ಗುಜರಾತ್ ವಿಧಾನಸಭೆ ಚುನಾವಣೆಗೆ ಬರೀ ಒಂಬತ್ತು ದಿನಗಳು ಬಾಕಿಯಿರುವಾಗ ಜಿಡಿಪಿ ಏರಿಕೆಯಾಗಿರುವ ಶುಭ ಸುದ್ದಿ ಹೊರಬಿದ್ದಿರುವುದು ಬಿಜೆಪಿ ಪಾಲಿಗೆ ಭಾರೀ ನಿರಾಳತೆಯನ್ನು ಒದಗಿಸಿದೆ.
ಸತತ ಐದು ತ್ತೈಮಾಸಿಕಗಳಲ್ಲಿ ಕುಸಿತವನ್ನು ಕಂಡಿದ್ದ ದೇಶದ ಆರ್ಥಿಕ ಅಭಿವೃದ್ಧಿಯ ಮಾಪಕವಾಗಿರುವ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಸೆಪ್ಟೆಂಬರ್ ತ್ತೈಮಾಸಿಕದಲ್ಲಿ ತುಸು ಚೇತರಿಕೆ ಕಂಡಿರುವುದು ದೇಶದ ಆರ್ಥಿಕ ಸ್ಥಿತಿ ಮತ್ತೆ ಹಳಿಗೆ ಮರಳುತ್ತಿರುವುದರ ಶುಭಸೂಚನೆ. ಜೂನ್ ತ್ತೈಮಾಸಿಕದಲ್ಲಿ ಅತ್ಯಂತ ಕಡಿಮೆ ಶೇ.5.3ಕ್ಕೆ ಇಳಿದಿದ್ದ ಜಿಡಿಪಿ ಸೆಪ್ಟೆಂಬರ್ ತ್ತೈಮಾಸಿಕದಲ್ಲಿ ಶೇ.6.3ಕ್ಕೇರಿದೆ. ವಿಪಕ್ಷಗಳು ಮಾತ್ರವಲ್ಲದೆ ಬಿಜೆಪಿಯವರೇ ಆದ ಯಶವಂತ್ ಸಿನ್ಹ, ಶತ್ರುಘ್ನ ಸಿನ್ಹ ಮತ್ತಿತರರಿಂದ ಜಿಡಿಪಿ ಕುಸಿತದ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನರೇಂದ್ರ ಮೋದಿ ಸರಕಾರಕ್ಕೆ ಈ ಏರಿಕೆ ತೀರಾ ಅಗತ್ಯವಾಗಿದ್ದ ಚೈತನ್ಯವನ್ನು ತುಂಬಿದೆ. ನೋಟು ಅಪಮೌಲ್ಯ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದಾಗಿರುವ ಹಿಂಜರಿತ ತಾತ್ಕಾಲಿಕ ಎನ್ನುವುದನ್ನು ಜಿಡಿಪಿ ಏರಿಕೆ ಸಾಬೀತುಪಡಿಸಿದೆ. ಇದಕ್ಕೂ ಮೊದಲು ಅಮೆರಿಕದ ಮೂಡೀಸ್ ಸಂಸ್ಥೆ 13 ವರ್ಷಗಳ ಅನಂತರ ಭಾರತದ ಆರ್ಥಿಕ ಸ್ಥಿತಿ ಸುಸ್ಥಿರ ಮಟ್ಟಕ್ಕೆ ಏರಿದೆ ಎಂದು ಹೇಳಿತ್ತು. ವಿಶ್ವಬ್ಯಾಂಕ್ ಮತ್ತು ಸ್ಟಾಂಡರ್ಡ್ ಆ್ಯಂಡ್ ಪೂರ್ ಸಂಸ್ಥೆಯೂ ಭಾರತದ ಆರ್ಥಿಕತೆಗೆ ಧನಾತ್ಮಕ ಶ್ರೇಣಿಯನ್ನು ನೀಡಿತ್ತು. ಇದೀಗ ಜಿಡಿಪಿ ಬೆಳವಣಿಗೆ ಈ ಸಂಸ್ಥೆಗಳು ನೀಡಿರುವ ವರದಿಗಳಿಗೆ ಪೂರಕವಾಗಿದೆ.
ಮೋದಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಠೆಯನ್ನು ಪಣವಾಗಿಟ್ಟು ಹೋರಾಡುತ್ತಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಬರೀ ಒಂಬತ್ತು ದಿನಗಳು ಬಾಕಿಯಿರುವಾಗ ಜಿಡಿಪಿ ಏರಿಕೆಯಾಗಿರುವ ಶುಭ ಸುದ್ದಿ ಹೊರಬಿದ್ದಿರುವುದು ಬಿಜೆಪಿ ಪಾಲಿಗೆ ಭಾರೀ ನಿರಾಳತೆಯನ್ನು ಒದಗಿಸಿದೆ. ಜಿಎಸ್‌ಟಿ ಮತ್ತು ನೋಟು ಅಪಮೌಲ್ಯದಿಂದ ದೇಶದ ಆರ್ಥಿಕತೆ ದಿವಾಳಿಯೆದ್ದಿದೆ ಎನ್ನುವುದೇ ಗುಜರಾತ್ ಚುನಾವಣೆಯಲ್ಲಿ ವಿಪಕ್ಷಗಳ ಮುಖ್ಯ ಅಸ್ತ್ರಗಳಾಗಿದ್ದವು. ಆದರೆ ಬೆನ್ನುಬೆನ್ನಿಗೆ ಬಂದಿರುವ ನಾಲ್ಕು ವರದಿಗಳು ಈ ಅಸ್ತ್ರವನ್ನೇ ಠುಸ್ ಮಾಡಿ ಬಿಟ್ಟಿವೆ. ಇನ್ನು ವಿಪಕ್ಷಗಳು ಮೋದಿ ಸರಕಾರದ ಆರ್ಥಿಕ ನೀತಿಗಳ ಕುರಿತು ಯಾವುದೇ ಟೀಕೆಗಳನ್ನು ಮಾಡಿದರೂ ಅದು ರಾಜಕೀಯ ಉದ್ದೇಶಿತವಲ್ಲದೆ ಬೇರೆ ಯಾವ ನೈಜ ಕಾಳಜಿಯನ್ನು ಹೊಂದಿಲ್ಲ ಎನ್ನುವುದು ಸಾಬೀತಾಗುತ್ತದೆ.
ಉತ್ಪಾದನೆ, ವಿದ್ಯುತ್, ಅನಿಲ, ನೀರು ಪೂರೈಕೆ, ಇತರ ಸೇವೆಗಳು, ವ್ಯಾಪಾರ, ಹೊಟೇಲ್ ಉದ್ಯಮ, ಸಂವಹನ ಮತ್ತು ಪ್ರಸಾರ ಸಂಬಂಧಿ ಸೇವೆಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಆಗಿರುವ ಅಭಿವೃದ್ಧಿ ಜಿಡಿಪಿ ಹೆಚ್ಚಳಕ್ಕೆ ಕಾರಣವಾಗಿವೆ. ಆದರೆ ಇದೇ ಅವಧಿಯಲ್ಲಿ ಕೃಷಿ ಮತ್ತು ಮೀನುಗಾರಿಕೆ, ರಿಯಲ್ ಎಸ್ಟೇಟ್ ಸೇರಿದಂತೆ ಕೆಲವು ಪ್ರಮುಖ ವಲಯಗಳ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎನ್ನುವ ಅಂಶವನ್ನು ಕೂಡ ಕೇಂದ್ರ ಸಾಂಖೀಕ ಕಚೇರಿಯ ವರದಿ ತಿಳಿಸಿದೆ. ಅದರಲ್ಲೂ ಕಳೆದ ಇದೇ ಅವಧಿಯ ತ್ತೈಮಾಸಿಕದಲ್ಲಿ ಶೇ.4.1ರಷ್ಟಿದ್ದ ಕೃಷಿ ಮತ್ತು ಮೀನುಗಾರಿಕೆ ಅಭಿವೃದ್ಧಿ ಈ ಅವಧಿಯಲ್ಲಿ ಶೇ.1.7ಕ್ಕೆ ಕುಸಿದಿರುವುದು ಹೆಚ್ಚು ಚಿಂತಿಸಬೇಕಾದ ವಿಚಾರ.
ಮುಖ್ಯವಾಗಿ ಅಸಂಘಟಿತ ವಲಯದ ಅಭಿವೃದ್ಧಿ ಇನ್ನೂ ವೇಗ ಪಡೆದುಕೊಂಡಿಲ್ಲ ಎನ್ನುವುದು ಅಂಕಿಅಂಶದಿಂದ ತಿಳಿದು ಬರುತ್ತಿದೆ. ಅತಿ ಹೆಚ್ಚು ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿರುವುದು ಅಸಂಘಟಿತ ವಲಯ. ಹೀಗಾಗಿ ಈ ವಲಯ ಅಭಿವೃದ್ಧಿಯಲ್ಲಿ ನಿರಂತರವಾಗಿ ಹಿಂದುಳಿದರೆ ಅದರ ಪರಿಣಾಮ ನೇರವಾಗಿ ಜನಸಾಮಾನ್ಯರ ಮೇಲಾಗುತ್ತದೆ. ಮೋದಿ ಪದೇ ಪದೇ 2022ಕ್ಕಾಗುವಾಗ ರೈತರ ಆದಾಯವನ್ನು ಇಮ್ಮಡಿಗೊಳಿಸುವ ಭರವಸೆಯನ್ನು ನೀಡುತ್ತಿದ್ದಾರೆ. ಆದರೆ ಕೃಷಿ ಕ್ಷೇತ್ರದ ಅಭಿವೃದ್ಧಿ ಹಿಮ್ಮುಖವಾಗಿ ಚಲಿಸುತ್ತಿರುವಾಗ ರೈತರ ಆದಾಯ ಇಮ್ಮಡಿಯಾಗುವುದು ಸಾಧ್ಯವೇ? ಈ ವಿಚಾರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾಡಿರುವ ಟೀಕೆಗಳನ್ನು ತುಸು ಗಂಭೀರವಾಗಿ ಪರಿಗಣಿಸುವುದು ಒಳ್ಳೆಯದು.
ಸ್ಥಿತ್ಯಂತರದ ಅವಧಿಯಲ್ಲಿ ತಾತ್ಕಾಲಿಕ ಹಿನ್ನಡೆಗಳಾಗುವುದು ಸಹಜ ಬೆಳವಣಿಗೆ. ಯಾವುದೇ ಕ್ಷೇತ್ರಕ್ಕೂ ಅನ್ವಯಿಸಿ ಈ ಮಾತನ್ನು ಹೇಳಬಹುದು. ಅದರಲ್ಲೂ 125 ಕೋಟಿ ಜನರಿರುವ ದೇಶದ ಇಡೀ ಆರ್ಥಿಕ ವ್ಯವಸ್ಥೆಯನ್ನು ಸ್ಥಿತ್ಯಂತರಕ್ಕೆ ಒಳಪಡಿಸುವುದು ಅತ್ಯಂತ ಸವಾಲಿನ ಕೆಲಸ. ಈ ಅವಧಿಯಲ್ಲಾಗಿರುವ ಹಿನ್ನಡೆಯನ್ನು ಬೆಟ್ಟದಷ್ಟು ಮಾಡಿ ಟೀಕಿಸಿದವರು ಈಗ ಏನು ಹೇಳುತ್ತಾರೆ? ದೇಶದ ಭವಿಷ್ಯ ಉಜ್ವಲವಾಗಬೇಕೆಂಬ ದೂರದೃಷ್ಟಿಯಿಂದ ಕೈಗೊಳ್ಳುವ ದಿಟ್ಟ ನಿರ್ಧಾರಗಳ ಪರಿಣಾಮ ಪೂರ್ಣವಾಗಿ ಹೊರಹೊಮ್ಮುವ ತನಕ ಕಾಯುವ ತಾಳ್ಮೆಯಿಲ್ಲದೆ ತಾತ್ಕಾಲಿಕ ಲಾಭಕ್ಕಾಗಿ ನಿಂದಿಸುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನೋಟು ಅಪಮೌಲ್ಯದಿಂದ ದೇಶದ ಆರ್ಥಿಕತೆ ಕಾಳಧನದ ಪಿಡುಗಿನಿಂದ ಮುಕ್ತಗೊಂಡು ಹೆಚ್ಚು ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗುತ್ತಿದೆ.