ಮಾಯಕೊಂಡ: ಸಮುದಾಯ ಭವನಗಳು ಅನೈತಿಕ ಚಟುವಟಿಕೆಗಳ ತಾಣವಾಗಬಾರದು ಎಂದು ಶಾಸಕ ಪ್ರೊ| ಲಿಂಗಣ್ಣ ಹೇಳಿದರು. ಸಮೀಪದ ಅತ್ತಿಗೆರೆ ಗ್ರಾಮದಲ್ಲಿ ನೂತನ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ಭವನವನ್ನು ಸಭೆ ಸಮಾರಂಭಗಳಿಗೆ ಸದುಪಯೋಗ ಮಾಡಿಕೊಳ್ಳಬೇಕು. ಸ್ವತ್ಛತೆ ಕಾಪಾಡಿಕೊಳ್ಳಬೇಕು. ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ನಾಗರಿಕರಾಗಬೇಕು ಎಂದರು.
ಸರ್ಕಾರ ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುತ್ತಿದೆ. ಕ್ಷೇತ್ರದಲ್ಲಿ ಸುಮಾರು 70 ವಾಲ್ಮೀಕಿ, ಅಂಬೇಡ್ಕರ್, ಜಗಜೀವನ್‌ರಾಮ್ ಭವನಗಳ ಉದ್ಘಾಟನೆ ಆಗಬೇಕಿದೆ. 6-7 ಭವನಗಳಿಗೆ ನಿವೇಶನದ ಸಮಸ್ಯೆ ಇರುವುದರಿಂದ ಕಾಮಗಾರಿ ನಡೆದಿಲ್ಲ. ಅವುಗಳನ್ನು ಬೇರೆ ಗ್ರಾಮಗಳಲ್ಲಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ನಾನು ಬಡತನದಲ್ಲಿ ಬೆಳೆದು ಬಂದಿರುವವನು. ಗ್ರಾಮಗಳಿಗೆ ಭೇಟಿ ನೀಡಿದಾಗ ಅದ್ದೂರಿ ಸ್ವಾಗತ, ಮೆರವಣಿಗೆ ಬೇಡ. ನಾನು ಶಾಸಕನಲ್ಲ, ನಿಮ್ಮ ಸೇವೆ ಮಾಡಲು ಬಂದಿರುವ ಸೇವಕ ಎಂದು ಹೇಳಿದರು.
ಆನಗೋಡು ಜಿಪಂ ಸದಸ್ಯ ಬಸವರಾಜು ಮಾತನಾಡಿ, ಕ್ಷೇತ್ರದಲ್ಲಿ ಶಾಸಕರು ಪ್ರಥಮವಾಗಿ ಸಮುದಾಯ ಭವನ ಉದ್ಘಾಟನೆ ಮಾಡಿದ ಗ್ರಾಮ ಅತ್ತಿಗೆರೆ. 15 ಕೋಟಿ ವೆಚ್ಚದಲ್ಲಿ ಸುಮಾರು 70 ಭವನಗಳು ಕ್ಷೇತ್ರಕ್ಕೆ ಮಂಜೂರಾಗಿವೆ. ಇದರ ಶ್ರೇಯ ಮಾಜಿ ಸಚಿವರಾದ ಆಂಜನೇಯ, ಮಲ್ಲಿಕಾರ್ಜುನ ಅವರಿಗೆ ಸಲ್ಲಬೇಕು. ಈಗಿನ ಶಾಸಕರು ಭವನಗಳಿಗೆ ಹಣ ತರುವುದು ಬೇಡ, ಕೇವಲ ಉದ್ಘಾಟನೆ ಮಾಡಿದರೆ ಸಾಕು ಎಂದು ಹೇಳಿದರು.
ಬಾಡ ಜಿಪಂ ಸದಸ್ಯೆ ಶೈಲಜಾ ಬಸವರಾಜು ಮಾತನಾಡಿ, ಭವನಗಳು ದೇವಸ್ಥಾನಗಳಿದ್ದಂತೆ. ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಭವನಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಭವನಗಳ ಮೇಲ್ವಿಚಾರಣೆ ಹೊಣೆಗಾರಿಕೆಯನ್ನು ಮಹಿಳೆಯರಿಗೆ ನೀಡಬೇಕು ಎಂದರು.
ಎ.ಡಿ ಶಿವರುದ್ರಪ್ಪ, ಎ.ಜಿ ನಾಗಪ್ಪ, ದೇವರಾಜ್, ಕೆ.ತಿಪ್ಪಣ್ಣ, ರವಿ, ನಿಂಗರಾಜು, ಟೀಪ್ ಸಾಹೇಬ್, ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.