Advertisement

ಕೊರಮ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ ಆಗಲಿ

04:20 PM Nov 16, 2021 | Team Udayavani |

ಬೆಳಗಾವಿ: ಕೊರಮ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಸರ್ಕಾರ ಸ್ಪಂದಿಸಬೇಕು ಎಂದು ಅರಳಿಕಟ್ಟಿ ಬಸ್ಸಾಪುರ ವಿರಕ್ತಮಠದ ಶ್ರೀ ಶಿವಮೂರ್ತಿ ದೇವರು ಹೇಳಿದರು. ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಶಿವಶರಣ ನೂಲಿ ಚಂದಯ್ಯ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ಕೊರಮ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಸಮಾಜವನ್ನು ಗುರುತಿಸುವ ಕೆಲಸ ಸರ್ಕಾರ ಮಾಡಬೇಕು. ರಾಜಕೀಯವಾಗಿ ಬೆಳೆದರೆ ಸಮಾಜ ಮತ್ತಷ್ಟು ಮುಂದೆ ಬರಲಿದೆ. ಒಗ್ಗಟ್ಟಾಗಿ ಇದ್ದರೆ ಯಾರೂ ನಮ್ಮನ್ನು ವಿಭಜಿಸಲು ಸಾಧ್ಯವಿಲ್ಲ. ಮುಂದೊಂದು ದಿನಗಳಲ್ಲಿ ಕೊರಮ ಸಂಘಟನೆ ಬೆಳೆದರೆ ರಾಜ್ಯದಲ್ಲಿ ಕೊರಮ ಸಮಾಜದ ಶಾಸಕರು ಹಾಗೂ ಮುಖ್ಯಮಂತ್ರಿಗಳಾಗಲಿದ್ದಾರೆ. ಈ ನಿಟ್ಟಿನಲ್ಲಿ ಸಮಾಜ ಸಂಘಟನೆ ಆಗಬೇಕು. ಒಗ್ಗಟ್ಟಾಗಿ ಇದ್ದರೆ ಸಮಾಜದಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲಲು ಸಾಧ್ಯವಿದೆ ಎಂದು ಹೇಳಿದರು.

1.25 ಲಕ್ಷಕ್ಕೂ ಹೆಚ್ಚು ಜನ ಜಿಲ್ಲೆಯಲ್ಲಿ ಕೊರಮ ಸಮಾಜ ಬಾಂಧವರು ಇದ್ದಾರೆ. ನಮ್ಮಿಂದಲೇ ನಾಯಕರು ಇರುತ್ತಾರೆ. ನಾಯಕರಿಂದ ನಾವಲ್ಲ. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಮುಟ್ಟಿಸಲು ಸಾಧ್ಯವಿದೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು. ಸುಳೇಭಾವಿ ಗ್ರಾಪಂನವರು ಜಾಗ ನೀಡಿ ನೂಲು ಚಂದಯ್ಯ ದೇವಸ್ಥಾನ ನಿರ್ಮಿಸಲು ಅನುಕೂಲ ಮಾಡಿಕೊಡಬೇಕು ಎಂದರು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಅತಿ ಹಿಂದುಳಿದ ಕೊರಮ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು. ನೂಲಿ ಚಂದಯ್ಯ ಅವರ ಆದರ್ಶಗಳು ನಮ್ಮಪಾಲಿಗೆ ಕಾಯಕನಿಷ್ಠೆಯ ಪಾಠ ಹೇಳುತ್ತಿವೆ. ಕಾಯಕ ನಿಷ್ಠೆ ಮೂಲಕ ನಾವೆಲ್ಲರೂ ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕೊರಮ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಸುಖಸಾರೆ ಮಾತನಾಡಿ, ಲಿಪಿ ಇಲ್ಲದ ಈ ಕೊರಮ ಭಾಷೆ ಉಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಸಂಶೋಧನೆ ನಡೆಯಬೇಕಿದೆ. ಸಂಘಟನೆ ಮೂಲಕ ಎಲ್ಲರೂ ಅಭಿವೃದ್ಧಿ ಆಗಬೇಕಿದೆ ಎಂದರು. ಲೋಂಡಾ ಪಿಡಿಒ ಬಾಲರಾಜ ಭಜಂತ್ರಿ ಮಾತನಾಡಿ, ಲಿಂಗ ಪೂಜೆಗಿಂತ ಕಾಯಕ ನಿಷ್ಠೆ ಶ್ರೇಷ್ಠ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟ ಮಹಾನ್‌ ಶರಣರು ನೂಲಿ ಚಂದಯ್ಯ. ಇಡೀ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಇವರ ತತ್ವಾದರ್ಶಗಳು ನಮ್ಮ ದಾರಿದೀಪವಾಗಿವೆ ಎಂದರು.

Advertisement

ಬೆಂಗಳೂರು ಸಿಐಡಿ ಸಿಪಿಐ ಹನುಮಂತ ಭಜಂತ್ರಿ ಮಾತನಾಡಿ, ಕೊರಮ ಸಮಾಜ ಶೋಷಣೆ ಸ್ಥಿತಿಯಲ್ಲಿ ಇದೆ. ಮಕ್ಕಳನ್ನು ಶಿಕ್ಷಣದಲ್ಲಿ ಮುಂದೆ ತರಬೇಕಾಗಿದೆ. ಚಿಕ್ಕ ಸಮಾಜವಿದ್ದು, ಎಲೆ ಮರೆಯ ಕಾಯಿಯಂತೆ ಇದ್ದೇವೆ. ಸಂಘಟನೆ ಆಗದೇ ಇರುವುದು ಸಮಾಜಕ್ಕೆ ಹಿನ್ನಡೆ ಆಗಿದೆ. ಹಳ್ಳಿ ಹಳ್ಳಿಗಳಲ್ಲಿ ಸಮಾಜ ಕಟ್ಟುವ ಕೆಲಸ ಆಗಬೇಕಿದೆ. ಸಮಾಜಕ್ಕಾಗಿ ಪ್ರತಿಯೊಬ್ಬರೂ ದುಡಿದು ಅಳಿಲು ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ರಾಮಜಿ ಭಜಂತ್ರಿ, ಹೂವಪ್ಪ ಭಜಂತ್ರಿ, ಶ್ರೀ ಮಹಾಕ್ಷ್ಮಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್‌ ಕಮಿಟಿ ಅಧ್ಯಕ್ಷ ದೇವಣ್ಣ ಬಂಗೇನ್ನವರ, ಪ್ರವೀಣ ಖಣಗಲಿ, ಯಮನಪ್ಪ ಭಜಂತ್ರಿ, ಮಂಗಲವಾದ್ಯ ಬ್ಯಾಂಡ್‌ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಪರುಶರಾಮ ಭಜಂತ್ರಿ ಬಸವರಾಜ ಭಜಂತ್ರಿ, ಬಸ್ಸು ವಾಜಂತ್ರಿ, ಅಶೋಕ ಭಜಂತ್ರಿ, ಅಶೋಕ ಕುಡಚಿ, ಪರುಶರಾಮ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಕಿರಣ ಭಜಂತ್ರಿ, ಬಲಭೀಮ ಕುಡಚಿ, ಆನಂದ ಭಜಂತ್ರಿ ಸೇರಿದಂತೆ ಇತರರು ಇದ್ದರು. ಬಿ.ಬಿ. ಹಿರೇಕೊಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next