Advertisement

ಮಕ್ಕಳು ಸದಾ ಚಟುವಟಿಕೆಯಿಂದಿರಲಿ

01:35 PM Jul 01, 2018 | |

ದಾವಣಗೆರೆ: ವಿದ್ಯಾರ್ಥಿಗಳು ನಿಂತ ನೀರಾಗದೆ ಸದಾ ಒಂದಿಲ್ಲೊಂದು ಚಟುಚಟಿಕೆಯಿಂದ ಕೂಡಿದ್ದರೆ ಉನ್ನತಿ
ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಬಾಲಮಂದಿರದ ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ.

Advertisement

ಶ್ರೀರಾಮ ನಗರದ ಸರ್ಕಾರಿ ಬಾಲಮಂದಿರದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ
ಮಕ್ಕಳ ಹಕ್ಕುಗಳ ರಕ್ಷಣಾ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬ್ಯಾಗು ಮತ್ತು ವಾಚು ವಿತರಿಸಿ ಮಾತನಾಡಿದ ಅವರು, ಮಕ್ಕಳು ಸದಾ ಚಟುವಟಿಕೆ‌ಯಿಂದ ಕೂಡಿರಬೇಕು. ಆಡಬೇಕು, ಓದಬೇಕು, ಕುಣಿಯಬೇಕು. ಆಗಲೇ ಭೌತಿಕ, ಬೌದ್ಧಿಕ ಉನ್ನತಿ ಸಾಧ್ಯ ಎಂದರು.

ನಿಮಗೆ ನೀಡಿರುವ ವಾಚ್‌ ನಲ್ಲಿರುವ ಮುಳ್ಳುಗಳು ಹೇಗೆ ಸದಾ ಚಲಿಸುತ್ತಿರುತ್ತವೆಯೋ ಹಾಗೆಯೇ ನೀವೂ ಸದಾ ಚಲನಸ್ಥಿತಿಯಲ್ಲಿರಬೇಕು. ಓದಲು, ಜೀವನದಲ್ಲಿ ಏನನ್ನಾದರೂ ಸಾಧಿಸಲು ಚಲಿಸಬೇಕು. ಚಲಿಸದೇ ಒಂದಡೆ ನಿಂತರೆ
ಅದು ಸತ್ತಂತೆಯೇ ಸರಿ. ಜೀವನ ಅಂದರೆ ಓಡುವುದು, ನಿಂತರೆ ಜೀವನದಲ್ಲಿ ಜಾಗ ಇಲ್ಲ. ನಾವು ನಿಷ್ಕ್ರಿಯರಾದರೆ ಪ್ರಪಂಚ ನಮ್ಮನ್ನು ಹೊರಹಾಕುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ಯಾವುದೇ ಜೀವಂತ ವಸ್ತು ಚಲಿಸುತ್ತಿರಬೇಕು. ಬಿತ್ತಿದ ಬೀಜ ಮೊಳಕೆ ಬರುತ್ತಿದೆ ಅಂದರೆ ಅದು ಜೀವಂತವಾಗಿದೆ
ಎಂದರ್ಥ. ಮೊಳಕೆ ಚಿಗುರಬೇಕು, ಹೂವಾಗಬೇಕು. ಹೂ, ಹಣ್ಣು ಬಿಟ್ಟರೆ ಗಿಡದ ಶೋಭೆ ನೋಡಲು ಅಂದವಾಗಿರುತ್ತದೆ.  ಹಾಗೇ ಮಕ್ಕಳು ನಗುವ ಗಿಡಗಳಾಗಿರಬೇಕು. ಗಿಡಮರಗಳಂತೆ ಬೆಳೆಯಬೇಕು. ಸುವಾಸನೆ ಬೀರಬೇಕು ಹಾಗಾ ಗಬೇಕಾದರೆ, ಕಾಲವನ್ನು ಹೊಂದಿಸಿಕೊಳ್ಳಬೇಕು. ಸರಿದ ಕಾಲ ಮತ್ತೂಮ್ಮೆ ದೊರೆಯುವುದಿಲ್ಲ. ನಿಮಗೆ ನೀಡಿರುವ ವಾಚ್‌ನಲ್ಲಿರುವ ಮುಳ್ಳುಗಳು ಎಂದಿಗೂ ಹಿಂದೆ ಓಡುವುದಿಲ್ಲ. ಹಾಗೆ ನಾವುಗಳು ಜೀವನದಲ್ಲಿ ಹಿಂದೋಗದೆ ಮುಂದೆ ಸಾಗಬೇಕು ಎಂದು ಅವರು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ಬಾಲಮಂದಿರದಲ್ಲಿರುವ ಮಕ್ಕಳು ನಾನಾ ಕಾರಣಗಳಿಂದ ಇಲ್ಲಿಗೆ ಬಂದು ದಾಖಲಾಗಿರುತ್ತಾರೆ. ಅವರು ಶ್ರದ್ಧೆಯಿಂದ ಅಭ್ಯಾಸ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕಿದೆ ಎಂದರು. 

Advertisement

ವಾರ್ತಾಧಿಕಾರಿ ಡಿ.ಅಶೋಕ್‌ಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲ್ಲೂಕು ಸಿಡಿಪಿಓಗಳಾದ
ಮೈತ್ರಾದೇವಿ, ಭಾರತಿ ಬಣಕಾರ್‌, ಶಿವಲಿಂಗಪ್ಪ, ಸದಾನಂದ, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಶೋಭಾ
ಟಿ.ಆರ್‌. ವೇದಿಕೆಯಲ್ಲಿದ್ದರು. 

ನಿಮಗೆ ನೀಡಿರುವ ವಾಚ್‌ನಲ್ಲಿರುವ ಮುಳ್ಳುಗಳು ಹೇಗೆ ಸದಾ ಚಲಿಸುತ್ತಿರುತ್ತವೆಯೋ ಹಾಗೆಯೇ ನೀವೂ ಸದಾ
ಚಲನಸ್ಥಿತಿಯಲ್ಲಿರಬೇಕು. ಓದಲು, ಜೀವನದಲ್ಲಿ ಏನನ್ನಾದರೂ ಸಾಧಿಸಲು ಚಲಿಸಬೇಕು. ಚಲಿಸದೇ ಒಂದಡೆ ನಿಂತರೆ ಅದು ಸತ್ತಂತೆಯೇ ಸರಿ. ಜೀವನ ಅಂದರೆ ಓಡುವುದು, ನಿಂತರೆ ಜೀವನದಲ್ಲಿ ಜಾಗ ಇಲ್ಲ. ನಾವು ನಿಷ್ಕ್ರಿಯರಾದರೆ ಪ್ರಪಂಚ ನಮ್ಮನ್ನು ಹೊರಹಾಕುತ್ತದೆ. 
 ಡಿ.ಎಸ್‌.ರಮೇಶ್‌, ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next