ಕಲಬುರಗಿ: ಉದ್ದೇಶಿತ ಮುಂಬೈ-ಚೆನ್ನೈ ಗ್ರೀನ್ ಕಾರಿಡಾರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜಿಸಿದೆ. ಈ ಹೆದ್ದಾರಿ ಕಲಬುರಗಿ ಮತ್ತು ಯಾದಗಿರಿ ನಗರಗಳಿಗೆ ಹೊಂದಿಕೊಂಡು ಹಾಯ್ದು ಹೋದಲ್ಲಿ ಈ ನಗರಗಳ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹಾಗೂ ಕಲಬುರಗಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೈಗಾರಿಕೋದ್ಯಮಕ್ಕೆ ತುಂಬಾ ಅನುಕೂಲವಾಗಲಿರುವ ಉದ್ದೇಶಿತ ಈ ಗ್ರೀನ್ ಕಾರಿಡಾರ್ ಯೋಜನೆಗೆ ಸದ್ಯ ಡಿ.ಪಿ.ಆರ್. ಕಾರ್ಯ ನಡೆಯುತ್ತಿದೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ 162 ಕಿ.ಮೀ. ಹೆದ್ದಾರಿ ಹಾಯ್ದು ಹೋಗಲಿದೆಯಾದರೂ ಇವೆರಡು ನಗರಗಳಿಗೆ ಹಾಯ್ದು ಹೋಗುತ್ತಿಲ್ಲ. ಇವೆರಡು ನಗರಗಳ ಮೂಲಕ ಹಾಯ್ದು ಹೋದಲ್ಲಿ ಈ ಜಿಲ್ಲೆಗಳ ಅಭಿವೃದ್ಧಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬರುವ ಕಲಬುರಗಿ ನಗರದ ರಿಂಗ್ ರಸ್ತೆಗೆ ಮೊದಲ ಆದ್ಯತೆ ನೀಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ. ಇದೇ ಹೆದ್ದಾರಿಯಲ್ಲಿ ಬರುವ ಕಲಬುರಗಿ-ಹುಮನಾಬಾದ ಮಧ್ಯದ ಹಳ್ಳಿಖೇಡ್ ಬಳಿ ರಸ್ತೆ ಚಿಕ್ಕದಾಗಿದೆ. ಅಗತ್ಯವಿದ್ದಲ್ಲಿ ರಸ್ತೆ ಬದಿಯಲ್ಲಿನ ಮನೆ, ಅಂಗಡಿಗಳನ್ನು ತೆರವುಗೊಳಿಸಿ ಅವರಿಗೆ ಸೂಕ್ತ ಪರಿಹಾರ ಕಲ್ಪಿಸಿ, ನಿಗದಿತ ಅಳತೆಯಲ್ಲಿಯೇ ರಸ್ತೆ ನಿರ್ಮಿಸಬೇಕು ಹಾಗೂ ಅಲ್ಲಲ್ಲಿ ಗುಂಡಿಗಳ ಬಿದ್ದಿದ್ದು, ಅವುಗಳನ್ನು ಮುಚ್ಚಿಸಬೇಕು. ಅಲ್ಲದೇ ಕುರಿಕೋಟಾ ಸೇತುವೆ ಮೇಲಿನ ರಸ್ತೆ ತುಂಬಾ ಕೆಟ್ಟಿದ್ದು, ಕೂಡಲೇ ಸುಧಾರಣೆ ಕೆಲಸ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ 150ರಡಿ ಯಾದಗಿರಿ ನಗರದ ಹೊರವಲಯದಿಂದ ಹೆದ್ದಾರಿ ಹಾಯ್ದು ಹೋಗುವಂತೆ ಬೈಪಾಸ್ ರಸ್ತೆ ನಿರ್ಮಾಣ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳ ಮಂಜೂರಾತಿಗೆ ಲಭ್ಯವಿರುವ ಯೋಜನೆಗಳ ಪಟ್ಟಿ ನೀಡಿದಲ್ಲಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರೊಂದಿಗೆ ಮಾತನಾಡಿ ಮಂಜೂರಾತಿಗೆ ಕ್ರಮ ಕೈಗೊಳ್ಳುತ್ತೇನೆ. ಒಟ್ಟಾರೆ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಗಳು ಗುಣಮಟ್ಟದಿಂದ ಕೂಡಿರಬೇಕು, ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಆರ್.ಓ.ಬಿ ಮತ್ತು ಆರ್.ಓ.ಬಿ.ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಸಹಾಯಕ ಆಯುಕ್ತ ರಾಚಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಪ ವ್ಯವಸ್ಥಾಪಕ ಪ್ರದೀಪ ಹಿರೇಮಠ, ಮಹಾಂತೇಶ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಅಮೀನ ಮುಕ್ತಾರ, ಎಲ್ ಆಯಿಂಡ್ ಟಿ ಕಂಪನಿಯ ಮುಹು ಕುಮಾರ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
151 ಕೋಟಿ ರೂ. ಮಂಜೂರು
2018-19ನೇ ಸಾಲಿನ ಸಿ.ಆರ್.ಎಫ್ ಅನುದಾನದಡಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ 151 ಕೋಟಿ ರೂ. ವೆಚ್ಚದಲ್ಲಿ 5 ರಸ್ತೆ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದ್ದು, ಕೂಡಲೇ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿಯೆ ಮುಗಿಸುವಂತೆ ರಾಷ್ಟೀಯ ಹೆದ್ದಾರಿ ವಿಭಾಗದ ಸಹಾಯಕ ಅಭಿಯಂತ ಸಿದ್ದಲಿಂಗಪ್ಪ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದರು.