ಮೈಸೂರು: ವಿದ್ಯಾರ್ಥಿಗಳು ತಮ್ಮ ಸ್ವ ಸಾಮರ್ಥ್ಯದ ಮೇಲೆ ಆತ್ಮವಿಶ್ವಾಸ ಹಾಗೂ ದೃಢ ನಂಬಿಕೆ ಹೊಂದಿರಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ರತ್ನಾ ಹೇಳಿದರು. ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ಕಾಲೇಜಿನ ಕೆಂಪನಂಜಮ್ಮಣ್ಣಿ ಸಭಾ ಮಂಟಪದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕನಸು ಕಾಣುವ ಮನೋಭಾವ ಇರಬೇಕು. ಇದರ ಜೊತೆಗೆ ಸ್ಪಷ್ಟ ಗುರಿ ಇರಬೇಕು. ಇದರಿಂದ ನಿಮ್ಮ ಮುಂದಿನ ಹಾದಿ ಸುಗಮವಾಗಿರುತ್ತದೆ. ನಮ್ಮಲ್ಲಿರುವ ಲೋಭ, ಮೋಹ, ಅಜ್ಞಾನ ತೊಡೆದುಹಾಕಿ ಉತ್ತಮ ಮೌಲ್ಯ, ವಿವೇಕ ಹಾಗೂ ಜ್ಞಾನ ತುಂಬಲು ಗುರುಗಳು ಅಗತ್ಯ. ಅವರು ನಮ್ಮನ್ನು ಸನ್ಮಾರ್ಗ, ಸತ್ಸಂಗದಲ್ಲಿ ಕರೆದೊಯ್ಯುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಯಾದವನಿಗೆ ಗುರಿ ಮತ್ತು ಗುರು ಎರಡೂ ಮುಖ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತರಬೇಕು. ಕಾಲೇಜಿನಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾಗಿರುವುದು ಹೆಮ್ಮೆಯ ಸಂಗತಿ. ಯಾವ ಖಾಸಗಿ ಕಾಲೇಜುಗಳಿಗೂ, ಸರ್ಕಾರಿ ಕಾಲೇಜು ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೀರಿ. ಈ ಸಂಸ್ಥೆಯಂತೆ ಎಲ್ಲಾ ಕಾಲೇಜುಗಳು ಕಾರ್ಯ ನಿರ್ವಹಿಸಿದರೆ ಸರ್ಕಾರಿ ಶಾಲೆ, ಕಾಲೇಜಿಗೆ ಒಳ್ಳೆಯ ಹೆಸರು ಬರುತ್ತದೆ ಎಂದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಎನ್.ಕೆ. ಲೋಲಾಕ್ಷಿ ಮಾತನಾಡಿ, ಶಿಕ್ಷಣ ಅಂಕ ಮತ್ತು ರ್‍ಯಾಂಕ್ ಪಡೆಯಲಷ್ಟೇ ಸೀಮಿತವಲ್ಲ. ಅದರಾಚೆಗೂ ಒಂದು ಬದುಕಿದೆ ಎಂಬುದನ್ನು ಅರಿತುಕೊಳ್ಳಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
2018-19ರ ಶೈಕ್ಷಣಿಕ ಸಾಲಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ನೀಡಲಾಯಿತು. ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ಪ್ರಮಿಳಾ, ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪಿ. ಸೋಮಣ್ಣ, ಉಪಪ್ರಾಂಶುಪಾಲೆ ವಸಂತಕುಮಾರಿ ಇತರರಿದ್ದರು.