Advertisement

ಬಜೆಟ್‌ನಲ್ಲಿ ಘೋಷಣೆಯಾದ ಜಾನಪದ ಲೋಕ ವಿರುಪಾಪುರಗಡ್ಡಿಯಲ್ಲಿ ಸ್ಥಾಪಿತವಾಗಲಿ

07:22 PM Jul 09, 2023 | Team Udayavani |

ಗಂಗಾವತಿ: ರಾಜ್ಯ ಸರಕಾರದ ಬಜೆಟ್‌ನಲ್ಲಿ ಕೊಪ್ಪಳ ಜಿಲ್ಲೆಗೆ ಜಾನಪದ ಲೋಕ ಸ್ಥಾಪನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದು ಇಡೀ ಜಿಲ್ಲೆಯ ಜನತೆಗೆ ಹರ್ಷ ತಂದಿದ್ದು ಈ ನಿಯೋಜಿತ ಜಾನಪದ ಲೋಕವನ್ನು ತಾಲೂಕಿನ ವಿಶ್ವಪರಂಪರಾ ಪ್ರದೇಶವಾಗಿರುವ ವಿರೂಪಾಪುರಗಡ್ಡಿಯಲ್ಲಿ ಸ್ಥಾಪಿಸುವ ಮೂಲಕ ಮೂಲ ಪರಂಪರೆಯನ್ನು ಉಳಿಸುವಂತೆ ಪ್ರಾಗೈತಿಹಾಸಿಕ ಸಂಶೋಧಕ ಡಾ|ಶರಣಬಸಪ್ಪ ಕೋಲ್ಕಾರ್ ಸರಕಾರವನ್ನು ಮನವಿ ಮಾಡಿದ್ದಾರೆ.

Advertisement

ಪ್ರಸ್ತುತ ಯೋಜಿತ ಜಾನಪದ ಲೋಕವನ್ನು ಪ್ರಾಗೈತಿಹಾಸಿಕವಾಗಿ, ಚಾರಿತ್ರಿಕವಾಗಿ, ಪೌರಾಣಿಕವಾಗಿ ಸಮೃದ್ಧ ಪರಂಪರೆ ಹೊಂದಿರುವ ಆನೆಗೊಂದಿ ಭಾಗದಲ್ಲಿ ಸ್ಥಾಪಿಸುವುದು ಅತ್ಯಂತ ಸಮಂಜಸವೆಂದು ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಪರಂಪರೆಯ ತಾಣವಾದ ಹಂಪಿಯ ಒಂದು ಭಾಗವೇ ಆನೆಗೊಂದಿ ಪ್ರದೇಶ. ಪೌರಾಣಿಕವಾಗಿ ಪಂಪಾ ಕ್ಷೇತ್ರವೆಂದು, ರಾಮಾಯಣ ಮಹಾಕಾವ್ಯದ ಕಿಷ್ಕಿಂಧಾ ರಾಜ್ಯವೆಂದು ಪ್ರಸಿದ್ಧವಾಗಿದೆ .ಮತ್ತು ಇಲ್ಲಿಯೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಇದ್ದು ಇದೀಗ ಭಾರತದಾದ್ಯಂತ ಅತ್ಯಂತ ಪ್ರಖ್ಯಾತಿ ಪಡೆದಿದೆ. ವಿಜಯನಗರ ಸಾಮ್ರಾಜ್ಯದ ಮಾತೃಸ್ಥಾನವು ಕೂಡ ಈ ಆನೆಗುಂದಿಯೇ ಆಗಿತ್ತು.ಇಲ್ಲಿಯ ಹಿರೇಬೆಣಕಲ್ ಸಹಿತ ಸುತ್ತಮುತ್ತಲು ಅನೇಕ ಪ್ರಾಚೀನ ಮಾನವನ ಅವಶೇಷಗಳು, ಸಾವಿರಾರು ಶಿಲಾಯುಗದ ಗವಿಚಿತ್ರಗಳು ಇದ್ದು ದಕ್ಷಿಣಭಾರತದ ಭೀಂಭೇಟ್ಕಾ ( ದೇಶದಲ್ಲಿಯೇ ಅತೀ ಹೆಚ್ಚಿನ ಗವಿ ಚಿತ್ರಗಳಿರುವ ಮಧ್ಯಪ್ರದೇಶದ ಸ್ಥಳ) ಎನಿಸಿದೆ.ಜೊತೆಗೆ ಚಾರಿತ್ರಿಕ ಕಾಲದ ಕೋಟೆ ಕೊತ್ತಲಗಳು, ದೇವಾಲಯ, ಮಂಟಪ, ಸ್ಮಾರಕ ,ಶಿಲ್ಪಗಳಿಂದ ಈ ಪ್ರದೇಶ ತುಂಬಿಹೋಗಿದೆ. ತುಂಗಭದ್ರಾ ನದಿ ಪರಿಸರದ ಈ ಪ್ರದೇಶ ನಿಭೀಡ ಬೆಟ್ಟಗುಡ್ಡಗಳಿಂದ ಕೂಡಿ ಪ್ರಾಕೃತಿಕವಾಗಿ ಅತ್ಯಂತ ರಮಣೀಯವಾಗಿದೆ. ಇಲ್ಲಿ ಅನೇಕ ಪ್ರಕಾರದ ಜಾನಪದ ಪರಂಪರೆ ಇನ್ನೂ ಜೀವಂತವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಆನೆಗುಂದಿ ಭಾಗದ ವಿರುಪಾಪುರ ಗಡ್ಡೆಯಲ್ಲಿ ಜಾನಪದ ಲೋಕವನ್ನು ಸ್ಥಾಪಿಸಬೇಕೆಂದು ಮನವಿ ಮಾಡಲಾಗುತ್ತಿದೆ .ಅಲ್ಲಿ ಸರಕಾರದ ಸುಮಾರು 300 ಎಕರೆಯಷ್ಟು ಜಮೀನು ಲಭ್ಯವಿದೆ. ಅದನ್ನ ಬಳಸಿಕೊಂಡು ಸುಂದರವಾದ ಜಾನಪದ ಲೋಕವನ್ನು ನಿರ್ಮಿಸಬಹುದಾಗಿದೆ. ಇದರಿಂದ ಅಂಜನಾದ್ರಿ ಆನೆಗೊಂದಿ ಭಾಗಕ್ಕೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರಿಗೆ ನಮ್ಮ ನಾಡಿನ ಜಾನಪದ ಪರಂಪರೆಯನ್ನು ಪರಿಚಯಿಸಲು ಅವಕಾಶವಾದಂತಾಗುತ್ತದೆ.

ಈ ಬಗೆಗೆ ಸರಕಾರ ಆಸಕ್ತಿಯನ್ನು ವಹಿಸಬೇಕು ಮತ್ತು ಜಿಲ್ಲಾಡಳಿತ ವಿರುಪಾಪುರ ಗಡ್ಡ್ಡಿಯಲ್ಲಿ ಜಾನಪದ ಲೋಕವನ್ನು ಸ್ಥಾಪಿಸಲು ಸರಕಾರಕ್ಕೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಬೇಕು.ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಶಾಸಕ ಜನಾರ್ದನ್ ರೆಡ್ಡಿ ಅವರು ತಕ್ಷಣ ಪ್ರಯತ್ನಶೀಲರಾಗಬೇಕೆಂದು ಕೋಲ್ಕಾರ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next