Advertisement

ಕಮಿಷನ್‌ ಆರೋಪ ಬಗ್ಗೆ ದೂರು ನೀಡಲಿ, ತನಿಖೆ ಆಗಲಿ

12:10 AM Aug 25, 2022 | Team Udayavani |

ರಾಜ್ಯದಲ್ಲಿ ಗುತ್ತಿಗೆದಾರರು ತಾವು ಮಾಡಿದ ಕಾಮಗಾರಿ ಬಿಲ್‌ ಪಾವತಿಗೆ ಶೇ.40 ಕಮಿಷನ್‌ ಕೊಡಬೇಕಿದೆ ಎಂಬ ಆರೋಪ ಕಳೆದ ಎರಡು ವರ್ಷಗಳಿಂದಲೂ ಕೇಳಿಬರುತ್ತಿದೆ. ಇದೊಂದು ರೀತಿಯಲ್ಲಿ ತೋಳ ಬಂತು ತೋಳ ಕಥೆಯಂತಾಗಿದೆ.

Advertisement

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಖುದ್ದು ಪ್ರಧಾನಿ ನರೇಂದ್ರ­ಮೋದಿ ಅವರಿಗೆ ಪತ್ರ ಬರೆದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಶೇ.40ರಷ್ಟು ಇದ್ದ ಕಮಿಷನ್‌ ಬೇಡಿಕೆ ಶೇ.50ಕ್ಕೆ ಹೆಚ್ಚಳವಾಗಿದೆ ಎಂಬುದು ಗುತ್ತಿಗೆದಾರರ ಆರೋಪ. ಇದರಲ್ಲಿ ಎಷ್ಟು ಹುರುಳಿದೆ, ಎಷ್ಟು ಸುಳ್ಳು ಎನ್ನುವುದನ್ನು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಇದೊಂದು ವೃಥಾ ರಾಜಕೀಯದ ಆರೋಪ-ಪ್ರತ್ಯಾರೋಪದ ರೂಪ ಪಡೆಯುತ್ತಿದೆ. ಇದಕ್ಕೆ ಪೂರಕವಾಗಿ ಗುತ್ತಿಗೆದಾರರ ಸಂಘದ ನಿಯೋಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಹೊಸ ರಾಜಕೀಯ ನಾಟಕಕ್ಕೆ ಕಾರಣ­ವಾಗಿದೆ. ಆದರೆ ಸರಕಾರ ಇದಕ್ಕೆ ತಾರ್ಕಿಕ ಅಂತ್ಯ ಹಾಡುವ ಕೆಲಸಕ್ಕೆ ಮುಂದಾಗಬೇಕಾಗಿದೆ.

ಸಚಿವ ಮುನಿರತ್ನ ಅವರ ಹೆಸರು ಬಹಿರಂಗವಾಗಿ ಪ್ರಸ್ತಾಪಿಸಿದ್ದು, ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ, ಇಲ್ಲದಿದ್ದರೆ ಮೂರು ವರ್ಷದ ಹಿಂದಿನ ಕಾಮಗಾರಿ ಪರಿಶೀಲನೆ ಮಾಡುವ ಬೆದರಿಕೆ ಹಾಕಲಾಗು­ತ್ತಿದೆ ಎಂಬ ಗಂಭೀರ ಆರೋಪವನ್ನು ಗುತ್ತಿಗೆದಾರರ ಸಂಘದವರು ಮಾಡಿದ್ದಾರೆ. ಇಷ್ಟಾದರೂ ಸರಕಾರ ದಾಖಲೆ ಕೊಡಲಿ ಎಂದು ಕೇಳಿ ಸುಮ್ಮನಾದರೆ ಇದಕ್ಕೆ ಅರ್ಥ ಇರುವುದಿಲ್ಲ. ಸರಕಾರಕ್ಕೂ ಕೆಟ್ಟ ಹೆಸರು.

ಒಂದು ವರ್ಷದಿಂದ ಆರೋಪ ಕೇಳಿಬಂದರೂ ಯಾವುದೇ ರೀತಿಯ ತನಿಖೆ ಅಥವಾ ಲೋಕಾಯುಕ್ತಕ್ಕೆ ಪ್ರಕರಣ ವಹಿಸಿಲ್ಲ. ಗುತ್ತಿಗೆದಾರರೂ ಸಹ ಲೋಕಾಯುಕ್ತಕ್ಕೆ ದೂರು ನೀಡಲು ಅವಕಾಶ ಇತ್ತು. ಈ ಬೆಳವಣಿಗೆ ಸಾರ್ವ­ಜನಿಕ ವಲಯದಲ್ಲೂ ನಾನಾ ಅನುಮಾನಗಳಿಗೆ ಕಾರಣವಾಗಿದೆ. ಇದು ಬರೀ ರಾಜಕೀಯ ಆರೋಪವಾಗಿದೆಯೇ ಎನ್ನುವ ಸಂಶಯ ಸಹಜವೇ. ಸರಕಾರ ಮೊದಲು ಸಾರ್ವಜನಿಕ ವಲಯದಲ್ಲಿ ಇರುವ ಅನು­ಮಾನ ದೂರ ಮಾಡಬೇಕಾಗಿದೆ. ಇದು ಸರಕಾರದ ಜವಾಬ್ದಾರಿಯೂ ಹೌದು.

ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ನೇರವಾಗಿ ಪ್ರಧಾನಿಗೆ ಪತ್ರ ಬರೆಯುವುದು. ಬಹಿರಂಗವಾಗಿ ಕಮಿಷನ್‌ಗೆ ಒತ್ತಾಯ ಮಾಡುತ್ತಿದ್ದರೂ ಅದನ್ನು ಹಗುರವಾಗಿ ಬಿಟ್ಟುಬಿಡುವುದು ಯಾವುದೇ ಒಂದು ವ್ಯವಸ್ಥೆಗೆ ಶೋಭೆ ತರುವುದಿಲ್ಲ. ತತ್‌ಕ್ಷಣ ಈ ಕುರಿತು ತನಿಖೆ ನಡೆಸಿ ಯಾರೇ ತಪ್ಪಿತಸ್ಥರಿ­ದ್ದರೂ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರೇ ಯಾವುದೇ ಸತ್ಯಾಂಶ ಇಲ್ಲದೆ ಆರೋಪ ಮಾಡುತ್ತಿದ್ದರೆ ಅವರ ಮೇಲೆ ಕ್ರಮ ಆಗಬೇಕು. ಅದು ಬಿಟ್ಟು ನಿರಂತರವಾಗಿ ಆರೋಪ ಮಾಡುತ್ತಿದ್ದರೂ ಮೌನ ವಹಿಸು ವುದು, ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಸುಮ್ಮನಾಗುವುದು ಸರಿಯಲ್ಲ.
ಕೆಂಪಣ್ಣ ಅವರು ಇದೇ ಮೊದಲ ಬಾರಿಗೆ ಆರೋಪ ಮಾಡುತ್ತಿಲ್ಲ. ಹಿಂದೆಯೂ ಮಾಡಿದ್ದರು, ಪ್ರಧಾನಿಯವರೆಗೂ ಪತ್ರವೂ ಬರೆದು ಮುಖ್ಯಮಂತ್ರಿಯವರನ್ನೂ ಭೇಟಿ ಮಾಡಿದ್ದರು.

Advertisement

ಇದೀಗ ವಿಪಕ್ಷ ನಾಯಕರನ್ನು ಭೇಟಿ ಮಾಡಿದ್ದಾರೆ. ತಮಗಾಗುತ್ತಿರುವ ಸಮಸ್ಯೆ ಹೇಳಿಕೊಂಡಿದ್ದಾರೆ. ಅವರು ಲೋಕಾಯುಕ್ತದಂಥ ಅಧಿಕೃತ ತನಿಖಾ ಸಂಸ್ಥೆಗೆ ದೂರು ನೀಡುವ ಧೈರ್ಯ ಮಾಡಲಿ. ಸರಕಾರವೂ ಈ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು. ಇದಕ್ಕೆ ಅಂತಿಮ ತೆರೆ ಎಳೆಯಲು ಮುಂದಾಗಬೇಕು. ಇಲ್ಲದಿದ್ದರೆ ಸಂಶಯದ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next