ರಾಮನಗರ: ಗ್ರಾಪಂ, ತಾಪಂ, ಜಿಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಜೀವ ವೈವಿಧ್ಯ ನಿರ್ವಹಣೆ ಸಮಿತಿ ಚುರುಕುಗೊಳಿಸಿ, ಜಿಲ್ಲೆಯ ಜೀವ ವೈವಿಧ್ಯತೆ ಸಂರಕ್ಷಿಸಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜಾದ್ಯಂತ ಮೇ 22ರಿಂದ ಜೂನ್ 5ರ ವರೆಗೆ ಜೀವ ವೈವಿಧ್ಯ ಸಂರಕ್ಷಣೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಅಸಂಖ್ಯ ಬಗೆ ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಾಣು ಜೀವಿಗಳು ಪರಿಸರದಲ್ಲಿದೆ. ಅವುಗಳ ಮಹತ್ವ ತಿಳಿಸಿ, ಅಭಿಯಾನ ನಡೆಸಬೇಕು ಎಂದರು. ಜಿಲ್ಲೆಯಲ್ಲಿ ಜೀವ ವೈವಿದ್ಯತೆ ಹೊಂದಿರುವ ಸಣ್ಣ ಪ್ರದೇಶದಿಂದ ದೊಡ್ಡ ಪ್ರದೇಶ ಗುರುತಿಸಿ, ವರದಿ ನೀಡಿದರೆ ಕರ್ನಾಟಕ ಜೀವ ವೈವಿಧ್ಯ ಮಂಡಳಿಯಿಂದ, ಅದನ್ನು ಸಂರಕ್ಷಿಸಿ ಬಹಳಷ್ಟು ವರ್ಷ ಉಳಿಸುವ ಕೆಲಸ ಮಾಡಲಾಗುವುದು ಎಂದರು.
ನಿಷೇಧಿತ ಕೀಟನಾಶಕಗಳು ಹಾಗೂ ರಸಗೊಬ್ಬರ ಉಪಯೋಗಿಸುವುದರಿಂದ ಜೀವ ವೈವಿಧ್ಯತೆ ಮೇಲೆ ದುಷ್ಪರಿಣಾಮ ಬೀರುತ್ತದೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು. ಜಂಟಿ ಕೃಷಿ ನಿರ್ದೇಶಕ ರವಿ ಮಾತನಾಡಿ, ಜಿಲ್ಲೆಯಲ್ಲಿ ಕೀಟನಾಶಕಗಳಿಂದ ಜೀವ ವೈವಿಧ್ಯತೆ ಮೇಲಾ ಗುವ ದುಷ್ಪರಿಣಾಮ ಪರಿಶೀಲಿಸಲು ಕೃಷಿ ಇಲಾಖೆಯಿಂದ ತಂಡ ರಚನೆಯಾಗಿದೆ ಎಂದರು.
ಜಿಪಂ ಸಿಇಒ ಇಕ್ರಂ ಮಾತನಾಡಿ, ಗ್ರಾಪಂ ಮಟ್ಟ ದಲ್ಲಿ ಜೀವ ವೈವಿಧ್ಯತೆಯನ್ನು ಜನತಾ ಜೀವ ವೈವಿಧ್ಯತೆ ದಾಖಲೆಯಲ್ಲಿ ದಾಖಲಿಸಬೇಕಿದ್ದು, ಈಗಾಗಲೇ 115 ಗ್ರಾಪಂಗಳಲ್ಲಿ ದಾಖಲೆ ಕೆಲಸ ಪೂರ್ಣಗೊಂಡಿ ದೆ. ಜೂನ್ ಅಂತ್ಯದೊಳಗೆ ಎಲ್ಲ ಗ್ರಾಪಂ, ತಾಪಂ, ಹಾಗೂ ಜಿಪಂ ವರದಿ ಸಲ್ಲಿಸಲಾಗುವುದು ಎಂದರು. ಉಪಭಾಗಾಧಿಕಾರಿ ದ್ರಾಕ್ಷಾಯಿಣಿ, ಜಿಪಂ ಉಪ ಕಾರ್ಯದರ್ಶಿ ಉಮೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.