ಮಹಾನಗರ: ಶಿಕ್ಷಣ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದ್ದ ಬ್ಯಾರಿ ಸಮುದಾಯವು ಇಂದು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ. ಸಮುದಾಯದಲ್ಲಿ ಇನ್ನಷ್ಟು ಶೈಕ್ಷಣಿಕ ಕ್ರಾಂತಿಯಾಗಬೇಕಾಗಿದೆ ಎಂದು ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಹೇಳಿದರು.
ದುಬಾೖ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ಮತ್ತು ಬ್ಯಾರೀಸ್ ಕಲ್ಚರಲ್ ಫೋರಂ ಟ್ರಸ್ಟ್ ಮಂಗಳೂರು ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಹಕಾರದಲ್ಲಿ ನಗರದ ಪುರಭವನದಲ್ಲಿ ರವಿವಾರ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಸ್ವ ಉದ್ಯೋಗಕ್ಕಾಗಿ 60 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಿಸಿಎಫ್ನ ಅಧ್ಯಕ್ಷ ಡಾ| ಬಿ.ಕೆ. ಯೂಸುಫ್, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು 17 ವರ್ಷಗಳಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಈ ವರ್ಷ ಪಿಯುಸಿಯಿಂದ ಸ್ನಾತಕೋತ್ತರ ಪದವಿಯವರೆಗಿನ 480 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಗುರಿ ಹೊಂದಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ರಾಜ್ಯ ಅಲ್ಪಸಂಖ್ಯಾಕರ ಆಯೋಗದ ಅಧ್ಯಕ್ಷ ಜಿ.ಎ. ಬಾವಾ, ವಿಧಾನ ಪರಿಷತ್‌ನ ಸದಸ್ಯ ಐವನ್ ಡಿ’ಸೋಜಾ, ಡಿಸಿಪಿ ಅರುಣಾಂಶು ಗಿರಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಗಣ್ಯರಾದ ವಿನಯ ಕುಮಾರ್ ಸೊರಕೆ, ಮೊಯ್ದಿನ್ ಬಾವಾ, ಹಾಜಿ ಎಸ್.ಎಂ. ರಶೀದ್, ಅಬ್ದುಲ್ ರವೂಫ್ ಪುತ್ತಿಗೆ, ಡಾ| ಯು.ಟಿ. ಇಫ್ತಿಕಾರ್ ಅಲಿ, ಮುಹಮ್ಮದ್ ಅಲಿ ಉಚ್ಚಿಲ್, ಅಬ್ದುಲ್ ರವೂಫ್, ಪಿ.ಬಿ. ಅಬ್ದುಲ್ ಹಮೀದ್, ಹಾಜಿ ಕೆ.ಎಸ್. ಸೈಯದ್ ಕರ್ನಿರೆ, ಮುಹಮ್ಮದ್ ಹಾರಿಸ್ ಮುಕ್ಕ, ಖಾಸಿಂ ಅಹ್ಮದ್, ಹೈದರ್ ಪರ್ತಿಪ್ಪಾಡಿ, ಬಿ.ಎ.ಮುಹಮ್ಮದ್ ಹನೀಫ್, ಖಾಲಿದ್ ಉಜಿರೆ, ಬಶೀರ್ ಬೈಕಂಪಾಡಿ, ಅಝೀಝ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ, ಪ್ರಾಂಶುಪಾಲೆ ಝಾಹಿದಾ ಜಲೀಲ್ ಭಾಗವಹಿಸಿದ್ದರು.
ಯುಎಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಪ್ರೊ| ಕಾಪು ಮುಹಮ್ಮದ್ ಕೆರಿಯರ್ ಗೈಡೆನ್ಸ್ ಸಿಂಪೋಸಿಯಂ ನಡೆಸಿಕೊಟ್ಟರು. ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ದುಆಗೈದರು. ಅರ್ಹ 60 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಬಿಸಿಎಫ್ನ ಕಾರ್ಯಚಟುವಟಿಕೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಬಿಸಿಎಫ್ ಸ್ಕಾಲರ್‌ಶಿಪ್ ಕಮಿಟಿಯ ಅಧ್ಯಕ್ಷ ಎಂ.ಇ. ಮೂಳೂರು ವಿವರಿಸಿದರು. ಬಿಸಿಎಫ್ ಪೋಷಕ ಬಿ.ಎಂ. ಮುಮ್ತಾಝ್ ಅಲಿ ಸ್ವಾಗತಿಸಿದರು.
ಪ್ರೊ| ಹಾಫಿಳ್ ಸಲ್ಮಾನ್ ಕಿರಾಅತ್ ಪಠಿಸಿದರು. ಬಿಸಿಎಫ್ ಉಪಾಧ್ಯಕ್ಷ ಅಮೀರುದ್ದೀನ್ ಎಸ್.ಐ. ವಂದಿಸಿದರು. ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ| ಕಾಪು ಮುಹಮ್ಮದ್ ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಲಹೆಗಾರ ರಫೀಕ್ ಮಾಸ್ಟರ್ ನಿರೂಪಿಸಿದರು.