Advertisement

ಸರಕಾರ ಶಾಲೆಗಳಲ್ಲಿ ಆಟದ ಮೈದಾನಗಳ ವ್ಯವಸ್ಥೆ ಮಾಡಲಿ

12:28 AM Jan 03, 2023 | Team Udayavani |

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದ 24 ಸಾವಿರ ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ ಎಂಬುದು ನಿಜಕ್ಕೂ ಅತ್ಯಂತ ಖೇದಕರ ವಿಷಯ. ರಾಜ್ಯ ಸರಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದಾಗಿ ಪದೇ ಪದೆ ಹೇಳುತ್ತಿದೆ. ಶಾಲೆಗಳ ಬಗ್ಗೆ ಕೊಠಡಿಗಳ ಬಗ್ಗೆ ಕಾಳಜಿ ವಹಿಸಿದಷ್ಟೇ ಆಟದ ಮೈದಾನಗಳ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ.

Advertisement

ಏಕೆಂದರೆ ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದಲ್ಲಿರುವ ಪಾಠ-ಪ್ರವಚನ ಬೋಧನೆಯಲ್ಲ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅತ್ಯಂತ ಆವಶ್ಯಕ. ಇದಕ್ಕೆ ಆಟದ ಮೈದಾನವೇ ಇಲ್ಲ ಎಂದಾದರೆ ಶಿಕ್ಷಣದ ಪರಿಪೂರ್ಣತೆ ಇರುವುದಿಲ್ಲ.

ಕೇಂದ್ರ ಸರಕಾರದ ಮಹತ್ವಕಾಂಕ್ಷೆಯ “ರಾಷ್ಟ್ರೀಯ ಶಿಕ್ಷಣ ನೀತಿ-2020’ಯಲ್ಲಿ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಪಠ್ಯಕ್ರಮದ ಸ್ಥಾನ ಕೊಡಲಾಗಿದೆ. ಆದರೆ ಆಟದ ಮೈದಾನಗಳೇ ಇಲ್ಲದಿದ್ದರೆ ಇದು ಸಾಕಾರವಾಗುವುದಾದರೂ ಹೇಗೆ?

ದೈಹಿಕ ಶಿಕ್ಷಣ, ಕ್ರೀಡೆ, ಆಟೋಟಗಳು ಮಕ್ಕಳ ಕಲಿಕೆಗೆ ಆವಶ್ಯಕ ಎಂದು ಹೇಳಲಾಗುತ್ತದೆ. ಆದರೆ ಆಟದ ಮೈದಾನಗಳೇ ಇಲ್ಲ ಎಂದಾದರೆ ಸಾವಿರಾರು ಶಾಲೆಗಳ ಲಕ್ಷಾಂತರ ಮಕ್ಕಳು ಕ್ರೀಡಾ ಹಾಗೂ ಇತರೆ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆ ಇದರಿಂದ ಕುಂಠಿತವಾಗುತ್ತದೆ.

ರಾಜ್ಯದಲ್ಲಿ ಸರ ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿ 53,239 ಪ್ರಾಥಮಿಕ ಹಾಗೂ 16,122 ಪ್ರೌಢ ಶಾಲೆ ಸೇರಿ 69,941 ಶಾಲೆಗಳ ಪೈಕಿ 24,332 ಶಾಲೆಗಳಲ್ಲಿ ಆಟದ ಮೈದಾನಗಳಿಲ್ಲ. ನಗರ ಪ್ರದೇಶದ ಶಾಲೆಗಳು ಆಟದ ಮೈದಾನದಿಂದ ವಂಚಿತವಾಗಿವೆ. ಈ ಬಗ್ಗೆ ಸರಕಾರಗಂಭೀರವಾಗಿ ಪರಿಗಣಿಸಬೇಕು.

Advertisement

ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಜತೆಗೆ ಆಟದ ಮೈದಾನ ನಿರ್ಮಾಣಕ್ಕೂ ಗಮನಹರಿಸಬೇಕು. ಒಂದೊಮ್ಮೆ ಶಾಲೆಗಳ ವ್ಯಾಪ್ತಿಯಲ್ಲಿ ಅಷ್ಟು ಜಾಗ ಸಿಗದಿದ್ದರೆ ಖಾಸಗಿ ಜಾಗ ಖರೀದಿಸಲು ಮುಂದಾಗಬೇಕು.”ಶಿಕ್ಷಣ ಹಕ್ಕು ಕಾಯ್ದೆ’ ಯಡಿ ಸಹ ಕ್ರೀಡೆ ಮತ್ತು ದೈಹಿಕ ಶಿಕ್ಷಣ ಕಡ್ಡಾಯವಾಗಿದೆ. ಆರ್‌ಟಿಇ ಕಾಯ್ದೆಯಡಿ ಶಾಲೆಗಳಿಗೆ ಕಡ್ಡಾಯವಾಗಿ ಒದಗಿಸಬೇಕಾದ 8 ಭೌತಿಕ ವ್ಯವಸ್ಥೆಗಳಲ್ಲಿ ಆಟದ ಮೈದಾನವೂ ಒಂದು. ಇಷ್ಟಾದರೂ ಶಾಲೆಗಳಲ್ಲಿ ಆಟದ ಮೈದಾನಗಳು ಇಲ್ಲ ಎಂದಾದರೆ ಶಿಕ್ಷಣ ಏಕಮುಖವಾಗುತ್ತದೆ.

ರಾಜ್ಯ ಸರಕಾರ ತತ್‌ಕ್ಷಣ ಆಟದ ಮೈದಾನಗಳನ್ನು ಒದಗಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಆಟದ ಮೈದಾನಗಳನ್ನು ಕಡ್ಡಾಯವಾಗಿ ಶಾಲಾ ಮಕ್ಕಳ ಬಳಕೆಗೆ ಮೀಸಲಿಡಬೇಕು. ಒತ್ತುವರಿಯಾಗಿರುವ ಶಾಲಾ ಆಟದ ಮೈದಾನಗಳನ್ನು ತೆರವುಗೊಳಿಸುವ ಕೆಲಸ ಮಾಡಬೇಕು.
ರಾಜ್ಯದಲ್ಲಿ ಸಾವಿರಾರು ಎಕರೆ ಸರಕಾರಿ ಭೂಮಿ ಒತ್ತುವರಿಯಿಂದ ತೆರವುಗೊಳಿಸಲಾಗಿದ್ದು ಅಂತಹ ಜಾಗ ಆಟದ ಮೈದಾನಕ್ಕೆ ಮೀಸಲಿಡುವ ಕೆಲಸ ಆಗಬೇಕು. ಕಂದಾಯ ಇಲಾಖೆಯ ಜತೆ ಈ ಕುರಿತು ಚರ್ಚಿಸಿ ಶಿಕ್ಷಣ ಇಲಾಖೆ ಆಟದ ಮೈದಾನ ನಿರ್ಮಾಣಕ್ಕೆ ಮುಂದಾಗಬೇಕು. ಖುದ್ದು ಮುಖ್ಯಮಂತ್ರಿಯವರು ಹಾಗೂ ಶಿಕ್ಷಣ ಸಚಿವರು ಈ ಬಗ್ಗೆ ಕಾಳಜಿ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next