Advertisement

ಕನ್ನಡ ಭಾಷಾ ಬಳಕೆ ಕಾಯ್ದೆ ಎಂದಾಗಲಿ

11:18 PM Oct 31, 2022 | Team Udayavani |

ಸಮಗ್ರ ಕನ್ನಡಭಾಷಾ ಬಳಕೆ ಮಸೂದೆ ರೂಪಿಸಿ ಕನ್ನಡಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಆ ಕಾಯ್ದೆಯಡಿ ತರಬೇಕೆಂಬುದು ಬಹಳ ವರ್ಷಗಳ ಒತ್ತಾಯ. 2015ರಲ್ಲಿ ಕೇರಳ ರಾಜ್ಯ ಸರಕಾರ “THE MALAYALAM LANGUAGE (DISSEMINATION AND ENRICHMENT) BILL, 2015” ರೂಪಿಸಿತು. ಅದೇ ಮಾದರಿಯ ಕಾಯಿದೆಯನ್ನು ರೂಪಿಸಿವಂತೆ ಕನ್ನಡ ಸಂಘಟನೆಗಳು ಒತ್ತಾಯಿಸಿದವು.

Advertisement

ಬಹಳ ವರ್ಷಗಳಿಂದ ಚರ್ಚೆಯಲ್ಲಿದ್ದ ಈ ಕಾಯಿದೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಅವರು ಆಸಕ್ತಿ ವಹಿಸಿ, ಅನುಸರಿಸಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ, 2022ವನ್ನು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಿದರು. ಸರಕಾರ ಕೆಲವು ಮಾರ್ಪಡುಗಳೊಡನೆ ಸದನದಲ್ಲಿ ಮಂಡಿಸಿದೆ. ಈ ಮಸೂದೆಗೆ ಇನ್ನು ಕೆಲವು ಮಾರ್ಪಾಡುಗಳ ಅಗತ್ಯವಿದೆ. ನನ್ನ ದೃಷ್ಟಿಯಲ್ಲಿ ಈ ಮಾರ್ಪಾಡುಗಳು ಅಗತ್ಯ.

ಒಂದು ಭಾಷೆ , ಸಮುದಾಯದ ಅಭಿವೃದ್ಧಿ ರಕ್ಷಣೆಯಾಗ ಬೇಕಾದರೆ ಆ ಸಮುದಾಯದ ಪಾಲ್ಗೊಳ್ಳುವಿಕೆ ಅತ್ಯಗತ್ಯ ಆದರೆ ಈ ಮಸೂದೆಯಲ್ಲಿ ಸೂಚಿಸಿರುವ ಜಾರಿ ಸಮಿತಿಗಳಲ್ಲಿ ಅಧಿಕಾರಿಗಳೇ ತುಂಬಿಕೊಂಡಿದ್ದಾರೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಕೈಬಿಟ್ಟಿರುವುದು, ಸಚಿವ ಸ್ಥಾನವಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಸದಸ್ಯರನ್ನಾಗಿ ಮಾಡಿದ್ದು ಏಕೆ? ಪರಿಭಾಷೆಗಳಲ್ಲಿ “”ಕನ್ನಡಿಗ” ಎಂದರೆ…. ರಾಜ್ಯದಲ್ಲಿ 15 ವರ್ಷಗಳ ಕಾಲಗಳ ಕಾಲ ವಾಸವಾಗಿರಬೇಕು ಮತ್ತು ಕನ್ನಡ ಓದುವ ಮತ್ತು ಬರೆಯುವ ಜ್ಞಾನ ಹೊಂದಿರಬೇಕು ಎಂದಿದೆ. ಇದನ್ನು ಎಸ್‌.ಎಸ್‌.ಎಲ್‌.ಸಿ ಅಥವಾ ತತ್ಸಮನಾದ ಪರೀಕ್ಷಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಸಿಸಿರಬೇಕು ಎಂದು ಸೇರಿಸಬೇಕು ಮತ್ತು ಹೊರನಾಡ ಕನ್ನಡಿಗರಿಗೂ ಇದನ್ನು ಅನ್ವಯಿಸಿ ಅವರನ್ನು ಇದಕ್ಕೆ ಸೇರಿಸಬೇಕು.(ಪರಿಷ್ಕೃತ ಮಹಿಷಿ ವರದಿಯಲ್ಲಿರುವ ವಿವರಣೆಯನ್ನು ಗಮನಿಸಬೇಕು).

ನಿವೃತ್ತ ಅಧಿಕಾರಿಗಳು, ನೌಕರರಿಗೆ ಅವಕಾಶ ಕಲ್ಪಿಸುವ ರಾಜಭಾಷಾ ಆಯೋಗ ರಚನೆ ಮಾಡುವ ಅಗತ್ಯ ಇಲ್ಲ. ಅದು ನಿವೃತ್ತರ ಪುನರ್ವಸತಿ ಕೇಂದ್ರವಾಗಲಿದೆ. ಸರಕಾರಕ್ಕೆ ಅನಗತ್ಯ ಆರ್ಥಿಕ ಹೊರೆಯಾಗಲಿದೆ (ರಾಜಾಭಾಷಾ ಅಯೋಗ: ಅಂಶವನ್ನು ಪೂರ್ಣವಾಗಿ ಕೈಬಿಡಬೇಕು). ಕನ್ನಡಿಗರಿಗೆ ಉದ್ಯೋಗದ ಮೀಸಲಾತಿ, ರಾಜ್ಯ ಸರಕಾರ ತೆರಿಗೆ ವಿನಾಯಿತಿ, ತೆರಿಗೆ ರಿಯಾಯಿತಿ, ಇನ್ನಿತರ ನೆರವು ಪಡೆಯುವ ಉದ್ಯಮಗಳಿಗೆೆ ಸೀಮಿತವಾಗಿದೆ. ಇದನ್ನು ಮಹಿಷಿ ವರದಿಯಲ್ಲಿರುವಂತೆ ಎಲ್ಲ ಉದ್ಯೋಗದಾತರಿಗೂ ಅನ್ವಯಸಿಮಾಡಬೇಕು.

ರಾಜ್ಯದೊಳಗಿನ‌ 100ಕ್ಕಿಂತ ಹೆಚ್ಚು ಜನ ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕಾ ಕೇಂದ್ರ ಸ್ವಾಮ್ಯದ ಕಚೇರಿಗಳು ಮತ್ತು ಬ್ಯಾಂಕ್‌ಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡೇತರ ಉದ್ಯೋಗಿಗಳಿಗಾಗಿ ಕನ್ನಡ ಕಲಿಕಾ ಘಟಕ ವನ್ನು ಸ್ಥಾಪಿಸಬೇಕು ಎಂಬುದು ಸ್ವಾಗತಾರ್ಹ. ಆದರೆ ಹೆಚ್ಚು ಕನ್ನಡೇತರರು ಇರುವ ಖಾಸಗಿ ವಲಯವನ್ನು ಇದರಲ್ಲಿ ಸೇರಿಸದಿರುವುದು ಅಪಾಯಕಾರಿ. ರಾಜ್ಯದಲ್ಲರಿವ ಎಲ್ಲ ಖಾಸಗಿ, ಕೇಂದ್ರ ಸರಕಾರದ ಉದ್ಯಮ ಎಂದಾಗಬೇಕು. ಅಪ್ರಂಟಿಸ್‌ ಅಧಿನಯಮ, 1961ರ ಮೇರೆಗೆ ಕಾರ್ಯ ನಿರ್ವಹಿಸುವ ಎಲ್ಲ ಕೈಗಾರಿಕೆಗಳು ಅಪ್ರಂಟಿಸ್‌ ತರಬೇತಿ ಯನ್ನು ನೀಡುವಲ್ಲಿ ಕನ್ನಡಿಗರಿಗೆ ಆದ್ಯತೆಯನ್ನು ನೀಡ ಬೇಕು ಎಂದಿದೆ. ಈ ಅಧಿನಿಯಮಕ್ಕೆ 2014ರಲ್ಲಿ ತಿದ್ದು ಪಡಿಯಾಗಿದೆ ( APRENTICES AMENDMENT ACT 2014 Dec 8, 2014) ಅದನ್ನು ಗಮನಸಿ ಸೇರಿಸಬೇಕು.
ಯಾವುದೇ ಕಾಯಿದೆ ಸಂಪೂರ್ಣವಾಗಲು ಸಾಧ್ಯವಿಲ್ಲ. ಈ ಮಸೂದೆಗೆ ಸೇರಿಸಲೇ ಬೇಕಾದ ಕನ್ನಡಕ್ಕೆ ಸಂಬಂಧಿಸಿದ ಹಲವು ಸಂಗತಿಗಳಿವೆ. ಅಸ್ಪಷ್ಟ ವಾಕ್ಯಗಳೂ ಇವೆ. ಅವೆಲ್ಲವನ್ನು ವಿವರಿಸದರೆ ದೊಡ್ಡ ಲೇಖನವಾಗುತ್ತದೆ. ಈ ಕಾಯಿದೆಯನ್ನು ಕನ್ನಡ ಭಾಷಾ(ಪ್ರಸಾರ ಮತ್ತು ವ್ಯಾಪಕ) ಬಳಕೆ ಕಾಯಿದೆ ಎನ್ನುವುದು ಸೂಕ್ತ.

Advertisement

-ರಾ.ನಂ.ಚಂದ್ರಶೇಖರ
ಲೇಖಕರು ಹಾಗೂ ಕನ್ನಡಪರ ಚಿಂತಕರು

 

Advertisement

Udayavani is now on Telegram. Click here to join our channel and stay updated with the latest news.

Next