Advertisement

Editorial; ಸರಕಾರಿ ವೈದ್ಯಕೀಯ ಕಾಲೇಜು ಚಿಂತನೆ ಕಾರ್ಯರೂಪಕ್ಕೆ ಬರಲಿ

12:01 AM Jul 17, 2024 | Team Udayavani |

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ರಾಜ್ಯ ಸರಕಾರ ಚಿಂತನೆ ನಡೆಸಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸರಕಾರಿ ವೈದ್ಯಕೀಯ ಕಾಲೇಜಿನ ನಿರೀಕ್ಷೆಯಲ್ಲಿರುವ ಜಿಲ್ಲೆಗಳ ಜನತೆಯಲ್ಲಿ ಅದರಲ್ಲೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಸಚಿವರ ಈ ಭರವಸೆ ಆಶಾವಾದ ಮೂಡಿಸಿದೆ.

Advertisement

ರಾಜ್ಯ ಸರಕಾರದ ಈ ಚಿಂತನೆ ರಾಜ್ಯದ ಜನತೆಗೆ ಹೊಸ ವಿಷಯವೇನಲ್ಲವಾದರೂ ಕಳೆದೊಂದು ದಶಕದಿಂದೀಚೆಗೆ ಪ್ರತಿಯೊಂದು ಜಿಲ್ಲೆಯಲ್ಲೂ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧ ಆಗ್ರಹಗಳು ಜನತೆಯಿಂದಲೇ ಕೇಳಿ ಬರುತ್ತಲೇ ಇವೆ. ಈ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚೆಯಾದಾಗಲೆಲ್ಲ ಆಡಳಿತಾರೂಢ ಸರಕಾರಗಳು ಈ ಸಂಬಂಧ ಸಕಾರಾತ್ಮಕವಾಗಿ ಸ್ಪಂದಿಸಿವೆಯಾದರೂ ಅವ್ಯಾವುವೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಈಗ ರಾಜ್ಯ ಸರಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಚಿಂತನೆ ನಡೆಸಿದ್ದು ಅಗತ್ಯಬಿದ್ದಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಕಾಲೇಜುಗಳನ್ನು ತೆರೆಯುವ ಇಂಗಿತವನ್ನು ವ್ಯಕ್ತಪಡಿಸಿದೆ. ವೈದ್ಯಕೀಯ ಕಾಲೇಜು ತೆರೆಯಲು ಭಾರೀ ವೆಚ್ಚ ತಗಲುವುದರಿಂದ ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ವೈದ್ಯಕೀಯ ತರಬೇತಿ ನೀಡಲು ಸುವ್ಯವಸ್ಥಿತ ಆಸ್ಪತ್ರೆಯ ಆವಶ್ಯಕತೆ ಇರುವುದರಿಂದ ಸರಕಾರ ಈವರೆಗೆ ಈ ಪ್ರಸ್ತಾವವನ್ನು ಮುಂದೂಡುತ್ತಲೇ ಬಂದಿದೆ. ಖಾಸಗಿ ಸಂಸ್ಥೆಗಳಲ್ಲಿನ ವೈದ್ಯಕೀಯ ಶಿಕ್ಷಣ ಶುಲ್ಕವನ್ನು ಭರಿಸಲಾಗದೆ ಮತ್ತು ಹೊರ ಜಿಲ್ಲೆಗಳಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾಕಾಂಕ್ಷಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುವುದರಿಂದ ಪ್ರವೇಶಾತಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದರಿಂದಾಗಿ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುವ ತಮ್ಮ ಮಹದಾಸೆಯನ್ನು ಕೈಚೆಲ್ಲುವಂತಾಗಿದೆ. ಅಷ್ಟು ಮಾತ್ರವಲ್ಲದೆ ಇದು ಈ ಬಡ ವಿದ್ಯಾರ್ಥಿಗಳ ಹೆತ್ತವರನ್ನೂ ಮಾನಸಿಕ ತೊಳಲಾಟ ಅನುಭವಿಸುವಂತೆ ಮಾಡಿದೆ.

ಎಲ್ಲ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ತೆರೆಯುವ ಚಿಂತನೆಯನ್ನು ಕಾರ್ಯರೂಪಕ್ಕೆ ತರುವತ್ತ ಸರಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಆರ್ಥಿಕ ಮುಗ್ಗಟ್ಟು, ಸುವ್ಯವಸ್ಥಿತ ಆಸ್ಪತ್ರೆಗಳ ಕೊರತೆ, ವಿದ್ಯಾರ್ಥಿಗಳ ಅಲಭ್ಯತೆ ಮತ್ತಿತರ ನೆಪಗಳನ್ನು ಮುಂದೊಡ್ಡಿ ತನ್ನ ಚಿಂತನೆಯನ್ನು ಅರ್ಧದಲ್ಲಿಯೇ ಕೈಬಿಡದೆ ಅದನ್ನು ದಡ ಸೇರಿಸುವ ಕಾರ್ಯ ಮಾಡಬೇಕು.

ಸದ್ಯ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರಕಾರಿ ಆಸ್ಪತ್ರೆಗಳಿದ್ದು, ಅಲ್ಲಿರುವ ಕುಂದುಕೊರತೆಗಳನ್ನು ಆದ್ಯತೆಯ ಮೇಲೆ ನಿವಾರಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಆಸ್ಪತ್ರೆಗಳಿಗೆ ಅತ್ಯಾಧುನಿಕ ಪರೀಕ್ಷಾ ಮತ್ತು ಚಿಕಿತ್ಸಾ ಉಪಕರಣ­ಗಳು, ತಂತ್ರಜ್ಞಾನ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಈ ಸರಕಾರಿ ಆಸ್ಪತ್ರೆಗಳಲ್ಲಿನ ಮೂಲಸೌಕ­ರ್ಯಗಳ ಸುಧಾರಣೆಗೆ ಮುಂದಾಗುವುದರ ಜತೆಯಲ್ಲಿ ಪರ್ಯಾಪ್ತ ಸಂಖ್ಯೆಯಲ್ಲಿ ವೈದ್ಯರು, ವೈದ್ಯಕೀಯ ಸಿಬಂದಿ ಮತ್ತು ಅರೆ ವೈದ್ಯಕೀಯ ಸಿಬಂದಿಯ ನೇಮಕದತ್ತ ಗಮನಹರಿಸಬೇಕು. ವರ್ಷಕ್ಕೆ ಕನಿಷ್ಠ 2-3 ಜಿಲ್ಲೆಗಳಲ್ಲಾದರೂ ಈ ಪೂರ್ವ ಸಿದ್ಧತೆಗ­ಳನ್ನು ಕೈಗೊಂಡು ಜಿಲ್ಲಾಸ್ಪತ್ರೆಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಸರಕಾರ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.

Advertisement

ಈ ಕಾಲೇಜುಗಳಲ್ಲೂ ಖಾಸಗಿಯವರ ಪಾರಮ್ಯ ಮೆರೆದದ್ದೇ ಆದಲ್ಲಿ ಮತ್ತೆ ಯಥಾಪ್ರಕಾರ ಬಡ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗುವ ಅಪಾಯ ಇದೆ. ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆಯಾಗುವ ವೈದ್ಯಕೀಯ ಕಾಲೇಜುಗಳ ಮೇಲಣ ಸಂಪೂರ್ಣ ನಿಯಂತ್ರಣವನ್ನು ಸರಕಾರ ಉಳಿಸಿಕೊಂಡಾಗಲಷ್ಟೇ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಸರಕಾರದ ನೈಜ ಉದ್ದೇಶ ಈಡೇರಲು ಸಾಧ್ಯ ಎಂಬುದನ್ನು ಮಾತ್ರ ಮರೆಯಬಾರದು.

Advertisement

Udayavani is now on Telegram. Click here to join our channel and stay updated with the latest news.

Next