ಕಲಬುರಗಿ: ಬೆಳೆವಿಮೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ ಎಂದರೂ ರೈತರಿಗೆ ಮಾತ್ರ ಹಾನಿಗೆ ತಕ್ಕ ಬೆಳೆವಿಮೆ ಪರಿಹಾರ ದೊರಕುತ್ತಿಲ್ಲ.
ಏನೆಲ್ಲ ಸುಧಾರಣೆ ತಂದರೂ ವಿಮಾ ಕಂಪನಿಗಳಿಗೆ ಲಾಭ ಎನ್ನುವಂತಿದೆ. ಇದಕ್ಕೂ ಮುನ್ನ ಸರ್ಕಾರದಿಂದಲೇ ಬೆಳೆವಿಮೆ ಮಾಡಿಸಿಕೊಂಡು ಬೆಳೆ ಹಾನಿಗೆ ವಿಮೆ ಪರಿಹಾರ ನೀಡಲಾಗುತ್ತಿತ್ತು. ಆದರೆ ದಶಕದ ಅವಧಿಯಿಂದ ಬೆಳೆವಿಮೆಯನ್ನು ಖಾಸಗಿ ವಿಮಾ ಕಂಪನಿಗಳಿಗೆ ವಹಿಸುತ್ತಾ ಬರಲಾಗುತ್ತಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆಹಾನಿಯಾಗುತ್ತಿದ್ದರೂ ಪರಿಹಾರ ಮಾತ್ರ ಸೂಕ್ತವಾಗಿ ದೊರಕದಿರುವುದನ್ನು ಕೇಳುತ್ತಾ ಬಂದಿದ್ದು, ವೈಜ್ಞಾನಿಕ ಬೆಳೆವಿಮೆ ಎಂಬ ಬಿರುದು ಪಡೆದಿರುವುದೇ ಇದಕ್ಕೆ ಸೂಕ್ತ ಉದಾಹರಣೆಯಾಗಿದೆ.
ಈಚೆಗೆ ಬೆಳೆವಿಮೆಗೆ ರೈತರು ತುಂಬುವ ಪ್ರೀಮಿಯಂ ಮೊತ್ತ ಕಡಿಮೆ ಮಾಡಲಾಗಿದೆ. ಆದರೆ ಸರ್ಕಾರದಿಂದ ತುಂಬುವ ಪ್ರೀಮಿಯಂ ಹೆಚ್ಚಾಗಿದೆ. ರೈತರು ತುಂಬುವ ಪ್ರೀಮಿಯಂನ ನಾಲ್ಕುಪಟ್ಟು ರಾಜ್ಯ ಸರ್ಕಾರ ಹಾಗೂ ಇನ್ನಾಲ್ಕು ಪಟ್ಟು ಕೇಂದ್ರ ಸರ್ಕಾರ ವಿಮಾ ಕಂಪನಿಗಳಿಗೆ ಹಣ ತುಂಬುತ್ತಿದೆ. ಒಂದು ವೇಳೆ ಇಡೀ ಒಂದು ಜಿಲ್ಲೆಯಿಂದ ಒಟ್ಟಾರೆ ರೈತರು 5ಕೋಟಿ ರೂ. ಬೆಳೆವಿಮೆಗೆಂದು ಪ್ರೀಮಿಯಂ ತುಂಬಿದರೆ ರಾಜ್ಯ ಸರ್ಕಾರ 20 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 20 ಕೋಟಿ ರೂ. ಪ್ರೀಮಿಯಂ ಮೊತ್ತ ವಿಮಾ ಕಂಪನಿಗಳಿಗೆ ತುಂಬಲಾಗುತ್ತಿದೆ. ಬೆಳೆ ಇಳುವರಿ ಪ್ರಮಾಣ ನಿಗದಿ ಮಾಡುವಲ್ಲಿ ಹಾಗೂ ಬೆಳೆಯುಳ್ಳ ಕ್ಷೇತ್ರದ ಹಾನಿಯನ್ನು ಸಮೀಕ್ಷೆ ಮಾಡುವ ಪದ್ಧತಿಯಲ್ಲಿ ಬದಲಾವಣೆ ತರಲಾಗಿದೆ ಎಂದರೂ ಶೋಷಣೆ ಮಾತ್ರ ತಪ್ಪುತ್ತಿಲ್ಲ. ಹೀಗಾಗಿ ಬೆಳೆವಿಮೆ ಎನ್ನುವುದು ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ.
ಕಳೆದ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಶೇ. 80 ರಷ್ಟು ಬೆಳೆಹಾನಿಯಾಗಿದೆ. ಹೀಗಾಗಿ ಕನಿಷ್ಟವೆಂದರೂ 150 ಕೋಟಿ ರೂ.ಗಳಿಂದ 200 ಕೋಟಿ ರೂ. ಬೆಳೆವಿಮೆ ಪರಿಹಾರ ಮಂಜೂರಾಗಬೇಕಿತ್ತು. ಆದರೆ ಬಹಳವೆಂದರೆ 50 ಕೋಟಿ ರೂ. ಮಂಜೂರಾಗಿರುವುದು ಅವೈಜ್ಞಾನಿಕತೆಗೆ ಹಿಡಿದ ಕನ್ನಡಿ. ಹೀಗಾಗಿ ಬೆಳೆವಿಮೆ ಪದ್ಧತಿಯಲ್ಲಿ ಬದಲಾವಣೆ ತರಬೇಕು ಎಂಬ ಮಾತು ದಶಕಗಳಿಂದ ಕೇಳಿ ಬರುತ್ತಿದೆ. ಪ್ರಮುಖವಾಗಿ ರೈತರ ಪ್ರೀಮಿಯಂನ್ನು ಸರ್ಕಾ ರವೇ ಭರಿಸಬೇಕೆಂಬ ಹಾಗೂ ಖಾಸಗಿ ವಿಮಾ ಕಂಪನಿ ಬದಲು ಸರ್ಕಾರವೇ ವಿಮೆ ಭರಿಸಲಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗಿನ ಖಾಸಗೀತನ ಬೆಳೆವಿಮೆ ಮಂಜೂರಾತಿಯಲ್ಲಿ ಹಲವು ಕ್ರಮ ಅನುಸರಿಬೇಕಿದೆ.
ಕಂಪನಿಗಳು ನಿಯಮಗಳು ಪಾಲನೆ ಮಾಡುತ್ತಿಲ್ಲ ಎನ್ನುವ ಕೊರಗು ಕೇಳಿ ಬರುತ್ತಿದೆ. ಕಲಬುರಗಿ ಜಿಲ್ಲೆಯಲ್ಲೇ ಕಳೆದ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಒಟ್ಟಾರೆ 7.09ಕೋಟಿ ರೂ. ಪ್ರೀಮಿಯಂ ತುಂಬಿದ್ದರೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಲಾ 23.97ಕೋಟಿ ರೂ. ಸೇರಿ 47.94ಕೋಟಿ ರೂ.ಗಳನ್ನು ಸರ್ಕಾರವೇ ವಿಮಾ ಕಂಪನಿಗೆ ಭರಿಸಿದೆ. ಒಂದು ವೇಳೆ ವಿಮೆಯನ್ನು ಖಾಸಗಿ ನೀಡುವ ಬದಲು ಸರ್ಕಾರವೇ ನಿರ್ವಹಿಸಿದಲ್ಲಿ ಸರ್ಕಾರಕ್ಕೆ ಹಣ ಉಳಿಯುತ್ತದೆಲ್ಲದೇ ರೈತರಿಗೆ ಹಾನಿಗೆ ತಕ್ಕ ಪರಿಹಾರ ನೀಡಲು ಮೀನಾಮೇಷ ಎಣಿಸಲಿಕ್ಕಾಗದು.
ಹಲವು ಸೇವೆಗಳನ್ನು ಖಾಸಗೀಕರಣ ಮಾಡಲಾಗಿದೆ. ಆದರೆ ಕೆಲವು ಯೋಜನೆಗಳನ್ನು ಸರ್ಕಾರವೇ ನಿಭಾಯಿಸಿದಲ್ಲಿ ಸಮರ್ಪಕ ನ್ಯಾಯ ದೊರಕಲು ಸಾಧ್ಯ. ಆದ್ದರಿಂದ ಬೆಳೆವಿಮೆ ಖಾಸಗೀಕರಣ ಅಂತ್ಯಗೊಳಿಸಿ ಮುಂದಿನ ವರ್ಷದಿಂದ ಸರ್ಕಾರವೇ ನಿಭಾಯಿಸಲಿ ಎನ್ನುವ ಮಾತು ಒಕ್ಕೊರಲಿನ ಧ್ವನಿ ಕೇಳಿಬರುತ್ತಿದೆ.
ಬೆಳೆವಿಮೆ ಎಂಬುದು ರೈತರ ಪಾಲಿಗೆ ಕನ್ನಡಿಯೊಳಗಿನ ಗಂಟಾಗಿದೆ. ಅವೈಜ್ಞಾನಿಕ ನೀತಿ ತಪ್ಪಿಸಲು ಸುಧಾರಣಾ ಕ್ರಮಗಳನ್ನು ಕಾರ್ಯಾನುಷ್ಠಾನಕ್ಕೆ ತರಲಾಗಿದೆ ಎಂದು ಹೇಳಲಾಗುತ್ತಿದ್ದರೂ ರೈತರಿಗೆ ಮಾತ್ರ ಹಾನಿಗೆ ತಕ್ಕ ಬೆಳೆವಿಮೆ ಪರಿಹಾರ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ವಿಮೆ ಕಂಪನಿಗಳಿಗೆ ಮಾತ್ರ ಲಾಭ ಎನ್ನುವಂತಾಗಿದೆ. ಆದ್ದರಿಂದ ಸರ್ಕಾರವೇ ಬೆಳೆವಿಮೆ ನಿರ್ವಹಿಸಲಿ.
–ಶರಣಗೌಡ ಪಾಟೀಲ, ರೈತ
-ಹಣಮಂತರಾವ ಭೈರಾಮಡಗಿ