ಬದಲಾವಣೆ ಜಗದ ನಿಯಮ ಎನ್ನುವ ಮಾತಿದೆ. ದಿನ ಸಾಗಿದಂತೆಲ್ಲಾ ಬದಲಾವಣೆಯಾಗುತ್ತ ಹೋಗುತ್ತದೆ. ಆದರೆ ಈ ಬದಲಾವಣೆ ಎಂಬುವುದು ಬಹಳ ಅಪಾಯಕಾರಿಯದುದು. ಅದು ಒಳ್ಳೆಯ ರೀತಿಯಲ್ಲಾಗಿದ್ದರೆ ತಪ್ಪೇನಿಲ್ಲ ಬಿಡಿ, ಆದರೆ ಮಾನಸಿಕವಾಗಿ ಕುಗ್ಗಿ ಹೋಗುವಂತಾಗುವುದು ತುಂಬಾನೇ ಅಪಾಯಕಾರಿ. ಅದರಲ್ಲೂ ಇಂದಿನ ಯುವ ಪೀಳಿಗೆಯಲ್ಲಿ ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದನ್ನು ನಾವು ಗಮನಿಸಿರಬಹುದು.
ಆದರೆ ಅವರ ಖನ್ನತೆ ಗೆ ಇರುವ ಕಾರಣ ಕೇಳಿದಾಗ ಯಾವುದೋ ಒಂದು ಕ್ಷುಲ್ಲಕ ವಿಚಾರಕ್ಕಾಗಿರುತ್ತದೆ.ಆಕೆ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿ. ಫಸ್ಟ್ರಾಂಕ್ ಸ್ಟೂಡೆಂಟ್ ಅಲ್ಲದೆ ಇದ್ರೂ ಕೂಡ ತಕ್ಕಮಟ್ಟಿಗೆ ಜಾಣೆಯಾಗಿದ್ದಳು. ಆದ್ರೆ ಅವಳಲ್ಲಿದ್ದ ಒಂದೇ ಒಂದು ದೌರ್ಬಲ್ಯ ಅಂದ್ರೆ ಅವಳ ಸ್ನೇಹಿತರು. ಅಂದರೆ ಅವರೇ ತನ್ನ ಪುಟ್ಟಪ್ರಪಂಚ ಎಂದು ಭಾವಿಸಿದ್ದಳು. ಪ್ರತಿಯೊಂದಕ್ಕೂ ಅವರಿರಬೇಕು ಜೊತೆಯಲ್ಲಿ ಎಂದು ಕೂರುತ್ತಿದ್ದಳು.
ಆದರೆ ಅದ್ಯಾವುದೋ ಒಂದು ಸಂದರ್ಭ ದಲ್ಲಿ ಯಾರದೋ ಮಧ್ಯ ನಡೆದ ಯಾವುದೋ ಒಂದು ಕ್ಷುಲ್ಲಕ ವಿಷಯಕ್ಕೆ ಕಾರಣವೇ ಇಲ್ಲದೆ ಆ ನಿಷ್ಕಲ್ಮಶ ಸ್ನೇಹ ಬಲಿಯಾಯಿತು. ತನ್ನದಲ್ಲದ ತಪ್ಪಿಗೆ ತನ್ನನ್ನು ಹೊಣೆಯಾಗಿರಿಸಿಕೊಂಡು ಬಹಳ ದುಃಖತಪ್ತಳಾದಳು. ಅಷ್ಟು ದಿನದ ಒಡನಾಟ, ತುಂಟಾಟ, ಹುಸಿಮುನಿಸು ಆದರೂ ಕೊನೆಗೆ ಜೊತೆಗೆ ನಿಲ್ಲುತ್ತಿದ್ದ ಆ ಸ್ನೇಹ ಕಾರಣವೇ ಇಲ್ಲದೆ ಕಮರಿಬಿಟ್ಟಿತು. ಆದರೆ ಅದಕ್ಕೆ ಇಂದಿಗೂ ಉತ್ತರ ಮಾತ್ರ ಶೂನ್ಯ.
ಒಂದಷ್ಟು ದಿನ ಆ ಸುಂದರ ಸ್ನೇಹಕ್ಕಾಗಿ ಅತ್ತು ಹಂಬಲಿಸಿ ಬಿಟ್ಟಳು. ತನ್ನ ತಪ್ಪಿಲ್ಲ ಎಂದು ನಿರೂಪಿಸಲು ಹೋಗಿ ಸೋತು ಹೋದಳು. ಆದರೆ ಅವಳ ಹಿತವ ಬಯಸಿದ ಕೆಲವು ಮನಸ್ಸುಗಳಿಗೆ ಆಕೆಯ ಆ ಬದಲಾವಣೆ ಸಹಿಸಲಾಗಲಿಲ್ಲ. ಕೊನೆಗೂ ಅವರೆಲ್ಲರ ಮಾತು ಕೇಳಿ ತಾನು ಹೀಗಿರಬಾರದು ಬದಲಾಗಬೇಕು ಎಂದು ತೀರ್ಮಾನಿಸಿ, ಒಂದು ಕ್ಷಣ ತನ್ನ ಕನಸು,ಗುರಿ ಹಾಗೂ ಮೊದಲಿದ್ದ ರೀತಿ ಎಲ್ಲವನ್ನು ನೆನಪಿಸಿಕೊಂಡಾಗ ಇದು ತಾನಲ್ಲ. ಇನ್ನಾದರೂ ನಾನು ನನಗಿರಬೇಕೆಂದು ಆಕೆಗೆ ಅರಿವಾಗತೊಡಗಿತು.
ಅಂದಿನಿಂದ ಆಕೆಗೆ ಜೊತೆಯಾದದ್ದು ಆಕೆಯ ನೆಚ್ಚಿನ ಪುಸ್ತಕಗಳು.ಹಾಗೂ ತನ್ನ ಕನಸಿನ ಹಾದಿಗೆ ಹೆಜ್ಜೆಯಿಡಳು ಯಾವೆಲ್ಲಾ ಮಾರ್ಗಗಳು ಬೇಕೋ ಅದರಲ್ಲೇ ಹೆಚ್ಚು ಕಾಲ ಕಳೆಯಲಾರಂಭಿಸಿದಳು. ಮೊದಲಾದರೆ ಸಮಯ ಸಿಕ್ಕಾಗಲೆಲ್ಲ ಮಾತಿಗೆ ಕೂರಲು ಕಾಯುತ್ತಿದ್ದವಳು ಇಂದು ಸಮಯ ಸಿಕ್ಕಾಗ ಪುಸ್ತಕದ ಪುಟ ತಿರುವಿಕೊಂಡು ಕೂತಳು.
ಇಲ್ಲಿ ನಾವು ತಿಳಿಯಬೇಕಾದದ್ದು ಏನೆಂದರೆ ಸಮಸ್ಯೆಗಳು ಸಾವಿರ ಬರಬಹುದು. ಕೆಲವೊಂದು ನಾವು ಪಡೆದುಕೊಳ್ಳಬಹುದು ಅದೇ ರೀತಿ ಕೆಲವೊಂದು ಕಳೆದುಕೊಳ್ಳಬಹುದು.
ಆದರೆ ಎಲ್ಲವೂ ಕೂಡ ನಮಗೊಂದು ಪಾಠ ಕಳಿಸಿಯೇ ಕಲಿಸುತ್ತದೆ. ಕೆಲವೊಂದು ಅನುಭವ ಹಾಗೂ ಘಟನೆಗಳು ನಮ್ಮ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಆದರೆ ನಾವು ಯಾವುದನ್ನಾದರೂ ಋಣಾತ್ಮಕವಾಗಿ ತೆಗೆದುಕೊಳ್ಳುವುದರ ಬದಲಾಗಿ ಅದನ್ನು ಧನಾತ್ಮಕವಾಗಿ ತೆಗೆದುಕೊಂಡಾಗ ಖಂಡಿತ ನಾವು ನಮ್ಮ ವ್ಯಕ್ತಿತ್ವವನ್ನು ಇನ್ನೂ ಚೆನ್ನಾಗಿ ರೂಸಿಕೊಳ್ಳಲು ಸಾಧ್ಯವಾಗುತ್ತದೆ. ನಾವು ಬದಲಾಗಬೇಕು ಆದರೆ ಅದು ಒಳ್ಳೆಯ ರೀತಿಯಲ್ಲಾಗಿರಬೇಕು. ನಮ್ಮವರು ನಮ್ಮನ್ನು ಕಂಡು ಹರ್ಷಗೊಳ್ಳುವಂತಿರಬೇಕು.
ಪ್ರಸಾದಿನಿ ಕೆ.
ತಿಂಗಳಾಡಿ