Advertisement

“ಬಾಲಕಾರ್ಮಿಕ ಪದ್ಧತಿ ವಿರುದ್ಧ ಗ್ರಾ.ಪಂ.ಗಳು ಜಾಗೃತವಾಗಲಿ’

06:40 AM Oct 06, 2018 | Team Udayavani |

ಉಡುಪಿ: ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕಾರ್ಯ ಗ್ರಾ.ಪಂ. ಮಟ್ಟದಲ್ಲಿ ಹೆಚ್ಚು ಹೆಚ್ಚು ನಡೆಯಬೇಕಾದ ಆವಶ್ಯಕತೆ ಇದೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಹೇಳಿದರು.

Advertisement

ಅ.5ರಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಆಶ್ರಯದಲ್ಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳಿಗೆ ನಡೆದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳನ್ನು ಕಟ್ಟಡ ನಿರ್ಮಾಣ, ಇತರೆ ಅಪಾಯಕಾರಿ ಕೆಲಸಗಳಲ್ಲಿ ಮಾತ್ರವಲ್ಲದೆ ಗದ್ದೆ, ತೋಟದ ಕೆಲಸಗಳಲ್ಲಿ ದುಡಿಸಿ ಕೊಳ್ಳುವುದು ಕೂಡ ಕಾನೂನಿಗೆ ವಿರುದ್ಧ. ವಿದ್ಯಾಭ್ಯಾಸ ಪಡೆಯಬೇಕಾಗಿರುವ ಮಕ್ಕಳು ಕಾರ್ಮಿಕರಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಗ್ರಾ.ಪಂ.ಗಳು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಟ್ಟಿಬದ್ಧರಾಗಬೇಕು.

ಕಾರ್ಮಿಕರು ತಮ್ಮ ಮಕ್ಕಳನ್ನು ತಾವು ಕೆಲಸ ಮಾಡುವ ಸ್ಥಳದಲ್ಲಿಯೇ ಇಟ್ಟುಕೊಂಡಿರುವುದು ಕೂಡ ಹಲವೆಡೆ ಕಂಡು ಬರುತ್ತಿದೆ. ಇಂಥ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಆ ಮಕ್ಕಳು ಅಂಗನವಾಡಿ, ಶಾಲೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ವಿದ್ಯಾ ಅವರು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳಿಗೆ ಸೂಚಿಸಿದರು.

ಜೈಲು ಶಿಕ್ಷೆ,ದಂಡ 
ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ್‌ ಜೋಗೂರ್‌ ಅವರು ಮಾತನಾಡಿ, ಬಾಲಕಾರ್ಮಿಕ ನಿಷೇಧ ಕಾಯಿದೆ 1987ರಿಂದಲೇ ಅಸ್ತಿತ್ವದಲ್ಲಿದೆ. 2016ರಲ್ಲಿ ಈ ಕಾಯಿದೆಯನ್ನು “ಬಾಲಕಾರ್ಮಿಕರ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ(ನಿಷೇಧ ಮತ್ತು ನಿಯಂತ್ರಣ) ಕಾಯಿದೆ 1986′ ಎಂದು ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿ ಕಾಯಿದೆ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. 14ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಗಣಿ ಕೆಲಸ, ಪೆಟ್ರೋ ಕೆಮಿಕಲ್‌ ಇಂಡಸ್ಟ್ರಿ, ಆಯಿಲಿ ರಿಫೈನಿಂಗ್‌ ಮೊದಲಾದ ಅಪಾಯಕಾರಿ ಕಾರ್ಖಾನೆಗಳಲ್ಲಿ ನೇಮಕ ಮಾಡಿಕೊಳ್ಳುವುದನ್ನು ಕೂಡ ನಿಷೇಧಿಸಲಾಗಿದೆ. ಈ ಕಾನೂನು ಉಲ್ಲಂ ಸಿದವರಿಗೆ ಕನಿಷ್ಠ 6 ತಿಂಗಳುಗಳು ಹಾಗೂ ಗರಿಷ್ಠ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಅಥವಾ ಕನಿಷ್ಠ 20,000 ರೂ.ಗಳಿಂದ ಗರಿಷ್ಠ 50,000 ರೂ.ಗಳವರೆಗೆ ದಂಡ ಅಥವಾ ಎರಡನ್ನು ವಿಧಿಸಲು ಅವಕಾಶವಿದೆ. ಮಾಲಕರನ್ನು ಬಂಧಿಸಲು ತಿದ್ದುಪಡಿ ಕಾಯಿದೆ ಅವಕಾಶ ಮಾಡಿಕೊಡುತ್ತದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ 12 ಇಲಾಖೆಗಳ ಅಧಿಕಾರಿಗಳನ್ನು, ಪಿಡಿಒಗಳನ್ನು ಕೂಡ ನಿರೀಕ್ಷಕರನ್ನಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು. 

Advertisement

ಮಹಿಳಾ ಮತ್ತು ಮಕ್ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್‌ ಅವರು ಮಾತನಾಡಿ, ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಂಡರೆ ಬಾಲಕಾರ್ಮಿಕ ಪದ್ಧತಿಯನ್ನು ತಡೆಯಲು ಸಾಧ್ಯ ಎಂದು ಹೇಳಿದರು. ಜಿ.ಪಂ. ಉಪಕಾರ್ಯದರ್ಶಿ ನಾಗೇಶ್‌ ರಾಯ್ಕರ್‌ ಉಪಸ್ಥಿತರಿದ್ದರು. ಅಪರ ಜಿಲ್ಲಾ ಸರಕಾರಿ ವಕೀಲ ಮಹಮ್ಮದ್‌ ಸುಹಾನ್‌ ಮತ್ತು ಕಾರ್ಮಿಕ ನಿರೀಕ್ಷಕ ರಾಮಮೂರ್ತಿ ಎಸ್‌.ಎಸ್‌. ಸಂಪನ್ಮೂಲ ವ್ಯಕ್ತಿ ಗಳಾಗಿ ಪಾಲ್ಗೊಂಡಿದ್ದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಪ್ರಭಾಕರ ಆಚಾರ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next