ಅಥಣಿ: ನಂತರ ಭಾರಿ ಮಳೆಯಿಂದಾಗಿ 118 ವರ್ಷಗಳ ನಂತರ ಕೃಷ್ಣಾ ನದಿಗೆ ಮಹಾ ಪ್ರವಾಹ ಬಂದಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಪುನರ್ ನಿರ್ಮಾಣಕ್ಕೆ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಆಗ್ರಹಿಸಿದರು.
ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಹದಿಂದ ಅವಾಂತರ ಸೃಷ್ಟಿಯಾಗಿ ಲಕ್ಷಾಂತರ ಜನ ಮನೆ, ಮಠ ಕಳೆದುಕೊಂಡು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಪಕ್ಕದ ಮಹಾರಾಷ್ಟ್ರದಲ್ಲಿಯೂ ಪ್ರವಾಹದಿಂದ ಸಾವಿರಾರು ಕೋಟಿ ರೂ. ಹಾನಿ ಸಂಭವಿಸಿದೆ ಆದರೆ ಪರಿಹಾರ ಕೊಡುವಲ್ಲಿ ಮಾತ್ರ ಕೇಂದ್ರ ನಮ್ಮ ರಾಜ್ಯಕ್ಕೆ ತಾರತಮ್ಯ ಮಾಡಿದೆ. ನಮ್ಮ ರಾಜ್ಯಕ್ಕೆ ಕೇವಲ 140 ಕೋಟಿ ರೂ.ಗಳ ಪರಿಹಾರ ಮಾತ್ರ ಘೋಷಿಸಿದೆ. ಕೇಂದ್ರ ಗೃಹ ಸಚಿವ ಅಮಿತ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ರಾಜ್ಯದ ಪರಿಸ್ಥಿತಿ ವೀಕ್ಷಿಸಿದ್ದು, ಮಹಾರಾಷ್ಟ್ರ ಮಾದರಿಯಲ್ಲಿಯೇ ಪ್ರವಾಹ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ಇದಕ್ಕಾಗಿ ಸರ್ವ ಪಕ್ಷಗಳ ನಿಯೋಗ ಕೇಂದ್ರಕ್ಕೆ ಕೊಂಡೋಯ್ಯಬೇಕು ಎಂದು ಸಿ.ಎಂ. ಯಡಿಯುರಪ್ಪನವರಿಗೆ ಸಲಹೆ ನೀಡಿದರು.
ಪ್ರವಾಹದಲ್ಲಿ ಮುಳುಗಿದ ಗ್ರಾಮಗಳ ಪುನರ್ ನಿರ್ಮಿಸುವ ಕಾರ್ಯ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ. ಬದುಕು ಕಟ್ಟಿಕೊಳ್ಳಲು ಸಂತ್ರಸ್ತರಿಗೆ ಅವಕಾಶ ಕಲ್ಪಿಸುವ ಕಾರ್ಯವೂ ನಡೆಯಬೇಕಿದೆ. ಈಗಾಗಲೇ ರಾಜ್ಯ ಸರಕಾರ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಹೊಸ ಮನೆ ಕಟ್ಟಿಕೊಳ್ಳಲು 5 ಲಕ್ಷ ಹಣ ನೀಡುವುದಾಗಿ ಘೋಷಿಸಿದೆ. ಆದರೆ ಈ ಮೊತ್ತವನ್ನು 10 ಲಕ್ಷಕ್ಕೆ ಏರಿಸುವಂತೆ ಎಂದು ಆಗ್ರಹಿಸಿದ ಅವರು 10 ಲಕ್ಷ ರೂ.ಗಳಲ್ಲಿ ಮಾತ್ರ ಸುಸಜ್ಜಿತ ಮನೆ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.
ಇದೇ ಪ್ರಥಮ ಬಾರಿಗೆ ಒಂದೇ ದಿನದಲ್ಲಿ 6 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹರಿ ಬಿಡಲಾಗಿದೆ. ಇದರಿಂದಲೇ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಮ್ಮ ರಾಜ್ಯದಲ್ಲಿ ಎದುರಾಯಿತು. ನೈಸರ್ಗಿಕ ವಿಕೋಪಗಳು ಯಾರ ನಿಯಂತ್ರಣದಲ್ಲೂ ಇಲ್ಲ. ನೀರು ಅಷ್ಟು ದೊಡ್ಡ ಪ್ರಮಾಣದಲ್ಲಿ ಹರಿದು ಬಂದಿದ್ದರಿಂದಲೇ ಅನಿವಾರ್ಯವಾಗಿ ಮಹಾರಾಷ್ಟ್ರ ನೀರು ಬಿಡಲೇಬೇಕಾಯಿತು ಎಂದರು.
ನಂತರ ಅವರು ಝುಂಜರಾವಾಡ, ಹಲ್ಯಾಳ ಹಾಗೂ ಪಿ.ಕೆ.ನಾಗನೂರ ಆರ್.ಸಿ ಸೆಂಟರ್‌ಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವ ಹೇಳಿ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಮತ್ತು ಶಾಸ್ವತ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಹೇಳಿದರು.
ಮಾಜಿ ಸಚಿವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ,. ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಗಜಾನನ ಮಂಗಸೂಳಿ, ಎಸ್.ಕೆ.ಬುಟಾಳಿ, ಬಿ.ಕೆ.ಬುಟಾಳಿ, ರಮೇಶ ಸಿಂದಗಿ, ಸತ್ಯಪ್ಪ ಬಾಗೆನ್ನವರ, ಸುರೇಶಗೌಡ ಪಾಟೀಲ, ಅನಿಲ ಸುಣಧೋಳಿ, ಶೀತಲಗೌಡ ಪಾಟೀಲ, ಚಿದಾನಂದ ತಳಕೇರಿ, ಮಹಾಂತೇಶ ಬಾಡಗಿ, ಮಂಜು ಹೊಳಿಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.