Advertisement

ಭಾರತದ ಪುಣ್ಯಕೋಟಿ ದೇಸಿ ಗೋ ತಳಿಗಳ ಸಂರಕ್ಷಣೆ ಆದ್ಯತೆಯಾಗಲಿ

10:08 PM Sep 01, 2020 | Karthik A |

ಭಾರತದಲ್ಲಿರುವ ಪಶು ಸಂಪತ್ತು ಆಪಾರ. ದೇಶದಲ್ಲಿ ಪಶುಸಂಗೋಪನೆ ಜೀವನಾಧಾರಕ್ಕೆ ಮತ್ತು ಬದುಕಿಗೆ ಆಧಾರ.

Advertisement

ಪಶುಗಳಿಗೆ ನಮ್ಮ ಧಾರ್ಮಿಕ ನಂಬಿಕೆಗಳಲ್ಲೂ ಕೂಡ ಪ್ರಮುಖ ಸ್ಥಾನವಿದೆ. ಪುರಾಣ-ಇತಿಹಾಸಗಳ ಕಾಲದಲ್ಲಿ ಗೋವಿನ ಲಾಲನೆ-ಪಾಲನೆ ಪ್ರೇಮಪೂರಿತವಾಗಿತ್ತು.

ಗೋ-ವಂಶದಿಂದ ಮನುಷ್ಯನಿಗೆ ಆಗುವ ಪ್ರಯೋಜನವನ್ನು ಮನಗಂಡು ನಮ್ಮ ಪೂರ್ವಜರು ಪಶುಸಂಗೋಪನೆ ಆದ್ಯತೆ ನೀಡಿ, ಪೂಜ್ಯ ಸ್ಥಾನ ನೀಡಿದ್ದರು. ದೇಶ ಕೋಟಿಗಟ್ಟಲೆ ಗೋವುಗಳಿಗೆ ಆಶ್ರಯ ನೀಡುತ್ತಿದೆ. ಅವುಗಳ ಸಂರಕ್ಷಣೆ ಮೊದಲ ಕರ್ತವ್ಯ ಆಗಬೇಕಾಗಿದೆ.

ದೇಶದ ಹೆಚ್ಚಿನ ಮನೆಗಳಲ್ಲಿ ಇಂದಿಗೂ ಗೋ ಸೇವೆಯೊಂದಿಗೆ ದಿನನಿತ್ಯದ ಚಟುವಟಿಕೆ ಆರಂಭವಾಗುವುದು. ಹಾಗೆಯೇ ಭಾರತೀಯ ಗೋ ವಂಶದ ಉಳಿವಿಗೆ ಸಾವಿರಾರು ಸಂರಕ್ಷಣ ಕೇಂದ್ರಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಗೋವಿನ ಹಾಲು ಸಹಿತ ಇತರ ಉತ್ಪನ್ನಗಳು ನಮ್ಮ ಶರೀರಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ಆದ್ದರಿಂದ ಗೋವುಗಳಿಗೆ ನಾವು ವಿಶೇಷ ಆದ್ಯತೆ ನೀಡಬೇಕು.

ದೇಸಿ ಗೋ ತಳಿಗಳ ಸಂರಕ್ಷಣೆ ಈ ಎಲ್ಲ ಗೋಶಾಲೆಗಳ ಮೂಲ ಉದ್ದೇಶವಾದರೂ ಪ್ರತಿಯೊಂದು ಕೇಂದ್ರದ ಕಾರ್ಯವಿಧಾನವು ತನ್ನದೇ ಆದ ವಿಶೇಷತೆ ಹಾಗೂ ಹೊಸತನವನ್ನು ಅಳವಡಿಸಿಕೊಳ್ಳುವ ಮೂಲಕ ಭಿನ್ನವಾಗಿದೆ. ಗೋ ಮೂತ್ರ ಮತ್ತು ಸೆಗಣಿಯಲ್ಲಿ ಔಷಧ ಗುಣಗಳಿವೆ.
ಹಸುವೊಂದು ಕರುವಿಗೆ ಜನ್ಮ ನೀಡಿದ ಅನಂತರವೇ ಹಾಲು ಕೊಡಲು ಆರಂಭಿಸುತ್ತದೆ. ಹಾಗಾಗಿ ಹಾಲು ಕೊಡುವ ಹಸುಗಳ ಸಂಖ್ಯೆಯಷ್ಟೇ ಕರುಗಳ ಸಂಖ್ಯೆಯು ಇರಬೇಕು. ಆದರೆ ಮುಂಚಿನಂತೆ ಮನೆ ಮನೆಗಳಲ್ಲೂ ದನಕರುಗಳನ್ನು ಸಾಕುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟ‌ವಾಗುತ್ತಿದೆ.

Advertisement

ಹತ್ತಿಪ್ಪತ್ತು ಗೋ ತಳಿಗಳಿಂದ ತುಂಬಿರುತ್ತಿದ್ದ ಕೊಟ್ಟಿಗೆಗಳಲ್ಲಿ ಕೇವಲ ಒಂದೆರಡು ತಳಿಗಳು ಇರುವುದನ್ನು ಕಾಣಬಹುದು. ಇದರಿಂದಾಗಿ ದೇಸಿ ಗೋ ಸಂಪತ್ತು ಅಳಿವಿನಂಚಿಗೆ ಸಾಗುತ್ತಿದೆ ಎನ್ನುವ ಕಳವಳ ಒಂದು ಕಡೆಯಾದರೆ ಗೋವಿನಿಂದ ಆಗುವ ಪ್ರಯೋಜನಗಳಿಂದ ವಂಚಿತರಾಗಿದ್ದೇವೆ. ಅನೇಕ ಗೋ ಶಾಲೆ ಕೇಂದ್ರಿತ ಆರ್ಥಿಕ ಚಟುವಟಿಕೆಗಳನ್ನು ನಡೆಸಿ ತಳಿಗಳನ್ನು ಸಂರಕ್ಷಿಸಬೇಕಾಗುತ್ತದೆ.

ಗೋವು ನಮ್ಮ ಆರ್ಥಿಕತೆಯ ಬೆನ್ನೆಲುಬು ಕೂಡ ಹೌದು. ಗೋತಳಿ ರಕ್ಷಣೆ ಕೇವಲ ಹಾಲಿಗಾಗಿ ಅಲ್ಲ ಅದೊಂದು ಸೇವೆ ಹಾಗೂ ಇದನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ.

 ಚೋಂದಮ್ಮ ಕೆ.ಪಿ. ಸಂತ ಫಿಲೋಮಿನಾ ಪ.ಪೂ. ಕಾಲೇಜು, ಪುತ್ತೂರು 

Advertisement

Udayavani is now on Telegram. Click here to join our channel and stay updated with the latest news.

Next