Advertisement
ಅದರ ಭಾಗವೇ ಕಳೆದ ಬಾರಿಯ ಮಳೆಗಾಲದ ಕೊನೆಗೆ ನೀರಿಂಗಿಸುವ ತಂತ್ರಜ್ಞಾನ ಅಳವಡಿಸಿಕೊಂಡವರು ಕೆಲವರು ಇದ್ದಾರೆ. ಹಾಗೆ ಅಳವಡಿಸಿಕೊಂಡವರಿಗೆ ಈ ಬಾರಿಯ ಮಳೆಗಾಲದ ನೀರಿನ ಪ್ರಯೋಗ ಮೊದಲನೆಯದ್ದು. ಫಲಿತಾಂಶ ಮುಂದಿನ ಬೇಸಗೆಯಲ್ಲಿ ತಿಳಿಯಲಿದೆ.
ಉದಯವಾಣಿಯ ಅಭಿಯಾನ ದಿಂದ ಪ್ರೇರಣೆಗೊಂಡು ಕಾರ್ಯಾ ಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿ ದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
Related Articles
ಕಳೆದ ವರ್ಷ ನೀರಿನ ಕೊರತೆಯಾಗಿತ್ತು. ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಇನ್ನು ನನ್ನ ಗಿಡಗಳಿಗೆ ಎಲ್ಲಿಂದ. ನಮ್ಮ ಮನೆ ಬಾವಿಯಲ್ಲಿ ಫೆಬ್ರವರಿ ಅನಂತರ ಕುಡಿಯಲು ನೀರು ಇರುವುದಿಲ್ಲ. ವಕ್ವಾಡಿಯ ಶಾರದಾ ಅವರು ನೀರಿಂಗಿಸುತ್ತಿದ್ದಾರೆ ಎಂದು ತಿಳಿಯಿತು. ಆ ಪ್ರೇರಣೆಯಿಂದ ನಮ್ಮಲ್ಲೂ ನೀರಿಂಗಿಸಲು ಮನ ಮಾಡಿದೆವು ಎನ್ನುತ್ತಾರೆ ವಕ್ವಾಡಿಯ ಪದ್ಮಾವತಿ.
ಅವರು ಕಳೆದ ವರ್ಷ ಮಳೆಗಾಲದ ಆರಂಭದಲ್ಲಿ ಮನೆಯಲ್ಲಿ ತಾರಸಿ ನೀರು ಶುದ್ಧವಾಗಿ ಬಾವಿಗೆ ಹೋಗುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ. 1,500 ಚ.ಅಡಿಯ ತಾರಸಿ ನೀರು ಪೈಪ್ ಮೂಲಕ 200 ಲೀ. ಡ್ರಮ್‌ನಲ್ಲಿ ಹಾಕಿದ ಇದ್ದಿಲು, ಜಲ್ಲಿ ಕಲ್ಲು, ಹೊಯಿಗೆ ಮೂಲಕ ಶುದ್ಧವಾಗಿ ಬಾವಿಗೆ ಸೇರುವಂತೆ ಮಾಡಿದರು.
Advertisement
ಈ ವರ್ಷ ಯೋಜನೆ ಫಲ ನೀಡಿದೆ. ಫೆಬ್ರವರಿಯಲ್ಲಿ ನೀರಾರುತ್ತಿದ್ದ ಬಾವಿಯಲ್ಲಿ ಈ ಸಲ ಎಪ್ರಿಲ್ ಅಂತ್ಯದವರೆಗೂ ನೀರಿತ್ತು. ಕುಡಿಯಲು ಮಾತ್ರವಲ್ಲ ಗಿಡಗಳಿಗೂ ನೀರಿತ್ತು. ನಮ್ಮ ಮನೆಗಷ್ಟೇ ಅಲ್ಲ ಅಕ್ಕಪಕ್ಕದ ಐದಾರು ಮನೆಗೂ ಈ ಬಾವಿ ನೀರು ನೆರವಿಗೆ ಬಂತು ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಪದ್ಮಾವತಿ ಅವರು.
ಮಳೆ ಬರುವವರೆಗೂ ನೀರಿತ್ತುಪದ್ಮಾವತಿ ಅವರಿಗೆ ಪ್ರೇರಣೆಯಾದ ವಕ್ವಾಡಿಯ ಶಾರದಾ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಳೆಕೊಯ್ಲಿಗೆ ಮುಂದಾದವರು. ನೀರಿನ ಬಾಧೆ ಕಾಡಿದ ಕಾರಣ ಕಳೆದ ವರ್ಷ ಯೋಜನೆಯ ತಾಂತ್ರಿಕ ಪರಿಣತರ, ಕೃಷಿ ಅಧಿಕಾರಿ ಚೇತನ್ ಕುಮಾರ್ ಅವರ ಮಾರ್ಗದರ್ಶನ ಮೂಲಕ ನೀರಿಂಗಿಸುವ ಪದ್ಧತಿ ಜಾರಿಗೆ ತಂದರು. 1,500 ಚ.ಅಡಿ ತಾರಸಿ ನೀರನ್ನು 30 ಅಡಿ ಆಳದ ಬಾವಿಗೆ ಡ್ರಮ್ ಮೂಲಕ ಶುದ್ಧವಾಗುವಂತೆ ಮಾಡಿ ಹರಿಸಿದರು. ಪರಿಣಾಮವಾಗಿ ಈ ಬಾರಿ ಮಳೆಗಾಲ ತಡವಾಗಿ ಆರಂಭವಾದರೂ ಚಿಂತೆ ಮಾಡಲಿಲ್ಲ. ಅಲ್ಲಿವರೆಗೂ ಇವರ ಬಾವಿಯಲ್ಲಿ ನೀರಿನ ಕೊರತೆಯಾಗಿರಲಿಲ್ಲ. ಅಕ್ಕಪಕ್ಕದ ನಾಲ್ಕೈದು ಮನೆಗಳಿಗೂ ಕುಡಿಯಲು ನೀರು ಕೊಡುವಷ್ಟು ನೀರಿನ ಒರತೆಯಿತ್ತು. ಅಡಿಕೆ, ತೆಂಗು ಗಿಡಗಳಿಗೂ ಬೇಸಗೆಯ ಬಿಸಿ ತಣಿಸಲು ನೀರುಣಿಸಲು ಸಾಧ್ಯವಾಯಿತು ಎನ್ನುತ್ತಾರೆ ಶಾರದಾ ಅವರು. ಮುಂದಿನ ಬೇಸಗೆಗೆ ಚಿಂತೆಯಿಲ್ಲ
ಮಳೆಕೊಯ್ಲು ಮಾಡಿದರೆ ಪಂಚಾಯತ್‌ನಿಂದ ನೆರವು ದೊರೆಯುತ್ತದೆ ಎಂಬ ಮಾಹಿತಿಯಿತ್ತು. ಅದಕ್ಕಾಗಿ ಐದಾರು ಸಾವಿರ ರೂ. ಖರ್ಚು ಮಾಡಿ ಮಳೆಕೊಯ್ಲು ಮಾಡಿದೆವು. ಧ. ಗ್ರಾಮಾಭಿವೃದ್ಧಿ ಯೋಜನೆ ಯವರು 1 ಸಾವಿರ ರೂ. ಪ್ರೋತ್ಸಾಹ ಧನ ನೀಡಿದ್ದಾರೆ. ಪಂ.ಗೆ ಹೋದರೆ ಅಲ್ಲಿ ಕಾನೂನು ಮಾತನಾಡಿದರು. ಆರ್ಥಿಕ ಸಹಾಯ ನೀಡಲೇ ಇಲ್ಲ. ಹೀಗಂತ ವಿವರಿಸುತ್ತಾರೆ ಹೊಂಬಾಡಿ ಮಂಡಾಡಿ ಗ್ರಾ.ಪಂ. ವ್ಯಾಪ್ತಿಯ ಯಡಾಡಿ ಮತ್ಯಾಡಿಯ ಗುಡ್ಡೆಯಂಗಡಿಯ ಪ್ರೇಮಾ. ಕಳೆದ ವರ್ಷ ಮಳೆಗಾಲದ ಕೊನೆಗೆ ಮಳೆಕೊಯ್ಲು ಆರಂಭಿಸಿದರು. ಹಾಗಾಗಿ ಅದರ ಪೂರ್ಣಫಲ ಈ ಬಾರಿಯ ಮಳೆ ಗಾಲದ ನೀರುಳಿಸಿ ಮುಂದಿನ ಬೇಸಗೆಗೆ ದೊರೆಯಬೇಕಿದೆ. ಕಳೆದ ಅವಧಿಯಲ್ಲಿ ಮನೆ ಖರ್ಚಿಗೂ ಬಾವಿ ನೀರಿನ ಕೊರತೆಯಾಗಿತ್ತು. ಹಾಗಾಗಿ 1,900 ಚ.ಅಡಿ ತಾರಸಿ ಮನೆಗೆ ಪೈಪ್ ಹಾಕಿ ಡ್ರಮ್ ಮೂಲಕ 60 ಅಡಿ ಆಳದ ಬಾವಿಗೆ ನೀರು ಬಿಟ್ಟರು. ದೊಡ್ಡ ತಾರಸಿಯಾದ ಕಾರಣ ನೀರು ಹೆಚ್ಚಾಗುತ್ತಿದೆ. ಡ್ರಮ್‌ನಲ್ಲಿ ಹಿಡಿಯುತ್ತಿಲ್ಲ. 2 ಪೈಪ್‌ಗ್ಳಲ್ಲಿ ಹೊರಗೆ ನೀರು ಬಿಡುತ್ತಿದ್ದೇವೆ. ಈ ಬೇಸಗೆಯಲ್ಲಿ ಪಂಚಾಯತ್ ನಳ್ಳಿ ನೀರಿತ್ತು. ಬಾವಿ ನೀರು ಇರಲಿಲ್ಲ. ಮುಂದಿನ ಬೇಸಗೆಗೆ ಯಾವುದೇ ನೀರಿನ ಸಮಸ್ಯೆಯಾಗದು ಎಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಪ್ರೇಮಾ ಅವರ ಮನೆಯವರು.