ಅಂಚೆಯವನನ್ನು ನಿಮ್ಮ ಮನೆಯ ಮುಂದೆ ನಿಲ್ಲಿಸಿ, ಪತ್ರಗಳನ್ನು ಹುಡುಕಿ ಹುಡುಕಿ ನನ್ನದಿದೆಯಾ ಎಂದು ಕೇಳುತ್ತೀನಿ. ನನಗ್ಯಾವ ಪತ್ರ ಬರಬೇಕು? ಅಲ್ಲಿ ನಿಲ್ಲಲು ಅವೆಲ್ಲಾ ಒಂದು ನೆಪವಷ್ಟೇ. ಪಾಪ, ಪೋಸ್ಟ್ ಮ್ಯಾನ್‌ನನ್ನನ್ನು ಹುಚ್ಚನಂತೆ ನೋಡಿ ಹೋಗುತ್ತಾನೆ.
ಹುಡುಗಿ,
ನನಗೆ ಈ ಜಗತ್ತಿನಲ್ಲಿ ನಿಮ್ಮನೆ ಓಣಿಯಷ್ಟು ಖುಷಿ ಕೊಡುವ ಜಾಗ ಮತ್ತೂಂದಿಲ್ಲ. ಅಲ್ಲಿನ ಮಣ್ಣ ಪ್ರತಿ ಕಣಕ್ಕೂ ನನ್ನ ಹೆಜ್ಜೆಗಳ ಪರಿಚಯವಿದೆ. ಪ್ರತಿ ಇಳಿ ಸಂಜೆ ವೇಳೆಗೆ ನನ್ನ ಕಾಲುಗಳು ಅತ್ತ ನಡೆದುಬಿಡುತ್ತವೆ. ಮೆಟ್ಟಿದ ಚಪ್ಪಲಿಗಳನ್ನು ಎಲ್ಲೋ ಬಿಟ್ಟು ಬರಿಗಾಲಿನಲ್ಲಿ ಬಂದುಬಿಡುತ್ತೇನೆ. ನೀನು ನಡೆದ ನೆಲದ, ನಿನ್ನ ಹೆಜ್ಜೆ ಗುರುತಿನ ಮೇಲೆ ನನ್ನ ಪಾದಗಳನ್ನಿಟ್ಟು ಪುಳಕಿತನಾಗುತ್ತಾನೆ.
ನಿನ್ನ ನೋಡುವ ತವಕಕ್ಕೆ, ನಿನ್ನ ಕಣ್ಣಲ್ಲಿ ದೃಷ್ಟಿ ಕೂಡಿಸುವ ಆಸೆಗೆ ಇವೆಲ್ಲ ನೆವಗಳು ಮಾತ್ರ. ಓಣಿಯಲ್ಲಿ ಯಾರನ್ನೋ ಹುಡುಕುವಂತೆ ಮೆಲ್ಲಗೆ ಅಲೆಯುತ್ತೇನೆ. ನಿಮ್ಮ ಮನೆಯ ಮುಂದೆಯೇ ತುಸು ನಿಧಾನ. ವಾರೆಗಣ್ಣನ್ನು ನಿಮ್ಮ ಮನೆಯೆಡೆಗೆ ನೆಟ್ಟು, ರಸ್ತೆಗಷ್ಟೇ ಮುಖವಿಡುತ್ತೇನೆ. ಅರ್ಧ ತೆರೆದ ಬಾಗಿಲ ಹಿಂದೆ, ಗಾಳಿಗೆ ನಾಚಿ, ಚೂರುಚೂರೇ ಕದಲಿ ಮತ್ತೆ ಮುಚ್ಚಿಕೊಳ್ಳುವ ಕಿಟಕಿ ಪರದೆಗಳ ಹಿಂದೆ, ಬಾಲ್ಕನಿಯ ಹಸಿರು ಕುಂಡದ ಹಿಂದೆ ನೀ ಇರಬಹುದೆಂದು ಕಣ್ಣುಗಳು ಹುಡುಕುತ್ತವೆ.
ಸೋತು ಮನೆ ದಾರಿ ಹಿಡಿದ ಅಂಚೆಯವನನ್ನು ನಿಮ್ಮ ಮನೆಯ ಮುಂದೆ ನಿಲ್ಲಿಸಿ, ಪತ್ರಗಳನ್ನು ಹುಡುಕಿ ಹುಡುಕಿ ನನ್ನದಿದೆಯಾ ಎಂದು ಕೇಳುತ್ತೀನಿ. ನನಗ್ಯಾವ ಪತ್ರ ಬರಬೇಕು? ಅಲ್ಲಿ ನಿಲ್ಲಲು ಅವೆಲ್ಲಾ ಒಂದು ನೆಪವಷ್ಟೇ. ಪಾಪ, ಪೋಸ್ಟ್ ಮ್ಯಾನ್ ನನ್ನನ್ನು ಹುಚ್ಚನಂತೆ ನೋಡಿ ಹೋಗುತ್ತಾನೆ. ಶಾಲೆಯಿಂದ ಮರಳುವ ಪುಟಾಣಿ ಮಕ್ಕಳನ್ನು ನಿಮ್ಮ ಮನೆ ಎದುರು ತಡೆದು ನಿಲ್ಲಿಸಿ ಸುಮ್ಮನೆ ಮಾತು ಬೆಳೆಸುತ್ತೀನಿ. “ಡೈಲಿ ಈವಣ್ಣದೊಂದು ಕಾಟ’ ಎಂದು ಪಿಸುಗುಡುತ್ತಾ ಹೋಗುವ ಮಕ್ಕಳ ಮಾತನ್ನು ಕೇಳಿಸಿಕೊಂಡು ನಗುತ್ತೇನೆ. ನಿಮ್ಮ ಮನೆ ಮುಂದಿನ ಪೆಟ್ಟಿಗೆ ಅಂಗಡಿಯಲ್ಲಿ ಸುಮ್ಮನೆ ಪತ್ರಿಕೆ ಹಿಡಿದು ನಿಲ್ಲುತ್ತೇನೆ. ಉಲ್ಟಾ ಹಿಡಿದು ನಿಂತ ಪತ್ರಿಕೆಯನ್ನು ಕಂಡು ಅಂಗಡಿಯವನು ನನ್ನನ್ನು ವಿಚಿತ್ರವಾಗಿ ನೋಡಿದ್ದನ್ನು ಗಮನಿಸಿ ಎಂಜಾಯ್ ಮಾಡಿದ್ದೇನೆ.
ನಿಮ್ಮ ಮನೆಯಿಂದ ನಿನ್ನ ಸಣ್ಣ ದನಿ ಕೇಳಿದರೂ ನನಗೆ ರೋಮಾಂಚನ. ಮೈ ರೋಮಗಳು ಎದ್ದು ನಿಲ್ಲುತ್ತವೆ. ಎಷ್ಟೋ ಬಾರಿ, ನಿನ್ನ ಹಾರಾಡುವ ಕೂದಲು, ಬಾಲ್ಕನಿಯಿಂದ ಕಾಣಿಸುವ ಉಂಗುರ ತೊಟ್ಟ ಆ ಚಂದದ ಕೈಗಳು, ಹಿಂಬದಿಯಿಂದಷ್ಟೇ ಕಾಣುವ ನೀನು, ನಿನ್ನ ತಂಗಿಯೊಡನೆ ಆಡುವ ಜಗಳದ ಮಾತು… ಎಲ್ಲವನ್ನೂ ಕೇಳಿಸಿಕೊಂಡು ಬಂದು, ಅವನ್ನೆಲ್ಲಾ ರೂಮಿನಲ್ಲಿ ಹರವಿಕೊಂಡು ಒಂದೊಂದನ್ನೇ ಸುಖೀಸುತ್ತೇನೆ.
ಹುಣ್ಣಿಮೆಯಂಥವಳೇ, ಅದೆಷ್ಟು ದಿನವಾಯಿತು ನಿನ್ನ ನೋಡಿ? ಕಾಲೇಜು ರಜೆಯೆಂದು ಮನೆ ಸೇರಿಕೊಂಡವಳು ಒಮ್ಮೆಯೂ ಆಚೆ ಇಣುಕಿಲ್ಲ. ಹೀಗಾದರೆ, ನಿನ್ನನ್ನು ನೋಡಿಯೇ ಬದುಕುವ ನನ್ನ ಪಾಡೇನು? ನಿನ್ನ ನಗುವಿಗಾಗಿ ಹಸಿದು ಇನ್ನೆಷ್ಟು ಸಂಕಷ್ಟಿಗಳನ್ನು ಆಚರಿಸಲಿ? ತಪ್ಪಿಯಾದರೂ ಒಮ್ಮೆ ಓಣಿಯ ಕಡೆ ಕತ್ತು ಹೊರಳಿಸು. ಹಸಿದವನಿಗೆ ಒಮ್ಮೆಯಾದರೂ ಹಬ್ಬದ ಊಟ ಸಿಗಲಿ.
ಸದಾ, ಚಿಂತಾಮಣಿ