Advertisement

ಸರ್ಕಾರ ಖಾಲಿ ಹುದ್ದೆ ಶೀಘ್ರ ಭರ್ತಿ ಮಾಡಲಿ

09:02 PM Feb 03, 2020 | Lakshmi GovindaRaj |

ಚನ್ನರಾಯಪಟ್ಟಣ: ಸರ್ಕಾರಿ ನೌಕರರು ಹೆಚ್ಚುವರಿ ಕೆಲಸ ಮಾಡುತ್ತಿರುವುದರಿಂದ ಮಾನಸಿಕವಾಗಿ ಒತ್ತಡ ಹೆಚ್ಚುತ್ತಿದೆ ಹಾಗಾಗಿ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಬೇಕು ಎಂದು ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಆಗ್ರಹಿಸಿದರು. ತಾಲೂಕು ಸರ್ಕಾರಿ ನೌಕರ ಭವನದಲ್ಲಿ ತಾಲೂಕು ಮಟ್ಟದ ಸರ್ಕಾರಿ ನೌಕರರ ಸಮಾವೇಶ, ವಿಚಾರಸಂಕಿರಣ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ರಾಜ್ಯ ಸಂಘ ಸರ್ಕಾರ ವಿರುದ್ಧ ಧರಣಿ ನೀಡಲು ಕರೆ ನಿಡಿದರೆ ಎಲ್ಲರೂ ಪಾಲ್ಗೊಳ್ಳುತ್ತಿಲ್ಲ. ಇದರಿಂದ ಸರ್ಕಾರ ನಡೆಸುವವರು ಸರ್ಕಾರಿ ನೌಕರರ ಮನವಿಗೆ ಸ್ಪಂದಿಸುತ್ತಿಲ್ಲ. ಇದನ್ನು ಸರಿ ಪಡಿಸಲು ರಾಜ್ಯಾದ್ಯಂತ ಸಂಚರಿಸಿ ಸಂಘಟನೆ ಮಾಡಲಾಗುವುದು ಎಂದರು.

ಚನ್ನರಾಯಪಟ್ಟಣದಲ್ಲಿ ಸರ್ವೆ ಅಧಿಕಾರಿ ಮೇಲೆ ಹಲ್ಲೆ ಆಗಿರುವುದನ್ನು ಸಂಘವು ಖಂಡಿಸುತ್ತದೆ. ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸುತ್ತೇನೆ ಎಂದರು. ಸಂಘಟನೆಗೆ ಶಕ್ತಿ ತುಂಬುವ ಕೆಲಸ ಎಲ್ಲಾ ಸರ್ಕಾರಿ ನೌಕರರು ಜಾತಿ ಹಾಗೂ ಧರ್ಮ ಭೇದವಿಲ್ಲದೇ ಸಂಘಟಿತರಾಗಬೇಕು. ತಾಲೂಕು ಸಂಘವು ಪತ್ತಿನ ಸಹಕಾರ ಸಂಘ ಹಾಗೂ ಗೃಹನಿರ್ಮಾಣ ಸಂಘವನ್ನು ಆರಂಭಿಸುವ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ತಿಳಿಸಿದರು.

ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು ಅದಕ್ಕೆ ಅನುಗುಣವಾಗಿ ಸರ್ಕಾರದ ಹಲವು ಯೋಜನೆಗಳು ನಿತ್ಯವೂ ಘೋಷಣೆ ಮಾಡುತ್ತಿದೆ. ಇದನ್ನು ಜನರಿಗೆ ತಲುಪಿಸಲು ಸಿಬ್ಬಂದಿ ನೀಡುತ್ತಿಲ್ಲ, ಇರುವ ನೌಕರರು ಜನರಿಗೆ ತಲುಪಿಸಬೇಕಾಗಿರುವುದರಿಂದ ನೌಕರರಿಗೆ ಕೆಲಸದ ಒತ್ತಡ ಜಾಸ್ತಿಯಾಗುತ್ತಿದೆ ಈ ಬಗ್ಗೆ ಮುಖ್ಯ ಮಂತ್ರಿಗೆ ಮನವರಿಕೆ ಮಾಡಲಾಗಿದ್ದು ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆಯನ್ನು ರಾಜ್ಯ ಸಂಘ ಹೊಂದಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಸಾಂದರ್ಭಿಕ ರಜೆ ಹೆಚ್ಚಿಸಿ: ಇದುವರೆಗೆ ಸರ್ಕಾರಿ ನೌಕರರಿಗೆ 10 ಸಾಂದರ್ಭಿಕ ರಜೆ ಸೌಲಭ್ಯವಿತ್ತು. ಅದನ್ನು 15ಕ್ಕೆ ಹೆಚ್ಚಿಸಲು ಸರ್ಕಾರದ ಗಮನಕ್ಕೆ ತರಲಾಗಿದ್ದು, ಮುಂದಿನ ಸಚಿವ ಸಂಪುಟ ಒಪ್ಪಿಗೆ ನೀಡಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವೆ ವೇತನ ತಾರತಮ್ಯವಿದೆ. 22 ರಾಜ್ಯಗಳಲ್ಲಿ ನೌಕರರು ಸಮಾನ ವೇತನ ಪಡೆಯುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ಸೌಲಭ್ಯ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ ಎಂದರು.

Advertisement

ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ: ಸರ್ಕಾರದಿಂದ ಸೌಲತ್ತು ಕೇಳುವ ನಾವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕಾಗಿದೆ. ನಾವು ಪಡೆಯುವ ವೇತನಕ್ಕೆ ನ್ಯಾಯ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹುದ್ದೆಗೆ ಗೌರವ ಬರುವಂತೆ ನಡೆದುಕೊಳ್ಳುವುದು ನಮ್ಮ ಜವಾಬ್ದಾರಿ. ಇದನ್ನು ಅರಿತು ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಸೇವೆ ಸಲ್ಲಿಸಿ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ,ಸರ್ಕಾರ ಖಾಲಿ ಇರುವ ಹುದ್ದೆಗಳಲ್ಲಿ ಭರ್ತಿಗೆ ಮುಂದಾಗಬೇಕು.ರಾಜ್ಯ ರಸ್ತೆ ಸಾರಿಗೆ ನಿಗಮದದಲ್ಲಿನ ಸಿಬ್ಬಂದಿಯನ್ನು ಸರ್ಕಾರಿ ನೌಕರರ ರೀತಿ ಪರಿಗಣಿಸಿ ವೇತನ ನೀಡಬೇಕು, ಶಿಕ್ಷಣ ಕ್ಷೇತ್ರದಲ್ಲಿ 20 ಕೋಟಿ ಹಣ ಮೀಸಲಿಟ್ಟಿದ್ದು ಅದರಲ್ಲಿ 18 ಕೋಟಿ ಹಣ ವೇತನಕ್ಕೆ ಹೋಗುತ್ತದೆ, ಇದರಿಂದ ಶಿಕ್ಷಣ ಇಲಾಖೆಯಲ್ಲಿ ಅಭಿವೃದ್ದಿ ಮಾಡಲಾಗುತ್ತಿಲ್ಲ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ವೇತಾ, ದೇವಮ್ಮ, ರಾಜ್ಯನೌಕರಸಂಘದ ಉಪಾಧ್ಯಕ್ಷರಾದ ಎಂ.ವಿ.ರುದ್ರಪ್ಪ, ಮೋಹನ್‌ ಕುಮಾರ, ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಕೆ.ಎಲ್.ಪ್ರಕಾಶ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ತಾಲೂಕು ಅಧ್ಯಕ್ಷ ಸಿ.ಜೆ.ಮಂಜುನಾಥ, ಕಾರ್ಯದರ್ಶಿ ಸ್ವಾಮಿಗೌಡ ಮೊದಲಾದವರು ಉಪಸ್ಥಿತರಿದ್ದರು.

2.40 ಲಕ್ಷ ಹುದ್ದೆ ಖಾಲಿ: ರಾಜ್ಯದಲ್ಲಿ ಸುಮಾರು 2.40 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದು ಈ ಹುದ್ದೆಯನ್ನು ಹಾಲಿ ನೌಕರರು ನಿಭಾಯಿಸುತ್ತಿದ್ದಾರೆ ಇದರಿಂದ ನೌಕರರಿಗೆ ಒತ್ತಡ ಹೆಚ್ಚುತ್ತಿದೆ. ಈಗಾಗಲೇ ಸರ್ಕಾರದೊಂದಿ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಹುದ್ದೆ ಭರ್ತಿ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಹೇಳಿದರು.

ಜನರ ಸಮಸ್ಯೆ ಆಲಿಸಿ: ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ದೂರದ ಊರಿನಿಂದ ಸರ್ಕಾರಿ ಕಚೇರಿಗೆ ಕೆಲಸಕ್ಕಾಗಿ ಬರುವ ಜನರ ಸಮಸ್ಯೆಯನ್ನು ಸಮಾಧಾನದಿಂದ ಆಲಿಸಬೇಕು. ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇನೆ ಎಂದರು. ಒತ್ತಡದಲ್ಲಿ ಸೇವೆ ಸಲ್ಲಿಸುವ ನೌಕರರು ಧ್ಯಾನ, ಪ್ರಾಣಯಾಮ ಹಾಗೂ ಯೋಗ ಮಾಡುವ ಮೂಲಕ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next