ಬಡವರು ಮತ್ತು ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮತ್ತು ವಸತಿ ನಿರ್ಮಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಹಲವಾರು ಯೋಜನೆ ಗಳನ್ನು ಅನುಷ್ಠಾನಕ್ಕೆ ತಂದಿದೆ. ಆದರೆ ಪ್ರತಿಯೊಂದೂ ಯೋಜನೆಯ ನಿಯಮಾವಳಿ ಮತ್ತು ಷರತ್ತುಗಳ ಕಾರಣದಿಂದಾಗಿ ನೈಜ ಫಲಾನುಭವಿ ಗಳು ಇನ್ನೂ ನಿವೇಶನರಹಿತರಾಗಿ ಇಲ್ಲವೇ ವಸತಿರಹಿತರಾಗಿಯೇ ಉಳಿ ಯುವಂತಾಗಿದೆ. ಈ ಬಗ್ಗೆ ಸರಕಾರಗಳು ಅದರಲ್ಲೂ ಮುಖ್ಯವಾಗಿ ರಾಜ್ಯ ಸರಕಾರ ಗಮನಹರಿಸಿ ವಸತಿ ಯೋಜನೆಗಳಲ್ಲಿನ ಎಲ್ಲ ಗೊಂದಲ ಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು.
ವಸತಿ ಯೋಜನೆಗಳ ಫಲಾನುಭವಿಗಳಿಗೆ ಇದುವರೆಗೆ ಬಲುದೊಡ್ಡ ಸಮಸ್ಯೆಯಾಗಿದ್ದ ಆದಾಯ ಮಿತಿಯನ್ನು ರಾಜ್ಯ ಸರಕಾರ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಸರಕಾರ ಈ ಹಿಂದೆ ನಿಗದಿಪಡಿಸಿದ್ದ ಆದಾಯ ಮಿತಿಯಿಂದಾಗಿ ವಸತಿರಹಿತರು ವಸತಿ ಯೋಜನೆಗಳ ಪ್ರಯೋಜನ ಪಡೆಯಲು ಅಸಾಧ್ಯವಾಗಿತ್ತು. ಆದಾಯ ಮಿತಿಯನ್ನು ಹೆಚ್ಚಿಸಬೇಕೆಂಬ ಬೇಡಿಕೆ ಕಳೆದ ಹಲವಾರು ವರ್ಷಗಳಿಂದ ಕೇಳಿಬಂದಿದ್ದರೂ ಸರಕಾರ ಇತ್ತ ಚಿತ್ತ ಹರಿಸಿರಲಿಲ್ಲ. ಕೊನೆಗೂ ವಸತಿ ಫಲಾನುಭವಿಗಳು ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಫಲಾನುಭವಿಗಳ ಆದಾಯ ಮಿತಿಯನ್ನು 1,20,000 ರೂ. ಗಳಿಗೇರಿಸಿದರೆ ನಗರ ಪ್ರದೇಶಗಳ ಫಲಾನುಭವಿಗಳ ಆದಾಯ ಮಿತಿಯನ್ನು 2 ಲಕ್ಷ ರೂ.ಗಳಿಗೆ ಹೆಚ್ಚಿಸುವ ತೀರ್ಮಾನವನ್ನು ಸರಕಾರ ಕೈಗೊಂಡಿದೆ. ಈ ನಿರ್ಧಾರದಿಂದಾಗಿ ಸಾವಿರಾರು ಮಂದಿ ನೈಜ ವಸತಿ ಫಲಾನುಭವಿಗಳ ಸ್ವಂತ ಸೂರು ಹೊಂದುವ ಕನಸು ನನಸಾಗಲು ಸಾಧ್ಯ.
ಸರಕಾರದ ವಿವಿಧ ವಸತಿ ಯೋಜನೆಯಡಿ ಮನೆ ಹೊಂದುವ ನಿರೀಕ್ಷೆಯಲ್ಲಿರುವವರು ವಿವಿಧ ದಾಖಲೆ ಪತ್ರಗಳಿಗಾಗಿ ಸರಕಾರದ ವಿವಿಧ ಇಲಾಖೆ, ಕಚೇರಿ, ಬ್ಯಾಂಕ್ ಶಾಖೆಗಳನ್ನು ಅಲೆದಾಡುವ ಪರಿಸ್ಥಿತಿ ಇದೆ. ಪ್ರತಿಯೊಂದು ಯೋಜನೆಯನ್ನು ರೂಪಿಸುವಾಗಲೂ ಸರಕಾರ ಇಂಥ ಕೆಲವೊಂದು ಅನವಶ್ಯಕ ಗೊಂದಲವನ್ನು ಸೃಷ್ಟಿಸುತ್ತಿದ್ದು ಇದು ಅರ್ಹ ವಸತಿ ಫಲಾನುಭವಿಗಳನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳ ವಸತಿರಹಿತರಂತೂ ಸ್ವಂತ ಸೂರು ಹೊಂದಲು ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಕಂದಾಯ ಮತ್ತು ವಸತಿ ಇಲಾಖೆ ನಡುವಣ ಸಮನ್ವಯದ ಕೊರತೆಯಿಂದಾಗಿ ಪ್ರತಿಯೊಂದೂ ದಾಖಲೆಪತ್ರಕ್ಕಾಗಿ ಫಲಾನುಭವಿಗಳು ಹರಸಾಹಸಪಡುವ ಸ್ಥಿತಿ ಇದೆ. ಇನ್ನು ಬ್ಯಾಂಕ್‌ಗಳಂತೂ ದಿನಕ್ಕೊಂದು ತಗಾದೆ ತೆಗೆದು ದಾಖಲೆಪತ್ರಗಳಿಗಾಗಿ ಫಲಾನುಭವಿಗಳನ್ನು ಅಲೆದಾಡಿಸುವುದು ಇದ್ದೇ ಇದೆ. ಸ್ಥಳೀಯ ಯೋಜನ ಪ್ರದೇಶದ ಹೊರಗಡೆ ಭೂ ಪರಿವರ್ತಿತ ಜಮೀನುಗಳಲ್ಲಿ ವಸತಿ ಬಡಾವಣೆ ನಿರ್ಮಿಸಲು ಏಕವಿನ್ಯಾಸ ಅನುಮೋದನೆಗೆ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗೆ ಈ ಹಿಂದಿದ್ದ ಅಧಿಕಾರವನ್ನು ಸರಕಾರ ಈಗ ಕಸಿದುಕೊಂಡು 9/11 ಖಾತೆಗೆ ಸಂಬಂಧಿಸಿದಂತೆ ನಗರ, ಗ್ರಾಮಾಂತರ ಯೋಜನ ಇಲಾಖೆಯ ಪೂರ್ವಾ ನುಮತಿ ಅತ್ಯಗತ್ಯ ಎಂದು ಆದೇಶ ಹೊರಡಿಸಿದೆ. ನಿಯಮಗಳ ಹೆಸರಿನಲ್ಲಿ ಜನರಿಗೆ ಉಪಕಾರ ಮಾಡುವ ಬದಲು ಅಪಕಾರ ಮಾಡುವುದರಿಂದಾಗಿ ಗ್ರಾಮೀಣ ಪ್ರದೇಶದ ಜನರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಇಂಥ ಹಲವಾರು ಹುಳುಕುಗಳು ಸರಕಾರದ ವಸತಿ ಮತ್ತು ಕಂದಾಯ ಇಲಾಖೆಯಲ್ಲಿವೆ. ಈ ಎಲ್ಲ ಗೋಜಲುಗಳನ್ನು ನಿವಾರಿಸಿ ಬಡ ಫಲಾನುಭವಿಗಳು ಮನೆ ನಿರ್ಮಿಸಲು ಅನುಕೂಲವಾದ ವ್ಯವಸ್ಥೆಯನ್ನು ಮಾಡಿದಲ್ಲಿ ಎಲ್ಲರಿಗೂ ಸೂರು ಒದಗಿಸಿಕೊಡುವ ಸರಕಾರದ ಕನಸು ನನಸಾಗಲು ಸಾಧ್ಯ.