ತುಮಕೂರು: ಕಲ್ಪತರು ನಾಡಾಗಿರುವ ಜಿಲ್ಲೆಗೆ ಕಳೆದ 2-3 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಬರ ಪರಿಸ್ಥಿತಿ ಎದುರಿಸುವ ಪರಿಸ್ಥಿತಿ ಉಂಟಾಗಿದ್ದು, ರೈತರು ಕೇವಲ ತೆಂಗು ಬೆಳೆಗಷ್ಟೇ ಜೋತು ಬೀಳದೆ ಗೋಡಂಬಿ ಬೆಳೆಯಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ನಗರದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲಾ ಕಲಾವಿದರಿಗಿಂತ ಶ್ರೇಷ್ಟ ಕಲಾಕಾರನೆಂದರೆ ನಮ್ಮ ಪ್ರಕೃತಿ. ಈ ಪ್ರಕೃತಿ ಕಲಾಕೃತಿಯ ಮುಂದೆ ನಾವೆಲ್ಲ ಮಾಡುವುದು ಕೃತಕ. ಆದರೆ ಈಗಿನ ಧಾವಂತ ಬದುಕಿನಲ್ಲಿ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಜೀವನದ ಬದುಕಿನಲ್ಲಿ ರೂಢಿಸಿಕೊಂಡಾಗ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಕೃಷಿ ಜೊತೆಗೆ ಎಲ್ಲಾ ಉಪಕಸುಬು ಮಾಡುವ ಮೂಲಕ ರೈತರು ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು. ಜಿಲ್ಲೆಯಲ್ಲಿ ಪುಷ್ಪ ಕೃಷಿಗೆ ಹೇರಳ ಅವಕಾಶವಿದ್ದು, ಜಿಲ್ಲೆಯ ಕೃಷಿಕರು ಫಲಪುಷ್ಪ ಪ್ರದರ್ಶನದಿಂದ ಸಲಹೆ, ಮಾರ್ಗದರ್ಶನ ಪಡೆದು ಹೆಚ್ಚಿನ ಆದಾಯ ಗಳಿಸಬಹುದು ಎಂದು ಹೇಳಿದರು. ಜೇನು ಕೃಷಿ ಲಾಭದಾಯಕ ಉದ್ಯಮವಾಗಿದ್ದು, ಅನುಭವಿಗಳಿಂದ ಸಲಹೆ ಪಡೆದು ಆರಂಭಿಸಬೇಕು.
ನೀರಿನ ಮಿತ ಬಳಕೆ ಬಗ್ಗೆ ಗಮನ ಹರಿಸಿ ಜಿಲ್ಲೆಯಲ್ಲಿ ಹೂವು ತರಕಾರಿ ಮತ್ತು ಕೈತೋಟದ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು. ಮೇಯರ್ ಫರೀದಾ ಬೇಗಂ ಮಾತನಾಡಿ, ಕೃಷಿ ಪ್ರಧಾನ ದೇಶದಲ್ಲಿ ಮಾದರಿ ಕೃಷಿ ಬಗ್ಗೆ ಮಾಹಿತಿ ಪಡೆದು ರೈತರು ಹೆಚ್ಚಿನ ಆದಾಯ ಗಳಿಸಬೇಕು. ಮಹಾಪೌರರಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದು, ಜವಾಬ್ದಾರಿ ಸ್ಫೂರ್ತಿದಾಯಕವಾಗಿ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಮಾತನಾಡಿ, ಫಲಪುಷ್ಪ ಪ್ರದರ್ಶನದಿಂದ ರೈತರಿಗೆ ಒಂದೇ ಸೂರಿನಡಿ ಹೆಚ್ಚು ಮಾಹಿತಿ ಸಿಗುವುದರ ಜೊತೆಗೆ ಇರುವ ಸಂಪನ್ಮೂಲದಲ್ಲೇ ಸರ್ಕಾರಿ ನೌಕರರು ಪಡೆಯುವ ವೇತನದ ಮಾದರಿಯಲ್ಲಿ ಆದಾಯ ಹೇಗೆ ಗಳಿಸಿಕೊಳ್ಳಬಹುದು, ಅಣಬೆ, ಕುರಿ-ಮೇಕೆ ಸಾಕಾಣಿಕೆಯಿಂದ ಬರಪೀಡಿತ ಜಿಲ್ಲೆಯಲ್ಲೂ ಆದಾಯ ಗಳಿಸಬಹುದು ಎಂದು ಅರಿತುಕೊಳ್ಳಲು ಸಲಹೆ ನೀಡಿದರು.
ಜಿಪಂ ಉಪಾಧ್ಯಕ್ಷೆ ಶಾರದ ಮಾತನಾಡಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋ.ನ ವಂಶಿಕೃಷ್ಣ, ಜಿಪಂ ಸದಸ್ಯರಾದ ನವ್ಯಬಾಬು, ಲಕ್ಷಿ ನರಸಿಂಹಗೌಡ, ತೋಟಗಾರಿಕಾ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ, ತೋಟಗಾರಿಕಾ ಉಪ ನಿರ್ದೇಶಕರಾದ ಡಿ. ರಘು, ರೂಪಾ ಮತ್ತಿತರರಿದ್ದರು.