Advertisement
ಸರಕಾರ ಅಂಬೆಗಾಲಿಡುತ್ತಿದ್ದು ಇನ್ನೂ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಿಲ್ಲ. ಚುನಾವಣಪೂರ್ವದಲ್ಲಿ ಕಾಂಗ್ರೆಸ್ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳ ಜಾರಿ ವಿಷಯದಲ್ಲಿ ಒಂದಿಷ್ಟು ಇಕ್ಕಟ್ಟಿಗೆ ಸಿಲುಕಿದೆ. ಆಡಳಿತಕ್ಕೆ ಬಂದ ದಿನದಿಂದಲೇ ಈ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಈಗ ಭಿನ್ನರಾಗ ಹಾಡುತ್ತಿರುವ ಸಂಬಂಧ ರಾಜ್ಯದ ವಿವಿಧೆಡೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದರೆ ಇತ್ತ ವಿಪಕ್ಷಗಳು ಕೂಡ ಕಾಂಗ್ರೆಸ್ ಸರಕಾರ ವನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿವೆ. ಈ ಬೆಳವಣಿಗೆಗಳ ನಡುವೆಯೇ ರಾಜ್ಯ ಸಚಿವ ಸಂಪುಟದ ಕೆಲವು ಹಿರಿಯ ಸಚಿವರು ಈ ಹಿಂದಿನ ಸರಕಾರ ಜಾರಿಗೆ ತಂದಿದ್ದ ಕೆಲವೊಂದು ಕಾನೂನು, ಕಾಯಿದೆಗಳನ್ನು ವಾಪಸು ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸಕ್ಕೆ ಸಚಿವರು ಮುಂದಾಗಿರುವುದು ಒಂದಿಷ್ಟು ಆತುರದ ಕ್ರಮವಾಗಲಿದೆ.ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈಗಾಗಲೇ ರಾಜ್ಯದ ಉನ್ನತ ಅಧಿಕಾರಿಗಳ ಸಭೆ ಕರೆದು ಕೆಲವೊಂದು ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ. ಅಷ್ಟು ಮಾತ್ರವಲ್ಲದೆ ಸಚಿವರು ಮತ್ತು ಶಾಸಕರಿಗೆ ಕೂಡ ಅವರ ಆದ್ಯತೆ ಗಳೇನಾಗಿರಬೇಕು ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ಇವೆಲ್ಲದರ ಹೊರತಾಗಿಯೂ ಸಚಿವರು ಮತ್ತು ಶಾಸಕರು ಪ್ರಚಾರಕ್ಕಾಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿರುವುದು ಆಡಳಿತಾರೂಢ ಪಕ್ಷಕ್ಕೆ ಕಳಂಕವೇ ಸರಿ. ಪ್ರತೀ ಬಾರಿಯೂ ಕೋಲು ಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿಯನ್ನು ಸ್ವತಃ ತಾವೇ ಸೃಷ್ಟಿಸಿಕೊಳ್ಳಬಾರದು.