Advertisement

ಸಂವಿಧಾನದ ಆಶಯ ಅನುಷ್ಠಾನಗೊಳ್ಳಲಿ

10:35 PM Nov 26, 2019 | Lakshmi GovindaRaj |

ಬೆಂಗಳೂರು: ವಿಶ್ವದಲ್ಲಿಯೇ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆ ಹೆಮ್ಮೆ ಪಡುವಂತಹದ್ದಾಗಿದ್ದು ಸಂವಿಧಾನದ ಮೂಲ ಆಶಯಗಳು ಅನುಷ್ಠಾನ ಗೊಳ್ಳಬೇಕಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಸಂವಿಧಾನ ದಿನಾಚರಣೆ ಪ್ರಯುಕ್ತ ಮಾತನಾಡಿ, ಭಾರತದ ಜನರ ಭಾವನೆಗೆ ಸಂವಿಧಾನದಲ್ಲಿ ಅಕ್ಷರ ರೂಪ ಕೊಡಲಾಗಿದೆ. ಸಂವಿಧಾನದ ಮೂಲ ಆಶಯ ಅನುಷ್ಠಾನಗೊಂಡು ಜನರ ಭಾವನೆಗಳಿಗೆ ಬೆಲೆ ದೊರೆಯುವಂತಾಗಬೇಕು. ಅಲ್ಲದೇ, ನಾವು ಬ್ರಿಟಿಷರ ಗುಲಾಮಗಿರಿಯಿಂದ ದೂರ ಆಗಿದ್ದೇವೆಯಾದರೂ ಇನ್ನೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಹೇಳಿದರು.

ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ನೀಡಲಾಗಿದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಜನರ ಭಾವನೆಗಳಿಗೆ ಸ್ಪಂದಿಸದೇ ಹೋದರೆ, ಸಾಮಾನ್ಯ ಜನರು ನ್ಯಾಯ ಪಡೆಯುವುದರಿಂದ ವಂಚಿತರಾಗು ತ್ತಾರೆ. ಹೀಗಾಗಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿ ನಡೆದುಕೊಂಡು ಹೋಗ ಬೇಕೆಂದರೆ, ಸಂವಿಧಾನದ ಮೂರು ಅಂಗಗಳ ನಡುವೆ ಸಮನ್ವಯ ಇರಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ನ.26 ರಂದು ಸಂವಿಧಾನ ದಿವಸ್‌ ಆಚರಣೆ ಮಾಡಬೇಕೆಂದು ಸೂಚಿಸಿದಾಗ, ರಾಜ್ಯ ಸರ್ಕಾರದ ಮೂಲಕವೇ ಎಲ್ಲ ಶಾಲಾ ಕಾಲೇಜುಗಳಲ್ಲಿ ಆಚರಿಸಲು ನಿರ್ಧರಿಸಲಾಯಿತು. ಯುವಕರಿಗೆ ಸಂವಿಧಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌, ದೇಶದ ಸಂವಿಧಾನ ಎಲ್ಲಾ ಕಾನೂನುಗಳ ತಾಯಿ. ವಿವಿಧ ರಾಷ್ಟ್ರಗಳ ಕಾನೂನು ಅಧ್ಯಯನ ಮಾಡಿ ಸಂವಿಧಾನದ ರಚನೆ ಮಾಡಿದ್ದೇವೆ. ನೂರಕ್ಕೂ ಹೆಚ್ಚು ತಿದ್ದುಪಡಿಯಾಗಿದ್ದರೂ ಮೂಲ ಆಶಯಕ್ಕೆ ಧಕ್ಕೆಯಾಗಿಲ್ಲ ಎಂದು ಹೇಳಿದರು.

Advertisement

ಸಂವಿಧಾನ ಎಷ್ಟೇ ಒಳ್ಳೆಯದಿದ್ದರೂ ಅದನ್ನು ಆಚರಣೆಗೆ ತರುವವರು ಕೆಟ್ಟವರಾಗಿದ್ದರೆ ಯಾವುದೇ ಆಶಯ ಈಡೇರಲ್ಲ. ಹೀಗಾಗಿ ಸಂವಿಧಾನದ ಆಶಯವನ್ನು ಮುಂದೆ ಹೇಗೆ ನಡೆಸಿಕೊಂಡು ಹೋಗುತ್ತೇವೆ ಎನ್ನುವುದು ಮುಖ್ಯವೆಂದರು. ವಿಧಾನ ಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next