ಹಾವೇರಿ: ಕೋವಿಡ್‌ನಂತಹ ಸಂದರ್ಭಗಳಲ್ಲಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಅಡುಗೆ ಸಿಬ್ಬಂದಿ ಅಡುಗೆ ಕೊಣೆ ಹಾಗೂ ಆಹಾರ ತಯಾರಿಕೆಯಲ್ಲಿ ಸ್ವಚ್ಛತೆಯ ಜೊತೆಗೆ ವೈಯಕ್ತಿಕ ಸ್ವತ್ಛತೆಗೂ ಆದ್ಯತೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಸಲಹೆ ನೀಡಿದರು.
ನಗರದ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ನಡೆದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಅಡುಗೆ ಸಿಬ್ಬಂದಿಗೆ ಮಕ್ಕಳ ಆರೋಗ್ಯ ಕಾಪಾಡುವ ಗುರುತರ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿಯಿಂದ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಅಡುಗೆ ಸಿಬ್ಬಂದಿ ಯಾವ ತರಕಾರಿಯಲ್ಲಿ ಯಾವ ಪೌಷ್ಟಿಕಾಂಶಗಳಿವೆ ಎಂಬ ಮಾಹಿತಿ ಹೊಂದಿರಬೇಕು. ಮಕ್ಕಳಿಗೆ ಆರೋಗ್ಯಪೂರ್ಣ ಹಾಗೂ ಶುಚಿ ಮತ್ತು ರುಚಿಕರ ಆಹಾರ ತಯಾರಿಕೆಯತ್ತ ಗಮನ ಹರಿಸಬೇಕೆಂದು ಹೇಳಿದರು.
ಕೋವಿಡ್ ಅಲೆ ಮತ್ತೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಪ್ರತಿಯೊಬ್ಬ ಅಡುಗೆಯವರು ಎರಡು ಡೋಸ್ ಕೋವಿಡ್ ಲಸಿಕೆ ಪಡೆಯಬೇಕು. ಮಾಸ್ಕ್ ಹಾಗೂ ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.
15 ವರ್ಷ ಮೇಲ್ಪಟ್ಟ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಿದೆ. ತಮ್ಮ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸುವಂತೆ ಮನವಿ ಮಾಡಿದರು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಅಕ್ಷರ ದಾಸೋಹ ತಾಲೂಕು ಮಟ್ಟದ ಅಧಿಕಾರಿ ಪಿ.ಎಸ್.ಬಿದರಿ, ಹಿರಿಯ ಆರೋಗ್ಯ ನಿರೀಕ್ಷಕ ಅಮೃತಗೌಡ, ಇಸಿಒ ಮಂಜುನಾಥ, ಚಂದ್ರಗೌಡ ಪಾಟೀಲ ಇತರರು
ಇದ್ದರು.