Advertisement

ಮಹಾರಾಷ್ಟ್ರಕ್ಕೆ ಕೇಂದ್ರ ಸರಕಾರ ಸೌಹಾರ್ದತೆಯ ಪಾಠ ಮಾಡಲಿ

12:52 AM Apr 06, 2023 | Team Udayavani |

ಬೆಳಗಾವಿ ಸಹಿತ ಮರಾಠಿ ಭಾಷಿಕರು ನೆಲೆಸಿರುವ ಕರ್ನಾಟಕದ ಪ್ರದೇಶಗಳು ಎಂದಿಗೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ ಎಂಬುದು ಗೊತ್ತಿದ್ದರೂ ಪದೇ ಪದೆ ಗಡಿ ಕಿರಿಕಿರಿ ಉಂಟು ಮಾಡುತ್ತಿರುವ ನೆರೆಯ ರಾಜ್ಯಕ್ಕೆ ಬುದ್ಧಿ ಹೇಳುವ ಕೆಲಸವನ್ನು ಕೇಂದ್ರ ಸರಕಾರ ಈಗಲಾದರೂ ಮಾಡಲೇಬೇಕಾದ ಪರಿಸ್ಥಿತಿ ತಲೆದೋರಿದೆ. ನಾವು ಒಕ್ಕೂಟ ವ್ಯವಸ್ಥೆಯಡಿ ಬದುಕುತ್ತಿದ್ದು, ಎಲ್ಲ ರಾಜ್ಯಗಳು ಸಹಬಾಳ್ವೆಯಿಂದ ವರ್ತಿಸಬೇಕು ಎಂಬುದನ್ನು ಎಲ್ಲ ರಾಜ್ಯಗಳು ಕಲಿತುಕೊಳ್ಳಲೇಬೇಕು. ಆದರೆ ನೆರೆಯ ಮಹಾರಾಷ್ಟ್ರ, ಈ ಕಡೆ ತಮಿಳುನಾಡು ರಾಜ್ಯಗಳು ಕರ್ನಾಟಕದ ಜತೆ ಸದಾ ಜಗಳ ಮಾಡಿಕೊಂಡು ಬರುತ್ತಲೇ ಇವೆ. ಒಂದು ರೀತಿ ಭಾರತದ ಜತೆ ಚೀನ ಮತ್ತು ಪಾಕಿಸ್ಥಾನ ಗಡಿ ಗಲಾಟೆ ಮಾಡುತ್ತಿರುವ ರೀತಿ ಈ ಎರಡೂ ರಾಜ್ಯಗಳು ವರ್ತಿಸುತ್ತಿವೆ ಎಂದರೆ ತಪ್ಪಾಗಲಾರದು.

Advertisement

ಆದರೆ ಈ ರಾಜ್ಯಗಳು ಅರಿಯಬೇಕಾಗಿರುವುದು ನಾವು ಪಾಕಿಸ್ಥಾನವೋ ಅಥವಾ ಚೀನ ದೇಶವೋ ಅಲ್ಲ ಎಂಬುದನ್ನು. ಇದಕ್ಕೆ ಬದಲಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಸಹೋದರರ ಜತೆ ಬದುಕುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಲೇಬೇಕಾಗಿದೆ. ಬೆಳಗಾವಿ ಗಡಿ ವಿಚಾರದಲ್ಲಿ ಮೊದಲಿನಿಂದಲೂ ಮಹಾರಾಷ್ಟ್ರ, ತನ್ನ ಕೆಟ್ಟ ಧೋರಣೆ ಅನುಸರಿಸಿಕೊಂಡು ಬರುತ್ತಲೇ ಇದೆ. ಬೆಳಗಾವಿ ವಿಚಾರವಿಲ್ಲದೇ ಹೋದರೆ ಆ ರಾಜ್ಯದಲ್ಲಿ ರಾಜಕಾರಣ ನಡೆಸುವುದು ಅಸಾಧ್ಯ ಎಂಬಂಥ ಸ್ಥಿತಿ ಉದ್ಭವ ಮಾಡಿಕೊಂಡಿರುವ ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ಪದೇ ಪದೆ ಕರ್ನಾಟಕದ ಜತೆಗೆ ಕಾಲು ಕೆರೆದುಕೊಂಡು ಬರುತ್ತಲೇ ಇವೆ.

ಈಗ ಅಲ್ಲಿನ ಸರಕಾರವೇ, ಕರ್ನಾಟಕದ ಒಳಗಿರುವ, ಮಹಾರಾಷ್ಟ್ರ ಭಾಷಿಕರೇ ಹೆಚ್ಚಾಗಿರುವ ಪ್ರದೇಶಗಳ 865 ಗ್ರಾಮಗಳ ಜನರಿಗೆ ಮಹಾತ್ಮಾ ಜ್ಯೋತಿರಾವ್‌ ಫ‌ುಲೆ ಆರೋಗ್ಯ ವಿಮಾ ಸೌಕರ್ಯ ಮಾಡಿಕೊಟ್ಟಿದೆ. ಬಜೆಟ್‌ನಲ್ಲೇ ಈ ಬಗ್ಗೆ ಘೋಷಿಸಲಾಗಿದ್ದು, ಈಗ ಅಧಿಕೃತ ಆದೇಶ ಹೊರಡಿಸಲಾಗಿದೆ. ಇದು ಕರ್ನಾಟಕದಲ್ಲಿ ಸಿಟ್ಟಿಗೂ ಕಾರಣವಾಗಿದೆ. ಈ ಹಿಂದೆ ಬಜೆಟ್‌ನಲ್ಲಿ ಘೋಷಣೆ ಮಾಡಿದಾಗಲೇ, ರಾಜ್ಯ ಸರಕಾರವೂ ಸಹಿತ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಆ ರಾಜ್ಯದ ವರ್ತನೆ ಬಗ್ಗೆ ಕಿಡಿಕಾರಿದ್ದರು. ಆದರೆ ಮತ್ತೆ ಅದೇ ಅತಿರೇಕತನ ಮುಂದುವರಿಸಿರುವ ಮಹಾರಾಷ್ಟ್ರ ಸರಕಾರ ಅಧಿಕೃತ ಆದೇಶವನ್ನೇ ಹೊರಡಿಸಿದೆ. ಆದರೆ ಮಹಾರಾಷ್ಟ್ರದ ಈ ಆದೇಶ ಖಂಡನೀಯವೇ ಆಗಿದೆ. ಕರ್ನಾಟಕದ ಗ್ರಾಮಗಳಿಗೆ ಆ ರಾಜ್ಯದ ಯೋಜನೆಗಳನ್ನು ಪ್ರಕಟಿಸುವ ಅಗತ್ಯವಾದರೂ ಏನಿದೆ? ಇದುವರೆಗೂ ಮಹಾರಾಷ್ಟ್ರದೊಳಗಿರುವ ಕನ್ನಡ ಭಾಷಿಕರ ಗ್ರಾಮಗಳಿಗೆ ಅಲ್ಲಿನ ಸರಕಾರ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ನೀಡದೇ ಅವರನ್ನು ಮೂರನೇ ದರ್ಜೆ ಪ್ರಜೆಗಳಂತೆ ನೋಡಿಕೊಳ್ಳಲಾಗುತ್ತಿದೆ. ಮೊದಲು ಈ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವುದನ್ನು ಬಿಟ್ಟು, ಕರ್ನಾಟಕದ ಒಳಗಿರುವ ಗ್ರಾಮಗಳ ಜನರಿಗೆ ಘೋಷಣೆ ಮಾಡುವ ಹಕೀಕತ್ತಾದರೂ ಏನಿದೆ?

ಮಹಾಜನ ಆಯೋಗದ ವರದಿಯಂತೆ ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಿಕರೇ ಹೆಚ್ಚಾಗಿರುವ 247 ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಬೇಕು. ಈ ಬಗ್ಗೆ ಮಹಾರಾಷ್ಟ್ರದೊಳಗಿರುವ ಕನ್ನಡ ಭಾಷಿಕರ ಗ್ರಾಮಗಳಲ್ಲಿ ಹೋರಾಟವೇ ನಡೆಯುತ್ತಾ ಬಂದಿದೆ. ಈ ಹೋರಾಟಗಳಿಗೆ ಕಾರಣವೂ ಇದೆ. ಮೊದಲಿನಿಂದಲೂ ಮಹಾರಾಷ್ಟ್ರ ಸರಕಾರ ಈ ಕನ್ನಡ ಭಾಷಿಕರ ಗ್ರಾಮಗಳ ಕುರಿತಾಗಿ ಅಸಡ್ಡೆ ಮಾಡಿಕೊಂಡೇ ಬಂದಿದೆ. ಹೀಗಾಗಿ ಕಳೆದ ವರ್ಷ 50ಕ್ಕೂ ಹೆಚ್ಚು ಮಹಾರಾಷ್ಟ್ರದ ಕನ್ನಡ ಭಾಷಿಕರ ಗ್ರಾಮಗಳು ಕರ್ನಾಟಕಕ್ಕೆ ಸೇರುವುದಾಗಿ ತಮ್ಮ ತಮ್ಮ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನಿರ್ಣಯ ಘೋಷಿಸಿಕೊಂಡಿದ್ದವು. ಆದರೆ ಮಹಾರಾಷ್ಟ್ರ ಸರಕಾರ ಈ ಕುರಿತಂತೆ ಇದುವರೆಗೆ ತಲೆ ಕೆಡಿಸಿಕೊಂಡೇ ಇಲ್ಲ. ಬದಲಾಗಿ ಕರ್ನಾಟಕದ ಒಳಗಿರುವ ಪ್ರದೇಶಗಳ ಮೇಲೆ ಕಣ್ಣಿಟ್ಟುಕೊಂಡು ಕುಳಿತಿದೆ. ಜತೆಗೆ ಇದು ಆಗುವ ಕೆಲಸವಲ್ಲ ಎಂದು ಗೊತ್ತಿದ್ದರೂ ಕಿರಿಕಿರಿ ಮಾಡುತ್ತಿರುವುದು ಒಪ್ಪುವ ಸಂಗತಿಯೇ ಅಲ್ಲ.

Advertisement

Udayavani is now on Telegram. Click here to join our channel and stay updated with the latest news.

Next