ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಇದರ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ವೇಳಾಪಟ್ಟಿ ಹಿನ್ನೆಲೆಯಲ್ಲಿ ಬುಧವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಎ.13ರಂದು ಅಧಿಸೂಚನೆ ಹೊರಟರೆ, ಮೇ 10ರಂದು ಮತದಾನ ಮತ್ತು ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣ ಆಯೋಗದ ಮುಖ್ಯ ಆಯುಕ್ತರಾದ ರಾಜೀವ್ ಕುಮಾರ್ ಬುಧವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟಿಸಿ, ಕರ್ನಾಟಕದ ಕುರಿತಾದ ಕೆಲವೊಂದು ಆತಂಕದ ಸಂಗತಿಗಳನ್ನೂ ಹೊರಗೆಡಹಿದ್ದಾರೆ. ಇಲ್ಲಿ ಹಣಬಲ, ತೋಲ್ಬಳ ಹೆಚ್ಚು ಕೆಲಸ ಮಾಡುವುದು ಕಂಡು ಬಂದಿದೆ. ಅಲ್ಲದೆ ಕಳೆದ ವಿಧಾನಸಭೆ ಚುನಾವಣೆ ವೇಳೆ ವಶಪಡಿಸಿಕೊಂಡ ಅಕ್ರಮ ಹಣ, ಉಡುಗೊರೆಯ ಮೌಲ್ಯಕ್ಕಿಂತ ಹೆಚ್ಚು ಈ ಬಾರಿ ನೀತಿ ಸಂಹಿತೆಗೂ ಮುನ್ನವೇ ವಶಪಡಿಸಿಕೊಂಡಿದ್ದೇವೆ. ಒಂದು ರೀತಿಯಲ್ಲಿ ಇದೇ ನಮಗೆ ಸವಾಲಾಗಿದೆ ಎಂದೂ ಹೇಳಿದ್ದಾರೆ.
ಒಂದು ರೀತಿಯಲ್ಲಿ ಹೇಳುವುದಾದರೆ, ರಾಜೀವ್ ಕುಮಾರ್ ಅವರ ಈ ಆತಂಕ, ಕರುನಾಡಿನ ಜನರಿಗೆ ಒಂದು ರೀತಿಯಲ್ಲಿ ಅವಮಾನಕರವಾಗಿದೆ. ಸಭ್ಯ, ಬುದ್ಧಿವಂತ, ವಿದ್ಯಾವಂತ ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕದಲ್ಲಿ ಇಂದಿಗೂ ಹಣಬಲ, ತೋಳ್ಬಲವೇ ಚುನಾವಣ ಫಲಿತಾಂಶವನ್ನು ನಿರ್ಧಾರ ಮಾಡುತ್ತವೆ ಎಂದಾದರೆ ನಾವು ಎತ್ತ ದಿಕ್ಕಿಗೆ ಸಾಗುತ್ತಿದ್ದೇವೆ ಎಂಬ ಪ್ರಶ್ನೆಯನ್ನೂ ನಾವೇ ಕೇಳಿಕೊಳ್ಳಬೇಕಾಗಿದೆ.
ಈ ಹಣಬಲ ಮತ್ತು ತೋಳ್ಬಲವನ್ನು ನಿಯಂತ್ರಿಸುವ ಸಲುವಾಗಿ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ಆಯೋಗವೇ ಹೇಳಿದೆ. ಅಕ್ರಮ ಹಣ ಓಡಾಟ, ಆನ್‌ಲೈನ್‌ನಲ್ಲೂ ಸಂದೇಹಾಸ್ಪದವಾಗಿ ಹಣದ ಹರಿವು ಮತ್ತು ಮದ್ಯ, ಉಡುಗೊರೆಯ ಹಂಚಿಕೆಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ ಎಂದು ಆಯೋಗವೇ ಹೇಳಿದೆ. ಒಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ, ಆಯೋಗ ಗಟ್ಟಿ ನಿರ್ಧಾರ ತೆಗೆದುಕೊಂಡಿರುವುದು ಒಳ್ಳೇಯದೇ ಆಗಿದೆ. ವಿಚಿತ್ರವೆಂದರೆ ರಾಜ್ಯದಲ್ಲಿ ಚುನಾವಣ ಚಟುವಟಿಕೆ ಆರಂಭವಾದಾಗಲೇ, ಆಯೋಗವು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ ಹಣದ ಅಕ್ರಮ ಸಾಗಾಟ, ಉಡುಗೊರೆಗಳ ಹಂಚಿಕೆ ಮೇಲೆ ಕಣ್ಣಿಟ್ಟಿತ್ತು.
ಮತದಾರರಿಗೆ ಆಮಿಷ ತಡೆಗಟ್ಟುವಿಕೆಯಲ್ಲಿ ಆಯೋಗದ ಕ್ರಮ ಉಚಿತವೇ ಆಗಿದೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಆಯೋಗ ಹೇಗೆ ಕೆಲಸ ಮಾಡುತ್ತದೆ ಎಂಬುದು ತುಂಬಾ ಪ್ರಮುಖವಾಗುತ್ತದೆ. ಮುಕ್ತ, ಪಾರದರ್ಶಕ, ನಿರ್ಭೀತ ಚುನಾವಣೆ ನಡೆಸಲು ಬದ್ಧವಾಗಿದ್ದು, ಚುನಾವಣ ಅಕ್ರಮ ಮತ್ತು ಆಮಿಷಗಳ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಯೋಗ ಹೇಳಿದೆ. ಅಭ್ಯರ್ಥಿಗಳ ಚುನಾವಣ ವೆಚ್ಚದ ಮೇಲೂ ಆಯೋಗ ಕಣ್ಣಿಡಬೇಕಾಗಿದೆ. ಈ ಬಾರಿ ಪ್ರತಿಯೊಬ್ಬ ಅಭ್ಯರ್ಥಿಗೂ 40 ಲಕ್ಷ ರೂ. ವೆಚ್ಚದ ಮಿತಿ ನಿಗದಿ ಪಡಿಸಲಾಗಿದೆ. ಇದರ ಮೇಲೆ ನಿಗಾ ಇಡುವ ಸಲುವಾಗಿಯೇ, ಫ್ಲೈಯಿಂಗ್ ಸ್ಕ್ವಾಡ್, ಸ್ಥಿರ ಕಣ್ಗಾವಲು ತಂಡ, ವೀಡಿಯೋ ವೀಕ್ಷಣೆ ತಂಡ, ಖಾತೆ ತಂಡ, ಮಾಧ್ಯಮ ಪ್ರಮಾಣೀಕರಣ ಮತ್ತು ಮಾನಿಟರಿಂಗ್ ಕಮಿಟಿ, ಜಿಲ್ಲಾ ಖರ್ಚು ಮಾನಿಟರಿಂಗ್ ವ್ಯವಸ್ಥೆ, ರಾಜ್ಯ ಪೊಲೀಸ್, ಅಬಕಾರಿ, ಆದಾಯ ತೆರಿಗೆ ಇಲಾಖೆಯ ತನಿಖಾ ನಿರ್ದೇಶನಾಲಯ, ಜಾರಿ ನಿರ್ದೇಶನಾಲಯ, ಹಣಕಾಸು ಗುಪ್ತಚರ ಘಟಕ ಮತ್ತಿತರ ತಂಡಗಳನ್ನು ರಚಿಸಲಾಗಿದೆ.
ಬ್ಯಾಂಕ್ ವ್ಯವಹಾರಗಳ ಮೇಲೂ ಕಣ್ಣಿಟ್ಟಿರುವ ಆಯೋಗ, ಯಾವುದೇ ಸಂದೇಹಾಸ್ಪದ ವಹಿವಾಟು ಕಂಡು ಬಂದರೂ ನಮಗೆ ಮಾಹಿತಿ ನೀಡಿ ಎಂದು ಬ್ಯಾಂಕುಗಳಿಗೆ, ಆರ್‌ಬಿಐಗೆ ಕೇಳಿಕೊಂಡಿದೆ. ಈ ಎಲ್ಲ ಸಿದ್ಧತೆಗಳನ್ನು ನೋಡಿದರೆ, ಎಲ್ಲಿಯೂ ಅಕ್ರಮ ನಡೆಯಕೂಡದು ಎಂಬುದು ಆಯೋಗದ ಉದ್ದೇಶವಾಗಿದೆ.
ಏನೇ ಆಗಲಿ ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬುದು ಪವಿತ್ರ ಕಾರ್ಯ. ಇದರಲ್ಲಿ ಜನರೂ ಸಕ್ರಿಯವಾಗಿ ಭಾಗಿಯಾಗಬೇಕಾದ ಅಗತ್ಯವಿದೆ. ಹಾಗೆಯೇ ರಾಜಕೀಯ ಪಕ್ಷಗಳು, ಕಾರ್ಯಾಂಗ, ಚುನಾವಣ ಆಯೋಗ ಸಹಿತ ಒಟ್ಟಾಗಿ ಪಾರದರ್ಶಕ, ನಿರ್ಭೀತ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಈ ರೀತಿ ಚುನಾವಣೆ ನಡೆದಾಗ ಮಾತ್ರ ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆ ಇನ್ನಷ್ಟು ಗಟ್ಟಿಯಾಗಲು ಸಾಧ್ಯವಾಗುತ್ತದೆ.