Advertisement

ಹೊಸ ಶಿಕ್ಷಣ ನೀತಿ ಜಾರಿಗೆ ಮುನ್ನ ಗೊಂದಲಗಳು ಬಗೆಹರಿಯಲಿ

10:20 PM Aug 22, 2021 | Team Udayavani |

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಉದ್ದೇಶ ದೊಂದಿಗೆ ರೂಪಿತವಾಗಿರುವ ದೇಶೀಯತೆಯ ಸೊಗಡಿನಲ್ಲಿ ಕೌಶಲಭರಿತ ವಿದ್ಯಾ ವಂತರನ್ನು ಸೃಷ್ಟಿಸುವ ಮಹತ್ತರ ಗುರಿಯನ್ನು ಹೊಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸಕ್ತ ಸಾಲಿನಿಂದಲೇ ರಾಜ್ಯದಲ್ಲಿ ಜಾರಿಗೆ ತರಲು ಸರಕಾರ ಮುಂದಾಗಿದೆ. ತಿಂಗಳುಗಳ ಹಿಂದೆಯೇ ಈ ಬಗ್ಗೆ ಅಧಿಕೃತವಾಗಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಘೋಷಿ ಸಿ ದ್ದರಾದರೂ ಈ ಬಗೆಗಿನ ಗೊಂದಲಗಳು ಇನ್ನೂ ಮುಂದು ವರಿದಿದ್ದು ಸರಕಾರದ ಈ ಆತುರದ ನಿರ್ಧಾರಕ್ಕೆ ಶಿಕ್ಷಣ ತಜ್ಞರಿಂದ ಅಪಸ್ವರಗಳು ಕೇಳಿಬಂದಿವೆ.

Advertisement

ರಾಜ್ಯ ಸರಕಾರದ ನಿರ್ಧಾರದಂತೆ ಸೋಮವಾರದಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕಲಿಕೆಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಆನ್‌ಲೈನ್‌ ಮೂಲಕ ಚಾಲನೆ ನೀಡಲಿದ್ದಾರೆ. ರಾಜ್ಯದ ವಿವಿಗಳಲ್ಲಿ ಧಾರವಾಡದ ಕರ್ನಾಟಕ ವಿವಿ ಹಾಗೂ ಮೈಸೂರು ವಿವಿಯು ಹೊಸ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ಮೊದಲ ವಿವಿಗಳು. ಸದ್ಯ ಹೊಸ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳ ದಾಖಲಾತಿ ನಡೆಯಲಿದ್ದು ತರಗತಿಗಳು ಅಕ್ಟೋಬರ್‌ನಿಂದ ನಡೆಯಲಿವೆ. ಸೆಪ್ಟಂಬರ್‌ ಅಂತ್ಯದೊಳಗೆ ಹೊಸ ಪಠ್ಯಕ್ರಮಗಳು ಅಂತಿಮಗೊಳ್ಳಲಿವೆ.

ಆದರೆ ರಾಜ್ಯ ಸರಕಾರದ ಈ ಆತುರದ ನಿರ್ಧಾರದ ಬಗೆಗೆ ಶಿಕ್ಷಣ ತಜ್ಞರು ಮತ್ತು ಶಿಕ್ಷಣ ಸಂಸ್ಥೆಗಳಿಂದಲೇ  ವಿರೋಧ ಕೇಳಿ ಬಂದಿದ್ದು ನೂತನ ಶಿಕ್ಷಣ ನೀತಿಯಲ್ಲಿ ಪ್ರಸ್ತಾವಿಸಲಾಗಿರುವ ಮಹತ್ವದ ವಿಚಾರಗಳೆಲ್ಲವನ್ನೂ ನಿರ್ಲಕ್ಷಿಸಿ ದಿಢೀರನೆ ಹೊಸ ನೀತಿಯನ್ನು ಜಾರಿಗೊಳಿಸುತ್ತಿರುವ ಹಿಂದಿನ ಉದ್ದೇಶವಾದರೂ ಏನು ಎಂಬುದು ಮಾತ್ರ ಯಕ್ಷಪ್ರಶ್ನೆ. ಈ ಮೂಲಕ ರಾಜ್ಯ ಸರಕಾರ ಅತ್ಯುತ್ತಮ ಶಿಕ್ಷಣ ನೀತಿಯನ್ನು ಆರಂಭಿಕ ಹಂತದಲ್ಲಿಯೇ ವಿಫ‌ಲಗೊಳಿಸಲಿದೆಯೇ ಎಂಬ ಆತಂಕವೂ ವ್ಯಕ್ತವಾಗಿದೆ.

ಪದವಿ ತರಗತಿ, ವಿಷಯಗಳ ಆಯ್ಕೆಯ ಗೊಂದಲ, ಭಾಷಾ ವಿಷಯ ಗಳ ಬಗೆಗೆ ನಿರ್ಲಕ್ಷ್ಯ, ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೂಲ ಸೌಕ ರ್ಯಗಳ ಕೊರತೆ ಆದಿಯಾಗಿ ಹಲವಾರು ವಿಷಯಗಳ ಬಗೆಗೆ ಗೋಜಲುಗಳು ಇನ್ನೂ ಮುಂದುವರಿದಿರುವಂತೆಯೇ ಸರಕಾರ ಮಾತ್ರ ಹಠಕ್ಕೆ ಬಿದ್ದಂತೆ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸ ಹೊರಟಿ ರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ. ಆರಂಭದಿಂದಲೂ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳ ಹೆತ್ತವರು ಈ ಎಲ್ಲ ಗೊಂದಲಗಳ ಬಗೆಗೆ ಸರಕಾರದ ಮತ್ತು ಸಚಿವರ ಗಮನ ಸೆಳೆದಿದ್ದರು.   ಈ ಗೊಂದಲಗಳ ನಿವಾರಣೆಗೆ ಯಾವುದೇ ಪ್ರಯತ್ನ ನಡೆದಿಲ್ಲ. ಅಷ್ಟು ಮಾತ್ರವಲ್ಲದೆ ಶಿಕ್ಷಣ ನೀತಿಯಲ್ಲಿಯೇ ಹೇಳಲಾಗಿರುವಂತೆ ಹೊಸ ವ್ಯವಸ್ಥೆಯ ಜಾರಿಗೂ ಮುನ್ನ ಶಿಕ್ಷಣ ಸಂಸ್ಥೆಗಳು ಮತ್ತು ವಿವಿ, ಕಾಲೇಜು ಗಳಲ್ಲಿ ಅಗತ್ಯ ಮೂಲಸೌಕರ್ಯ, ಉಪನ್ಯಾಸಕರ ನೇಮಕ ಮತ್ತಿತರ ವಿಚಾರಗಳ ಬಗೆಗೆ ಸರಕಾರ ಚಕಾರವೆತ್ತಿಲ್ಲ.

ಕಾಟಾಚಾರಕ್ಕೆ ಎಂಬಂತೆ ಶಿಕ್ಷಣ ತಜ್ಞರ ಸಭೆ ನಡೆಸಿದ್ದನ್ನು ಬಿಟ್ಟರೆ ಪೂರ್ವತಯಾರಿಯನ್ನು ನಡೆಸದೆ, ವಿದ್ಯಾರ್ಥಿಗಳು, ಹೆತ್ತವರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ತರಗತಿ ಆರಂಭಗೊಳ್ಳಲು ಇನ್ನೂ ತಿಂಗಳ ಕಾಲಾವಕಾಶ ಇದ್ದು ಈ ಅವಧಿಯಲ್ಲಾದರೂ ಇತ್ತ ಗಮನಹರಿಸಿ ನೂತನ ಶಿಕ್ಷಣ ನೀತಿಯ ಉದ್ದೇಶ ನೈಜವಾಗಿ ಈಡೇರುವಂತಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next