ಶಿವಮೊಗ್ಗ: ಬುಟ್ಟಿಗಳಲ್ಲಿ ಮೀನು ಇಟ್ಟುಕೊಂಡು ಮಾರಾಟ ಮಾಡುವ 40 ಜನ ಹೆಣ್ಣು ಮಕ್ಕಳಿಗೆ ಮಾರುಕಟ್ಟೆಯ ಪಕ್ಕದ ಭಾಗದಲ್ಲಿ ತಕ್ಷಣ ಅವಕಾಶ ಮಾಡಿಕೊಡಬೇಕು. 21 ಜನ ಹಳೇ ಬಾಡಿಗೆದಾರರಿಗೆ ಮಳಿಗೆಗಳನ್ನು ನೀಡಬೇಕು ಹಾಗೂ ಮೀನು-ಮಾಂಸ ಮಾರುಕಟ್ಟೆಗೆ ಮೂಲ ಸೌಕರ್ಯಗಳನ್ನುಒದಗಿಸಿ ಕೊಡಬೇಕು ಎಂದು ಮಹಾನಗರಪಾಲಿಕೆ ವಿರೋಧಪಕ್ಷದ ನಾಯಕ ಎಚ್.ಸಿ. ಯೋಗೀಶ್ ಆಗ್ರಹಿಸಿದರು.
ಅವರು ಮಂಗಳವಾರ ನಗರದ ಲಷ್ಕರ್ ಮೊಹಲ್ಲಾದಲ್ಲಿರುವಮೀನು-ಮಾಂಸ ಮಾರುಕಟ್ಟೆಗೆ ಕಾಂಗ್ರೆಸ್ ಸದಸ್ಯರುಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೀನು-ಮಾಂಸ ಮಾರುಕಟ್ಟೆಯಲ್ಲಿ ನಿತ್ಯ ಮೀನು ಮಾರಾಟ ಮಾಡುತ್ತಿರುವ ಸುಮಾರು 40 ಮಂದಿ ಹೆಣ್ಣುಮಕ್ಕಳು ತಮ್ಮ ಸಮಸ್ಯೆ ವಿವರಿಸಿದ್ದಾರೆ. ಅವರಿಗೆ ಮಾರುಕಟ್ಟೆ ಒಳಗಡೆ ಮೀನು ಮಾರಾಟ ಮಾಡಲು ಅವಕಾಶ ಸಿಗುತ್ತಿಲ್ಲ, ಮಹಾನಗರ ಪಾಲಿಕೆಯಿಂದ 21 ಮಳಿಗೆಗಳಿಗೆ ಹರಾಜು ಟೆಂಡರ್ ಕರೆದಿದ್ದಾರೆ. ಟೆಂಡರ್ ವಿವರದಲ್ಲಿ ಪ್ರತಿ ಮಳಿಗೆಗೆ ಕನಿಷ್ಠ ಬಾಡಿಗೆ ದರ 3313 ರಿಂದ 4042 ರೂಪಾಯಿಗಳಿರುತ್ತವೆ. ಇ-ಪ್ರಾಕ್ಯೂರೆಮೆಂಟ್ ಆದುದರಿಂದ ಬಂಡವಾಳ ಶಾಹಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ತದನಂತರ ಒಳ ಬಾಡಿಗೆ ಮುಖಾಂತರ (ಮಹಾನಗರಪಾಲಿಕೆಗೆ ತಿಳಿಯದೆ) ಹೆಚ್ಚಿನ ಹಣಕ್ಕೆ ಬಾಡಿಗೆ ಕೊಡುವ ಸಂಭವವಿದೆ. ಆದ್ದರಿಂದ ಈ ಮಹಿಳೆಯರು ಮೀನು ಮಾರಾಟದಿಂದ ವಂಚಿತರಾಗುತ್ತಾರೆ ಎಂದರು.
ಬಂಡವಾಳಶಾಹಿಗಳಿಂದ ಹೆಚ್ಚಿನ ಹಣಕ್ಕೆ ಬಾಡಿಗೆ ಪಡೆದ ವ್ಯಾಪಾರಸ್ಥರು ತಾವು ಹಾಕಿದ ಬಂಡವಾಳಕ್ಕಾಗಿ ಮೀನು, ಮಾಂಸವನ್ನು ಅತಿಹೆಚ್ಚಿನ ಹಣಕ್ಕೆ ಗ್ರಾಹಕರಿಗೆ ಮಾರ ಬೇಕಾಗುವ ಪ್ರಸಂಗ ಬರುತ್ತದೆ. ಇದೇ ರೀತಿ ಬಾಡಿಗೆ ಪಡೆದ ಮಾರಾಟಗಾರರು ತಮ್ಮ ಅಂಗಡಿ ಮುಂದೆ ಮೀನುಮಾಂಸ ವ್ಯಾಪಾರಮಾಡುವ ಹೆಣ್ಣು ಮಕ್ಕಳಿಗೆ ಅವಕಾಶ ಮಾಡಿಕೊಡುವುದಿಲ್ಲ. ಪಾಲಿಕೆಯ ಅಧಿ ಕಾರಿಗಳು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಸದಸ್ಯರಾದ ಆರ್.ಸಿ. ನಾಯಕ್ ಹಾಗೂ ಮಹಾನಗರಪಾಲಿಕೆಯಸದಸ್ಯರುಗಳಾದ ಶಮೀರ್ ಖಾನ್, ಮಹೇಕ್ ಶರೀಫ್, ಯಮುನಾ ರಂಗೇಗೌಡ, ರೇಖಾ ರಂಗನಾಥ್ ಹಾಗೂ ಮುಖಂಡರುಗಳಾದ ರಂಗೇಗೌಡ, ರಂಗನಾಥ್ ಹಾಗೂ ಮಾರುಕಟ್ಟೆಯ ಪ್ರಮುಖರು ಇದ್ದರು.