ಚಿಂಚೋಳಿ: ತಾಲೂಕಿನ ಅಣವಾರ ಗ್ರಾಮದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರಿಯಾಗಿರುವ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಕಟ್ಟಡ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಬೇಕು ಎಂದು ಶಾಸಕ ಡಾ| ಅವಿನಾಶ ಜಾಧವ ತಾಕೀತು ಮಾಡಿದರು.
ಅಣವಾರ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.
ನಮ್ಮ ತಂದೆ, ಕಲಬುರಗಿ ಸಂಸದ ಡಾ| ಉಮೇಶ ಜಾಧವ ಅವರು ಚಿಂಚೋಳಿ ಮತಕ್ಷೇತ್ರದ ಶಾಸಕರಾಗಿದ್ದಾಗ ಇಲ್ಲಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿ ಸರ್ಕಾರದಿಂದ 2017-18ನೇ ಸಾಲಿನಲ್ಲಿ 9.64ಕೋಟಿ ರೂ. ಅನುದಾನ ಮಂಜೂರಿ ಮಾಡಿದ್ದಾರೆ. ಒಟ್ಟು 12 ಎಕರೆ ಪ್ರದೇಶದಲ್ಲಿ ವಿಶಾಲವಾದ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡ ಕಾಮಗಾರಿ ಗುಣಮಟ್ಟದಿಂದ ನಡೆಸಬೇಕು ಎಂದರು.
ಬ್ಲಾಕ್ 1ರಲ್ಲಿನ ಕೋಣೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ನೆಲ ಹಾಸಿಗೆ ಸರಿಯಾಗಿಲ್ಲ. ಕರ್ನಾಟಕ ಹೌಸಿಂಗ್ ಬೋರ್ಡ್ ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದೆ. ಕೆಲಸದ ಬಗ್ಗೆ ಇನ್ನು 3ನೇ ತಂಡದಿಂದ ಪರಿಶೀಲಿಸಿಲ್ಲ. ಆದ್ದರಿಂದ ತಾಪಂ ಅಧಿಕಾರಿ ಅನಿಲಕುಮಾರ ರಾಠೊಡ ವಸತಿ ಶಾಲೆಯ ಎಲ್ಲ ಕಟ್ಟಡ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಬೇಕೆಂದು ಸೂಚನೆ ನೀಡಿದರು.
ಅಣವಾರ ಗ್ರಾಮದಲ್ಲಿ ಸರ್ಕಾರಿ ಜಮೀನು 200 ಎಕರೆ ಜಮೀನು ಇರುವುದರಿಂದ ಈ ಪ್ರದೇಶದಲ್ಲಿ ಶೈಕ್ಷಣಿಕ ಕೇಂದ್ರಗಳು ತಲೆ ಎತ್ತಲಿವೆ. ಸ್ನಾತಕೋತ್ತರ ಕೇಂದ್ರ ಕಟ್ಟಡಕ್ಕಾಗಿ ಸೂಕ್ತವಾಗಿರುವುದರಿಂದ ಉತ್ತಮ ವಾತಾವರಣ ಪ್ರದೇಶವಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಸುತ್ತಮುತ್ತ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಅಂಜುಮ ತಬ್ಸುಮ್, ತಾಪಂ ಇಒ ಅನಿಲಕುಮಾರ ರಾಠೊಡ, ಜೆಇ ಶೈಲೇಶ ಹುಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಾಂತವೀರಯ್ಯ ಹಿರೇಮಠ, ಶಿವಯೋಗಿ ರುಸ್ತಂಪುರ, ಭೀಮಸಿಂಗ್ ಧೋಂಡಿಕರ, ಲಕ್ಷ್ಮಣ ಆವಂಟಿ, ಶ್ರೀಮಂತ ಕಟ್ಟಿಮನಿ, ಮತೀನ್ ಸೌದಾಗರ, ಜಿಶಾನ್ ಅಲಿ ಪಟ್ಟೇದಾರ, ಕೆ.ಎಂ.ಬಾರಿ, ಗೌರಿಶಂಕರ ಉಪ್ಪಿನ, ಸೋಮಶೇಖರ ಮಂಗಲಗಿ, ರಮೇಶ ದುತ್ತರಗಿ, ಕಂದಾಯ ನಿರೀಕ್ಷಕ ರವಿಕುಮಾರ ಚಿಟ್ಟಾ ಇನ್ನಿತರರಿದ್ದರು.