Advertisement

ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯು ಪರೀಕ್ಷೆ ಪಾರದರ್ಶಕವಾಗಿರಲಿ

07:31 PM Apr 08, 2021 | Team Udayavani |

ವಿಜಯಪುರ: ಈಗಾಗಲೇ ಪರೀಕ್ಷಾ ದಿನಾಂಕ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಪೂ ದ್ವಿತೀಯ ವರ್ಷದ ಪರೀಕ್ಷೆಗಳು ಪಾರದರ್ಶಕವಾಗಿ
ನಡೆಸಬೇಕಿದೆ. ಕೋವಿಡ್‌ ಮುನ್ನೆಚ್ಚರಿಕೆ ಜೊತೆಗೆ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವ
ಸುರೇಶಕುಮಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಬುಧವಾರ ನಗರದಲ್ಲಿರುವ ಜಿಪಂ ಸಭಾಂಗಣದಲ್ಲಿ ವಿಜಯಪುರ, ಬಾಗಲಕೋಟೆ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖೆ ಅ ಧಿಕಾರಿಗಳೊಂದಿಗೆ 2021 ಎಸ್ಸೆಸ್ಸೆಲ್ಸಿ-ಪಿಯುಸಿ ದ್ವಿತೀಯ ವರ್ಷದ ಪರೀಕ್ಷಾ ಪೂರ್ವ ಸಿದ್ಧತೆ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಪಿಯುಸಿ ಪರೀಕ್ಷೆಗಾಗಿ 79,619 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಮೇ 24ರಿಂದ ಪಿಯುಸಿ ಪರೀಕ್ಷೆ ಜೂ. 21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಈಗಾಗಲೇ ದಿನಾಂಕ
ಘೊಷಿಸಲಾಗಿದೆ ಎಂದರು.

ಈ ಬಾರಿ ಪರೀಕ್ಷೆ ನಡೆಸುವುದು ಹಿಂದಿಗಿಂತ ಸವಾಲಿನ ಕೆಲಸವಾಗಿದ್ದರೂ ಇದು ನಮ್ಮ ಪ್ರತಿಷ್ಠೆಯಲ್ಲ ಕರ್ತವ್ಯ. ಹೀಗಾಗಿ ಪರೀಕ್ಷೆಯ ಪಾವಿತ್ರತೆ ಕಾಪಾಡಿಕೊಳ್ಳಲು ನಕಲು ಮುಕ್ತ, ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು. ಅತ್ಯಂತ ವ್ಯವಸ್ಥಿತ ಎಸ್‌ಒಪಿ ಜಾರಿಯಾಗಲಿದೆ. ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಲೋಪಕ್ಕೆ ಅವಕಾಶ ನೀಡದೆ ವ್ಯವಸ್ಥಿತ ಸೌಲಭ್ಯ ಕಲ್ಪಿಸಿಕೊಳ್ಳುವುದ ನಮ್ಮ ಕರ್ತವ್ಯ ಎಂದು ಭಾವಿಸಬೇಕು. ಪರೀಕ್ಷೆ ನಡೆಸುವ ಕುರಿತು ಮಕ್ಕಳೊಂದಿಗೆ ನಡೆಸಿದ ಸಂವಾದದಲ್ಲಿ ಮಕ್ಕಳು ಪರೀಕ್ಷೆ ನಡೆಸಿ ಎಂದು ಒಕ್ಕೋರಲ ಅಭಿಪ್ರಾಯ ನೀಡಿದ್ದು, ಪರೀಕ್ಷೆ ಎದುರಿಸುವ ಪರೀಕ್ಷಾರ್ಥಿಗಳೇ ನಿಜವಾದ ಕೋವಿಡ್‌ ವಾರಿಯರ್‌
ಎಂದು ಬಣ್ಣಿಸಿದರು.

ಪರೀಕ್ಷಾರ್ಥಿಗಳ ಬಗ್ಗೆ ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಎಲ್ಲರೂ ವಿಶೇಷ ಮಮತೆ ಹೊಂದಬೇಕು. ಪರೀಕ್ಷಾರ್ಥಿಗಳು ಸಮರ್ಥವಾಗಿ ಪರೀಕ್ಷೆ ಎದುರಿಸುವಂತೆ ಆತ್ಮಸ್ಥೈರ್ಯ ತುಂಬಬೇಕು. ಒಂದು ಮಗುವೂ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತ ಆಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಸಮೀಕ್ಷೆ ನಡೆಸಿ ಮೈಕ್ರೋ ನಿರ್ವಹಣೆ ಮಾಡಬೇಕು.ಪರೀಕ್ಷಾರ್ಥಿಗಳು ಪರೀಕ್ಷೆ ಕೇಂದ್ರಗಳಿಗೆ ಸುಲಭವಾಗಿ ಬಂದು-ಹೋಗಲು ಸಾರಿಗೆ ಸೌಕರ್ಯದ ಕುರಿತು ಪೂರ್ವ ಸಿದ್ಧತೆಗಾಗಿ ಪರಿಶೀಲನೆ ನಡೆಸಬೇಕು.

ಎಲ್ಲಕ್ಕಿಂತ ಹೆಚ್ಚಾಗಿ ನಾವು ಇದೀಗ ಕೋವಿಡ್‌ ಜೊತೆ ಬದುಕುವ ಪರಿಸ್ಥಿತಿ ಎದುರಾಗಿದ್ದು, ಮಕ್ಕಳಲ್ಲಿ ಈ ಬಗ್ಗೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ
ವಾತಾವರಣ ಸೃಷ್ಟಿಸಬೇಕು ಎಂದು ಸೂಚಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರಿ ಶಾಲಾ ಶಿಕ್ಷಕರು ಪಾಲಕರೊಂದಿಗೆ ಸಂಪರ್ಕ ಸಾ
ಧಿಸಲು ಮಾಡಿದ ಕಾರ್ಯ ಅತ್ಯಂತ ಶ್ಲಾಘನೀಯ. ವಿದ್ಯಾರ್ಥಿಗಳ ಅನುಕೂಲತೆ ಹಿತದೃಷ್ಟಿಯಿಂದ ಶೇ. 30 ಪಠ್ಯ ಕಡಿಮೆ ಮಾಡಿ, ವಿದ್ಯಾರ್ಥಿಗಳಲ್ಲಿ
ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಇರುವ
ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಶುಚಿತ್ವಕ್ಕೆ ಆದ್ಯತೆ ನೀಡಿ, ಸುಸೂತ್ರವಾಗಿ ಪರೀಕ್ಷೆ ನಡೆಯಲು ಅನುಕೂಲ ಕಲ್ಪಿಸಬೇಕು. ಇದಕ್ಕಾಗಿ ಎನ್ನೆಸ್ಸೆಸ್‌, ಎನ್‌
ಸಿಸಿ, ಸ್ಕೌಟ್ಸ್‌-ಗೈಡ್ಸ್‌, ರೆಡ್‌ಕ್ರಾಸ್‌ ಹೀಗೆ ಸರ್ಕಾರೇತರ ಹಾಗೂ ಸ್ವಯಂ ಸೇವಕ ಸಂಘಟನೆಗಳ ಸಹಕಾರ ಪಡೆಯಲು ಯೋಜಿಸಲಾಗಿದೆ ಎಂದರು.

Advertisement

ಈ ಭಾಗದ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳದ ಜೊತೆಗೆ ಭವಿಷ್ಯದಲ್ಲಿ ಅತ್ಯುನ್ನತ ಸ್ಥಾನ ಹೊಂದಬೇಕು ಎಂಬುದು ನನ್ನ ಮಹದಾಸೆ. ಇದಕ್ಕಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಪ್ರೇರಣೆ ನೀಡುವ ಕೆಲಸದಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಜಿಲ್ಲೆ, ತಾಲೂಕು ಹಾಗೂ
ಪರೀûಾ ಕೇಂದ್ರವಾರು ಲಭ್ಯ ಸೌಲಭ್ಯ, ಕೊರತೆಗಳ ಬಗ್ಗೆ ವಾಸ್ತವಿಕ ಸ್ಥಿತಿಯನ್ನು ಅರಿಯಲು ಪರೀಕ್ಷೆ ನಡೆಯುವ ಮುನ್ನವೇ ಪೂರ್ವಭಾವಿ ಸ್ಥಳ
ಪರಿಶೀಲನೆ ನಡೆಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕೊರತೆಗಳಿದ್ದಲ್ಲಿ ತಕ್ಷಣವೇ ಲೋಪ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ 38,101, ಬಾಗಲಕೋಟೆ ಜಿಲ್ಲೆಯಲ್ಲಿ 32,799 ಹಾಗೂ ಚಿಕ್ಕೋಡಿ ಶೈಕ್ಷಣಿಕ
ಜಿಲ್ಲೆಯಲ್ಲಿ 45,049 ಪರೀಕ್ಷಾರ್ಥಿಗಳು ಸೇರಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 1,15,949 ಪರೀಕ್ಷಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ ಸಭೆಯಲ್ಲಿ ಮಾತನಾಡಿದ ಶಿಕ್ಷಕರ ಕ್ಷೇತ್ರದ ಮೇಲ್ಮನೆ ಶಾಸಕ ಅರುಣ ಶಹಾಪುರ, ಮುಂಬರುವ ಈ ಪರೀಕ್ಷೆಗಳನ್ನು ನಕಲು ಮುಕ್ತವಾಗಿ ಅತ್ಯಂತ ದಕ್ಷತೆ ಹಾಗೂ ಪರೀಕ್ಷಾ ಪವಿತ್ರತೆ ಕಾಯ್ದುಕೊಳ್ಳಬೇಕು. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಎಸ್‌ಒಪಿ ಮಾನದಂಡ  ಯುಪಿಎಸ್ಸಿ ಪರೀಕ್ಷೆಗಳಿಗೆ ಮಾದರಿ ಇದ್ದು, ಅತ್ಯಂತ
ಯಶಸ್ವಿ ರೀತಿಯಲ್ಲಿ ಪರೀಕ್ಷೆ ನಡೆಸಬೇಕು. ಪರೀಕ್ಷೆ ಎದುರಿಸುವ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು ಎಂದು ಸಲಹೆ
ನೀಡಿದರು.

ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ ಮಂಗಳಾ ನಾಯಕ, ಪಪೂ ಇಲಾಖೆ ಸಹ ನಿರ್ದೇಶಕ ಕೃಷ್ಣ ಪ್ರಸಾದ
ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next