Advertisement

ಮಾನವೀಯ ಸ್ಪಂದನಕ್ಕೆ ಉತ್ಸವ ಪ್ರೇರಣೆಯಾಗಲಿ

10:28 AM Dec 23, 2017 | |

ಮಂಗಳೂರು: ಮಾನವೀಯ ಮೌಲ್ಯಗಳ ಪ್ರೇರೇಪಣೆ ಎಲ್ಲ ಉತ್ಸವಗಳ ಮೂಲ ಆಶಯ. ಈ ನಿಟ್ಟಿನಲ್ಲಿ ಕರಾವಳಿ ಉತ್ಸವವು ಆದರ್ಶವಾಗಿದೆ ಎಂದು ಬಹುಭಾಷಾ ನಟ- ನಿರ್ದೇಶಕ ಪ್ರಕಾಶ್‌ ರೈ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ “ಕರಾವಳಿ ಉತ್ಸವ’ವನ್ನು ಅವರು ಶುಕ್ರವಾರ ಉದ್ಘಾಟಿಸಿದರು.

Advertisement

ದಕ್ಷಿಣ ಕನ್ನಡ ಸಹಿತ ಕರಾವಳಿಯು ಅಪೂರ್ವವಾದ ಹಿನ್ನೆಲೆಯನ್ನು ಹೊಂದಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹತ್ವದ ಸಾಧನೆ ಮಾಡಿದವರು ಈ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇಲ್ಲಿನ ಸಂಪ್ರದಾಯ, ಪರಂಪರೆ ನೆಲ- ಜಲ ಸಂರಕ್ಷಣೆಗೆ ಪ್ರೇರಕವಾಗಿದೆ.  ಸಾಧಕರಿಗೆ ಗೌರವ, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಈ ಉತ್ಸವದ ಬಗ್ಗೆ ನನಗೆ ಹೆಮ್ಮೆಯಿದೆ. ನಾನು ಕರಾವಳಿಯ ಈ ಪ್ರದೇಶದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಅವಕಾಶವಿದ್ದಾಗಲೆಲ್ಲ ಇಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಎಂದವರು ನುಡಿದರು. 

ಪರಂಪರೆ: ರಮಾನಾಥ ರೈ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ದ. ಕನ್ನಡ ಸಹಿತ ಕರಾವಳಿ ಅಪೂರ್ವ ಪರಂಪರೆಯನ್ನು ಹೊಂದಿದ್ದು, ಇದರ ಅನಾವರಣ ಕರಾವಳಿ ಉತ್ಸವದ ಆಶಯವಾಗಿದೆ ಎಂದರು.

ಉತ್ಸವಕ್ಕೆ ಜನತೆ ಸಂಪೂರ್ಣ ಸಹಕಾರ ನೀಡುವಂತೆ ಮೆರವಣಿಗೆಯನ್ನು ಉದ್ಘಾಟಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವ ಯು. ಟಿ. ಖಾದರ್‌ ವಿನಂತಿಸಿದರು. ಕರಾವಳಿ ಉತ್ಸವವು ಭಾವೈಕ್ಯದ ಪ್ರತೀಕವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ. ಆರ್‌. ಲೋಬೋ ನುಡಿದರು.

ಶಾಸಕ ಮೊದಿನ್‌ ಬಾವಾ, ಮೇಯರ್‌ ಕವಿತಾ ಸನಿಲ್‌, ಬಿ.ಎಚ್‌. ಖಾದರ್‌, ಕೆ. ಸುರೇಶ್‌ ಬಲ್ಲಾಳ್‌, ಎ.ಸಿ. ಭಂಡಾರಿ, ನರೇಂದ್ರ ನಾಯಕ್‌, ಪ್ರದೀಪ್‌ ಕುಮಾರ್‌ ಕಲ್ಕೂರ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಜಿ.ಪಂ. ಸಿಇಒ ಡಾ| ಎಂ.ಆರ್‌. ರವಿ, ಪೊಲೀಸ್‌ ಆಯುಕ್ತ ಟಿ. ಆರ್‌. ಸುರೇಶ್‌ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್‌ ಸ್ವಾಗತಿಸಿದರು. ಮನಪಾ ಆಯುಕ್ತ ಮಹಮ್ಮದ್‌ ನಜೀರ್‌ ವಂದಿಸಿದರು. ಎಂ. ಪಿ. ನಿರೂಪಿಸಿದರು. 

Advertisement

“ನೀವು ಮಾನವರೋ ಅಥವಾ…!?’
ತಮ್ಮ ಭಾಷಣದಲ್ಲಿ ಸಂಸದ ಪ್ರತಾಪಸಿಂಹ ಅವರನ್ನು ಕುಟುಕಿದ ಪ್ರಕಾಶ್‌ ರೈ, “ನೀವು ಮಾನವರೋ ಅಥವಾ ಪ್ರಾಣಿಯೋ? ಏಕೆಂದರೆ ನಿಮ್ಮ ಹೆಸರಿನಲ್ಲಿ ನೀವು ಸಿಂಹವನ್ನು ಇಟ್ಟುಕೊಂಡವರು. ಆದರೆ ಹೆಸರು ಮುಖ್ಯವಲ್ಲ, ಮಾನವೀಯ ಗುಣಗಳು ಮುಖ್ಯ. ನಾನು ಪ್ರಕಾಶ್‌ ರೈ ಮತ್ತು ಪ್ರಕಾಶ್‌ರಾಜ್‌ ಎಂಬ ಎರಡು ಹೆಸರು ಇರಿಸಿಕೊಂಡಿರುವ ಬಗ್ಗೆ ಪ್ರಶ್ನಿಸಿದ್ದೀರಿ. ನಾನು ಮಾನವನಾಗಿ ಪ್ರಕಾಶ್‌ ರೈ, ಕಲಾವಿದನಾಗಿ ಪ್ರಕಾಶ್‌ರಾಜ್‌. ಎಲ್ಲ ಭಾಷೆಗಳವರು ನನ್ನ ಮೇಲೆ ಪ್ರೀತಿ ಹೊಂದಿದ್ದಾರೆ; ನಾನು ಕನ್ನಡಿಗ ಮತ್ತು ತುಳುನಾಡಿನವನು. ಇಲ್ಲಿಯ ಜನತೆಯ ಬಗ್ಗೆ ನನಗೆ ಅಪಾರ ಅಭಿಮಾನವಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next