ಬೆಂಗಳೂರು: ‘ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು ರಾಜ್ಯ ಸರ್ಕಾರ ಪರಿಹಾರ ಕಾಮಗಾರಿಗಳತ್ತ ಗಮನಹರಿಸಬೇಕಾಗಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ‘ಇಂತಹ ಸಂದರ್ಭದಲ್ಲಿ ನಾನು ಯಾವುದೇ ಟೀಕೆ ಮಾಡಲು ಹೋಗುವುದಿಲ್ಲ. ಆದರೆ, ಸಂಕಷ್ಟದಲ್ಲಿರುವ ಜನತೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು’ ಎಂದು ಹೇಳಿದರು.
‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗಾವಿಗೆ ಹೋಗಿದ್ದಾರೆ. ಕೆಲವು ಭಾಗಗಳಿಗೆ ಹೋಗಲು ಆವರಿಗೂ ಸಾಧ್ಯವಾಗಿಲ್ಲ. ನಾನು ಯಡಿಯೂರಪ್ಪ ಅವರ ಬಗ್ಗೆ ಲಘುವಾಗಿ ಮಾತನಾಡಲು ಹೋಗುವುದಿಲ್ಲ’ ಎಂದರು.
‘ಮುಖ್ಯಮಂತ್ರಿಯವರಿಗೆ ಸಚಿವ ಸಂಪುಟ ವಿಸ್ತರಣೆಗೆ ಮಾಡಲು ಏನು ಸಮಸ್ಯೆ ಇದೆಯೋ ಗೊತ್ತಿಲ್ಲ.. ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಪ್ರವಾಹದ ಬಗ್ಗೆ ಗಮನಹರಿಸಿ ಎಂದು ಹೇಳಿದ್ದಕ್ಕೆ ವಾಪಸ್ ಬಂದಿದ್ದಾರೆ. ಯಡಿಯೂರಪ್ಪ ಅವರು ಪಟ್ಟಿ ತೆಗೆದುಕೊಂಡು ಹೋಗಿರಬಹುದು. ಆದರೆ, ಕಾಶ್ಮೀರ ವಿಚಾರ, ಸುಷ್ಮಾ ಸ್ವರಾಜ್ ನಿಧನದಿಂದ ಕ್ಯಾಬಿನೆಟ್ ಪಟ್ಟಿಗೆ ಒಪ್ಪಿಗೆ ಕೊಡಲು ಕೇಂದ್ರದ ನಾಯಕರಿಗೆ ಆಗದೆ ಇರಬಹುದು’ ಎಂದು ಹೇಳಿದರು.
ಜೆಡಿಎಸ್ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ತಂಡಗಳು ಹೋಗಿ ಅಧ್ಯಯನ ನಡೆಸಲಿವೆ. ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ನೋಡಿಕೊಂಡು ಹೋಗಿ ಬರಲಿದ್ದಾರೆ. ನಮ್ಮ ಪಕ್ಷದಿಂದ ಏನು ಸಹಾಯ ಮಾಡಬಹುದೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.