Advertisement

ಪತ್ರಕರ್ತರ ಶಿಕ್ಷೆ ವಿಚಾರದಲ್ಲಿ ಸಿಎಂ-ಸ್ವೀಕರ್‌ ಚರ್ಚಿಸಲಿ

11:20 AM Jul 01, 2017 | Team Udayavani |

ಬೆಂಗಳೂರು: ಪತ್ರಕರ್ತರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿರುವ ಪ್ರಕರಣ ಇರ್ತ್ಯರ್ಥಪಡಿಸಲು  ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ಸ್ಪೀಕರ್‌ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳನ್ನು ತಿಳಿಸಿ ಎಂದು ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ ನೀಡಿದೆ. 

Advertisement

ಇಬ್ಬರು ಪತ್ರಕರ್ತರಿಗೆ ಸದನದ ಹಕ್ಕುಬಾಧ್ಯಾತ ಸಮಿತಿ ವಿಧಿಸಿರುವ ಒಂದು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡದ ಆದೇಶ ರದ್ದು ಕೋರಿ ಪತ್ರಕರ್ತ ರವಿ ಬೆಳಗೆರೆ ಹಾಗೂ ಅನಿಲ್‌ ರಾಜ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಸಲಹೆ ನೀಡಿದೆ. ಇಲ್ಲವಾದರೇ ಅರ್ಜಿಯ ಮೂಲ ಅಂಶವನ್ನು ಪರಿಗಣಿಸಿ ಆದೇಶ ನೀಡಬೇಕಾಗುತ್ತದೆ ಎಂದೂ ಸರ್ಕಾರಕ್ಕೆ ಸ್ಪಷ್ಟಪಡಿಸಿ ಜುಲೈ 1ಕ್ಕೆ ವಿಚಾರಣೆ ಮುಂದೂಡಿತು. 

ಹಕ್ಕುಬಾಧ್ಯತಾ  ಸಮಿತಿ ಪರವಾಗಿ ವಾದಿಸಿದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಎ.ಎಸ್‌ ಪೊನ್ನಣ್ಣ,  ಅರ್ಜಿದಾರರು ನಮ್ಮನ್ನು ಬಂಧಿಸುವುದಿಲ್ಲ ಎಂದು ಭರವಸೆ ನೀಡಿದರೆ ಮಾತ್ರ ಸ್ಪೀಕರ್‌ ಮುಂದೆ ಹಾಜರಾಗುತ್ತೇವೆ  ಎಂದು ವಿಧಿಸಿರುವ  ಷರತ್ತನ್ನು  ವಿಧಾನ ಸಭೆ ಸ್ಪೀಕರ್‌ ಹಾಗೂ ಸಮಿತಿ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಈ ವಿಚಾರವನ್ನು ಸದನವೇ ತೀರ್ಮಾನಿಸಬೇಕಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲ ಶಂಕರಪ್ಪ, ಕಕ್ಷಿದಾರ ಅನಿಲ್‌ರಾಜ್‌  ಅವರ ಅಳಿಯನನ್ನು ಯಲಹಂಕ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿಡಲಾಗಿದೆ. 24 ಗಂಟೆ ಕಳೆದರೂ ನ್ಯಾಯಾಲಯದ ಮುಂದೆ ಹಾಜರು ಪಡಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಿಳಿಸಿದರು. ಪೊಲೀಸ್‌ ಅಧಿಕಾರಿಗಳ ಈ ನಡೆಗೆ ಅಸಮಾಧಾನವ್ಯಕ್ತಪಡಿಸಿದ ನ್ಯಾಯಪೀಠ, ಬಂಧನದಲ್ಲಿರುವ ವ್ಯಕ್ತಿಯನ್ನು ತಕ್ಷಣ  ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಎಂದು ಲಘು ಧಾಟಿಯಲ್ಲಿ ನಿರ್ದೇಶಿಸಿದರು.

ಇಂದು ಪತ್ರಕರ್ತರ ಪ್ರತಿಭಟನೆ 
ಪತ್ರಕರ್ತರಿಬ್ಬರಿಗೆ ವಿಧಿಸಿರುವ ಜೈಲುಶಿಕ್ಷೆಯ ಆದೇಶವನ್ನು ಖಂಡಿಸಿರುವ ರಾಜ್ಯದ ವಿವಿಧ ಮಾಧ್ಯಮಗಳ ಸಂಘಟನೆಗಳು, ಹಕ್ಕುಬಾದ್ಯಾತಾ ಸಮಿತಿ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ  ಜಿಲ್ಲಾ ಕೇಂದ್ರಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಿವೆ. ಶನಿವಾರ ಪತ್ರಿಕಾ ದಿನಾಚಾರಣೆಯನ್ನು ಕಪ್ಪುಪಟ್ಟಿಕಟ್ಟಿಕೊಂಡು ಆಚರಿಸಲು ತೀರ್ಮಾನ ಕೈಗೊಳ್ಳಲಾಗಿವೆ. ಜೊತೆಗೆ ಜೈಲು ಶಿಕ್ಷೆ ಆದೇಶ ಹಿಂಪಡೆಯುವಂತೆ ಮಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿವೆ.

Advertisement

ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ಪ್ರಸ್‌ ಕ್ಲಬ…,ಬೆಂಗಳೂರು ವರದಿಗಾರರ ಕೂಟ,ಟಿವಿ ಜರ್ನಲಿಸ್ಟ್‌ ಅಸೋಸಿಯೇಷನ್‌,ಹಿರಿಯಪತ್ರಕರ್ತರ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಹಕ್ಕುಬಾಧ್ಯತಾ ಸಮಿತಿ ಆದೇಶದ ಬಗ್ಗೆ ಬೇಸರ ವ್ಯಕ್ತಪಡಿಸಿವೆ. ರಾಜ್ಯದ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ಹಕ್ಕುಚ್ಯುತಿ ಸಮಿತಿಯ ಶಿಫಾರಸಿನ ಮೇಲೆ ಇಬ್ಬರು ಪತ್ರಕರ್ತರಿಗೆ ಜೈಲು ಶಿಕ್ಷೆ, ಹತ್ತು ಸಾವಿರ ರೂ ದಂಡ ವಿಧಿಸಲಾಗಿದೆ.

ಇದು ಜಾರಿಯಾದರೆ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳಿರುವ ವಿವಿಧ ಹಂತದ ಸಾಂವಿಧಾನಿಕ ಸಂಸ್ಥೆಗಳು ಅಧಿಕಾರ ಬಳಸಿಕೊಂಡು ರಾಜ್ಯದೆಲ್ಲೆಡೆ ಪತ್ರಕರ್ತರನ್ನು ಬಂಧಿಸುವ ಕ್ರಮಕ್ಕೆ ಮುಂದಾಗುವ ಸಾಧ್ಯತೆಗಳಿವೆ ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾಯಿತು.ಅಲ್ಲದೆ ಪತ್ರಕರ್ತರಿಗೆ ವಿಧಿಸಿರುವ ಜೈಲು ಶಿಕ್ಷೆ ಆದೇಶ ವಾಪಾಸ್‌ ಪಡೆಯಲು ವಿಶೇಷ ಅಧಿವೇಶನ ಕರೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲೂ ತೀರ್ಮಾನ ಕೈಗೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next