ಒಂದು ಸಸಿ ಸರಿಯಾಗಿ ಬೆಳೆಯಬೇಕಾದರೆ ಅದಕ್ಕೆ ಎಲ್ಲ ರೀತಿಯ ಪೋಷಕಾಂಶಗಳು ಮುಖ್ಯ. ಮಗುವಿಗೂ ಹಾಗೆಯೇ. ಪ್ರತಿಯೊಬ್ಬರ ಪ್ರೀತಿಯೂ ಅವಶ್ಯಕ. ತಂದೆ, ತಾಯಿ, ಅಣ್ಣ ಅಕ್ಕ, ತಂಗಿ ತಮ್ಮ, ಅಜ್ಜ ಅಜ್ಜಿ ಹೀಗೆ ಎಲ್ಲರ ಪ್ರೀತಿಯೂ ಬೇಕು. ಎಲ್ಲ ಪೋಷಕಾಂಶಗಳು ಸಮ ಪ್ರಮಾಣದಲ್ಲಿ ದೊರೆತಾಗ ಮಾತ್ರ ಸಸಿ ಚೆನ್ನಾಗಿ ಬೆಳೆಯುತ್ತದೆ. ಮಗುವಿಗೂ ಉತ್ತಮ ಸಂಸ್ಕಾರ ಸಿಗುವುದು.
ಆಧುನಿಕತೆಯ ಈ ಕಾಲಘಟ್ಟದಲ್ಲಿ ತಂದೆ ತಾಯಿ ಮಗು ಇಷ್ಟೇ ಕುಟುಂಬ ಎನ್ನುವ ಕಲ್ಪನೆ ಮಕ್ಕಳಲ್ಲಿ ಬೆಳೆಯುತ್ತಿದೆ. ಅಪ್ಪ ಅಮ್ಮ ಕೆಲಸಕ್ಕೆ ಹೋದರೆ ಮಗು ಮಾತ್ರ ಮನೆಯಲ್ಲಿ. ಮಗುವಿಗೆ ತನ್ನ ತಪ್ಪು ಸರಿಗಳನ್ನು ತಿಳಿಸುವವರಿಲ್ಲ. ನೀತಿ ಕಥೆಗಳನ್ನು ಹೇಳುವ ಅಜ್ಜ ಅಜ್ಜಿಯರಿಲ್ಲದೆ ಮಕ್ಕಳ ಮಾನಸಿಕ ಬೆಳವಣಿಗೆ ಚೆನ್ನಾಗಿ ಸಾಗುವುದಿಲ್ಲ. ಇದರಿಂದಲೇ ಮಕ್ಕಳು ತಪ್ಪು ದಾರಿಗಿಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳಿಗೆ ಹುಟ್ಟುತ್ತಲೇ ಎಲ್ಲರ ಪ್ರೀತಿ ದೊರೆಯುವಂತೆ ಮಾಡಬೇಕು.
ಮಕ್ಕಳೊಂದಿಗೆ ನಿರ್ದಿಷ್ಟ ಸಮಯ ಕಳೆಯಬೇಕು. ಮಕ್ಕಳು ದಾರಿ ತಪ್ಪದಂತೆ ತಿದ್ದುವವರಿರಬೇಕು. ಆಗ ಮಕ್ಕಳೂ ಪ್ರೀತಿಯಿಂದ ವಂಚಿತರಾಗುವುದಿಲ್ಲ. ಹಿಂದೆಲ್ಲ ಮನೆ ತುಂಬಾ ಜನ. ಅಜ್ಜ ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ ಹೀಗೆ ಎಲ್ಲರೂ ಪ್ರೀತಿ ತೋರುವವರೇ. ತಪ್ಪು ಮಾಡಿದಾಗ ತಿದ್ದುವವರೂ ಆಗಿದ್ದರು. ಆದರೆ ಈಗ ಕುಟುಂಬ ಸಣ್ಣದಾಗುತ್ತಲೇ ಹೋದಂತೆ ಮಕ್ಕಳು ಪ್ರೀತಿಯಿಂದ ವಂಚಿತರಾಗುವುದು ಮಾತ್ರವಲ್ಲ ಸರಿತಪ್ಪು ಯಾವುದು ಎಂದು ಹೇಳಿಕೊಡುವವರಿಲ್ಲದೆ ತಾನು ಮಾಡಿದ್ದೇ ಸರಿ ಎನ್ನುವ ಯೋಚನೆ ಅವರಲ್ಲಿ ಬೇರೂರಲಾರಂಭಿಸುತ್ತದೆ.
ಮನೆಗೆಲಸದವರು, ಪ್ಲೇ ಸ್ಕೂಲ್ ಗಳಲ್ಲಿ ಮಕ್ಕಳನ್ನು ಬೆಳೆಯಲು ಬಿಡುತ್ತಾರೆ. ಇದರಿಂದ ಮಕ್ಕಳು ಪ್ರೀತಿಯನ್ನು ಇನ್ನೆಲ್ಲೋ ಹುಡುಕಲು ಆರಂಭಿಸುತ್ತಾರೆ. ಮನೆಯಲ್ಲಿ ಸರಿಯಾದ ಪ್ರೀತಿ ದೊರೆಯದಿದ್ದರೆ ಮಕ್ಕಳು ಇನ್ನೆಲ್ಲೋ ಅದನ್ನು ಹುಡುಕುತ್ತಾರೆ. ಆಗ ಸಿಟ್ಟು, ಕೋಪಗಳಿಂದ ಅವರನ್ನು ತಿದ್ದಲು ಹೊರಟರೆ ತಪ್ಪುಗಳು ಕಡಿಮೆಯಾಗುವುದಕ್ಕಿಂತ ಹೆಚ್ಚಾಗಿ ನಮ್ಮಿಂದ ಎಲ್ಲ ವಿಷಯವನ್ನು ಮುಚ್ಚಿಡಲು ಪ್ರಾರಂಭಿಸುತ್ತಾರೆ.
ಇದರಿಂದ ತಪ್ಪು ದಾರಿ ಹಿಡಿಯುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಇದರ ಬದಲಾಗಿ ಪ್ರೀತಿಯಿಂದ ಅವರನ್ನು ತಿದ್ದಬೇಕು. ಜತೆಗೆ ತುಂಬು ಕುಟುಂಬದ ಪ್ರೀತಿ ಸಿಗುವ ಹಾಗೇ ಅವರನ್ನು ಬೆಳೆಸಬೇಕು. ಆಗ ಮಕ್ಕಳು ಪ್ರತಿಯೊಬ್ಬರ ಪ್ರೀತಿಯನ್ನು ಪಡೆದು ಸಂಸ್ಕಾರವಂತರಾಗಲು ಸಾಧ್ಯವಿದೆ.