಲ್‌ಕಟ್ಟೆಯೆಡೆಗೆ ಕ್ರಮಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಈ ಗ್ರಾಮದಲ್ಲಿ ಒಂದೇ ಶ್ಮಶಾನಗಳಿದ್ದು ವೈಜ್ಞಾನಿಕವಾಗಿ ಇನ್ನೊಂದು ಶ್ಮಶಾನ ನಿರ್ಮಿಸ ಬೇಕಿದೆ. ಇದರೊಂದಿಗೆ ಖಾಸಗಿ ಬಸ್‌ ಸಂಚಾರ. ಪಶು ಚಿಕಿತ್ಸಾ ಕೇಂದ್ರದ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕೆಂಬುದು ಸ್ಥಳೀಯರ ಬಹುದಿನದ ಬೇಡಿಕೆ. ಗ್ರಾಮದಲ್ಲಿ ಜಲ ಜೀವನ್‌ ಮಿಷನ್‌ ಅಡಿಯಲ್ಲಿ ನೀರಿನ ಟಾಂಕಿಯೂ ನಿರ್ಮಾಣವಾಗಿದೆ.

ಕೆರೆ ಹಾಗೂ ಮದಗ ಪುನಃಶ್ಚೇತನ

Advertisement

ಮೊಳಹಳ್ಳಿಯ ಜಲಮೂಲಗಳಲ್ಲಿ ಒಂದಾದ ಸುಮಾರು 4 ಎಕರೆಗೂ ಅಧಿಕ ವಿಸ್ತೀರ್ಣದ ಹುಂತನಕೆರೆ, 4.15 ಎಕರೆ ವಿಸ್ತೀರ್ಣದ ಮರಾತೂರು ತೆಕ್ಕೋಡ್‌ ಕೆರೆ, ಮಾರುಕೆರೆಗಳನ್ನು ಉಳಿಸಿಕೊಳ್ಳಬೇಕಿದೆ. ತಂತ್ರಜ್ಞಾನ ಸಮರ್ಪಕ ವಾಗಿ ಬಳಸಿ ವೈಜ್ಞಾನಿಕವಾಗಿ ವಾರಾಹಿ ಕಾಲುವೆ ನೀರು ಹರಿಸಿದರೆ ಗ್ರಾಮದ ಅಂತರ್ಜಲ ವೃದ್ಧಿಯಾಗಿ ಬೇಸಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬಹುದು.

ನೆಟ್‌ವರ್ಕ್‌ ಸಮಸ್ಯೆ

ಅಭಿವೃದ್ಧಿ ಹೊಂದುತ್ತಿರುವ ಈ ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆ ಬಹಳಷ್ಟಿದೆ. ರಾತ್ರಿ ವಿದ್ಯುತ್‌ ಹೋದರೆ ಬೆಳಗ್ಗೆಯಾದರೂ ಬಾರದು. ಇದ ರೊಂದಿಗೆ ಈಗ ವರ್ಕ್‌ ಫ್ರಂ ಹೋಂ ನಲ್ಲಿ ಸಾಕಷ್ಟು ಖಾಸಗಿ ಉದ್ಯೋಗಿಗಳು ಗ್ರಾಮದಲ್ಲಿ ಕಾರ್ಯ ನಿರತರಾಗಿದ್ದಾರೆ. ಆದರೆ ನೆಟ್‌ ವರ್ಕ್‌ ಕೊರತೆಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯೂ ಬಗೆಹರಿಯಬೇಕಿದೆ.

ದಟ್ಟ ಅಡವಿ ಪ್ರದೇಶ

ದಟ್ಟಡವಿಯಲ್ಲಿ ಮೋಳ ಇರುವ ಪ್ರದೇಶ ಕ್ರಮೇಣ ಮೊಳಹಳ್ಳಿಯಾಯಿತಂತೆ. ಗ್ರಾಮವು ಸುಮಾರು 400 ವರ್ಷದ ಹಿಂದೆ ದಟ್ಟ ಅಡವಿಯಿಂದ ಕೂಡಿದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸಲು ಯಾವುದೇ ಮಾರ್ಗಗಳಿರಲಿಲ್ಲ. ಆ ಕಾಲದಲ್ಲಿ ಮರತೂರು, ಬೆದ್ರಾಡಿ ಮಾರ್ಗವು ತುಂಬಾ ಪ್ರಸಿದ್ಧಿಯಾಗಿದ್ದು, ಇಲ್ಲಿನ ಗ್ರಾಮಸ್ಥರು ಬೆದ್ರಾಡಿಯಿಂದ ಹೊಳೆಯ ಮಾರ್ಗವಾಗಿ ದೋಣಿಯ ಮೂಲಕ ಸಂಚರಿಸುತ್ತಿದ್ದರು. ಈ ಪ್ರದೇಶವು ಸಂಪೂರ್ಣ ದಟ್ಟ ಡವಿಯಿಂದ ಕೂಡಿದ್ದು, ಕಾಡುಪ್ರಾಣಿಗಳಿಂದ ತುಂಬಿದ ಮೋಳ ರೀತಿಯಲ್ಲಿರುವುದರಿಂದ ಜನರು ಮೊಳಹಳ್ಳಿ ಎಂದು ಕರೆದು ಕಾಲಕ್ರಮೇಣ ಮೊಳಹಳ್ಳಿ ಗ್ರಾಮ ಎನ್ನುವ ಹೆಸರು ಅಸ್ತಿತ್ವಕ್ಕೆ ಬಂದು ಎನ್ನುವ ಪ್ರತೀತಿ ಇದೆ.

ಹಕ್ಕುಪತ್ರವಿಲ್ಲದೆ ಸಮಸ್ಯೆ: ಗ್ರಾಮದಲ್ಲಿ ಶೇ.50ರಷ್ಟು ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಗೆ ಬರುವುದರಿಂದ ಸಮರ್ಪಕ ದಾಖಲೆ ಸಮಸ್ಯೆಯಿಂದಾಗಿ ಇಲ್ಲಿನ ಬಡವರು ಹಕ್ಕುಪತ್ರವಿಲ್ಲದೇ ಸರಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.-ಇಂದಿರಾ ಯು. ಶೆಟ್ಟಿ, ಅಧ್ಯಕ್ಷೆ, ಗ್ರಾ.ಪಂ.ಮೊಳಹಳ್ಳಿ

ಸಂಪರ್ಕ ಸೇತುವೆ ಆಗಲಿ: ಮರತೂರಿನ ಕುಂದಬೆಟ್ಟು, ಕತ್ಕೋಡು ನಡುವೆ ವಾರಾಹಿ ನದಿಗೆ ಸಂಪರ್ಕ ಸೇತುವೆ ಆಗಲಿ. ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ವಾರಾಹಿ ನೀರು ಗ್ರಾಮದ ಕೆರೆಗಳಿಗೆ ನೀರು ಹರಿಸಿದರೆ ಅಂತರ್ಜಲ ವೃದ್ಧಿಯಾಗಲಿದೆ.-ಶಾಂತಾರಾಮ ಶೆಟ್ಟಿ , ಮರತೂರು.

-ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next