Advertisement
ಕಟ್‌ಬೆಲ್ತೂರು ಗ್ರಾಮದಲ್ಲಿ ಮೂರು ವಾರ್ಡ್ ಗಳಿವೆ. ಬೆಲ್ತೂರು, ಹರೇಗೋಡು ಹಾಗೂ ಕುದ್ರು ವಾರ್ಡ್‌ಗಳು. ಒಟ್ಟು 12 ಮಂದಿ ಗ್ರಾ.ಪಂ. ಸದಸ್ಯರಿದ್ದಾರೆ. 3,500 ಇಲ್ಲಿಯ ಜನಸಂಖ್ಯೆ. ಪಡುಕುದ್ರು ಕುದ್ರು ಪ್ರದೇಶವಾಗಿದೆ. ಗ್ರಾಮದಲ್ಲಿ ಶ್ರೀ ಭದ್ರಮಹಾಂಕಾಳಿ ದೇವಸ್ಥಾನವಿದ್ದು, ಶ್ರೀ ಮಹಾವಿಷ್ಣು ದೇವಸ್ಥಾನ, ಒಂದು ಚರ್ಚ್ ಇದೆ. ಭತ್ತದ ಕೃಷಿಯೇ ಇಲ್ಲಿನವರ ಆಧಾರ. ಇದರೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಹೆಮ್ಮಾಡಿ ಸೇವಂತಿಗೆಯನ್ನೂ ಕೆಲವರು ಬೆಳೆಯುತ್ತಿದ್ದಾರೆ.
Related Articles
Advertisement
ಕಟ್‌ಬೆಲ್ತೂರು – ಹುಲಿಕೆರೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರಗೊಂಡಿದೆ. ಇದು ಮಹಾವಿಷ್ಣು ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯೂ ಸಹ. ನಿತ್ಯವೂ ನೂರಾರು ಮಂದಿ ಸಂಚರಿಸುವ ಮುಖ್ಯ ರಸ್ತೆ. ಇಂದಿರಾ ನಗರದಿಂದ ರವಿ ಭಟ್ ಮನೆಯವರೆಗಿನ ಮಣ್ಣಿನ ರಸ್ತೆಯಾಗಿದ್ದು, ಮಳೆಗಾಲದಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ. ಇನ್ನು ಹೆಮ್ಮಾಡಿ ಜನತಾ ಪ್ರೌಢಶಾಲೆ, ಪ.ಪೂ. ಕಾಲೇಜನ್ನು ಹೆದ್ದಾರಿಯಿಂದ ಸಂಪರ್ಕಿಸುವ ಸುಮಾರು 200 ಮೀ. ದೂರದ ಮಣ್ಣಿನ ರಸ್ತೆಯೂ ಮಳೆಯಿಂದಾಗಿ ಸಂಪೂರ್ಣ ರಾಡಿಯೆದ್ದಿದೆ. ಶಾಲೆ – ಕಾಲೇಜಿಗೆ ಬರುವ ನೂರಾರು ಮಂದಿ ಮಕ್ಕಳು ಮಳೆಗಾಲ ಪೂರ್ತಿ ಸಂಕಷ್ಟದಲ್ಲೇ ಕಳೆಯಬೇಕು.
ಮುಗಿಯದ ಕಾಮಗಾರಿ
ಕಟ್‌ಬೆಲ್ತೂರು ಹಾಗೂ ದೇವಲ್ಕುಂದ ಗ್ರಾಮವನ್ನೊಳ ಗೊಂಡ ಹೊಸ ಪಂಚಾಯತ್ ಆಗಿ 2014-15 ರಲ್ಲಿ ರಚನೆಗೊಂಡಿತು. ಆಗ ದೇವಲ್ಕುಂದದಲ್ಲಿರುವ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಗ್ರಾ.ಪಂ. ಕಚೇರಿ ಆರಂಭಗೊಂಡಿತು. ಆ ಬಳಿಕ ಕಳೆದ ವರ್ಷ ಕಟ್‌ಬೆಲೂ¤ರಿನಲ್ಲಿರುವ ಗ್ರಾಮ ವಿಕಾಸ ಯೋಜನೆಯಡಿ ನಿರ್ಮಾಣಗೊಂಡ ಸಮುದಾಯ ಭವನದಲ್ಲಿ ಗ್ರಾ.ಪಂ.ಕಚೇರಿ ಕಾರ್ಯಾಚರಿಸುತ್ತಿದೆ. ಇದೇ ಭವನದ ಪಕ್ಕದಲ್ಲಿಯೇ ಗ್ರಾ.ಪಂ. ಕಚೇರಿ ಕಟ್ಟಡವು ನಿರ್ಮಾಣವಾಗುತ್ತಿದೆ. ಆದರೆ ಕಾಮಗಾರಿ ಆರಂಭ ಗೊಂಡು 5 ವರ್ಷವಾದರೂ ಇನ್ನೂ ಮುಗಿದಿಲ್ಲ. ಈ ವರ್ಷವಾದರೂ ಕಟ್ಟಡ ಉದ್ಘಾಟನೆಯಾಗಿ ಜನರ ಸೇವೆಗೆ ಲಭ್ಯವಾಗಬಹುದೆಂಬ ನಿರೀಕ್ಷೆ ಇದೆ.
ಉಪ್ಪು ನೀರಿನ ಸಮಸ್ಯೆ
ಜಾಲಾಡಿ, ಹೊಸಕಳಿ ಭಾಗದಲ್ಲಿ ಬೇಸಗೆ ಶುರುವಾದರೆ ಕೃಷಿಗೆ ಉಪ್ಪು ನೀರಿನ ಸಮಸ್ಯೆ ತಲೆದೋರುತ್ತದೆ. ಇಲ್ಲಿನ 50 ಎಕರೆಗೂ ಮಿಕ್ಕಿ ಪ್ರದೇಶದಲ್ಲಿ ಉಪ್ಪು ನೀರಿನಿಂದಾಗಿ ಹಿಂಗಾರು ಹಂಗಾಮಿನ ಕೃಷಿಗೆ ತೊಡಕಾಗಿದೆ. ಕೆಲವರಂತೂ ಕೃಷಿಯಿಂದಲೇ ವಿಮುಖರಾಗಿದ್ದಾರೆ. ಮಾತ್ರವಲ್ಲದೆ ಎಪ್ರಿಲ್ – ಮೇಯಲ್ಲಿ ಬಾವಿಗಳ ನೀರು ಸಹ ಉಪ್ಪಾಗುವುದರಿಂದ ಕುಡಿಯವ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಇಲ್ಲಿನ ಸುಮಾರು 500 ಮೀ.ವರೆಗೆ ನದಿ ದಂಡೆ ನಿರ್ಮಾಣವಾದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಇದನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕೆಂಬುದು ಜನರ ಆಗ್ರಹ.
ಆದಷ್ಟು ಬೇಗ ಆಗಲಿ: ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಅದರ ದುರಸ್ತಿ ತ್ವರಿತಗತಿಯಲ್ಲಿ ಆಗಬೇಕಿದೆ. ಜಾಲಾಡಿ, ಹೊಸ್ಕಳಿ ಭಾಗದಲ್ಲಿ ಬೇಸಗೆಯಲ್ಲಿ ಉಪ್ಪು ನೀರಿನ ಸಮಸ್ಯೆಯಿದೆ. ತೊಪ್ಲು ಕಿಂಡಿ ಅಣೆಕಟ್ಟಿನ ನಿರ್ವಹಣೆ ಸಮಸ್ಯೆಯಿಂದ ನಮ್ಮ ಗ್ರಾಮದ ರೈತರಿಗೂ ಸಮಸ್ಯೆಯಾಗುತ್ತಿದೆ. – ಶರತ್ ಶೆಟ್ಟಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷರು
ಪ್ರಸ್ತಾವನೆ ಸಲ್ಲಿಕೆ: ಗ್ರಾಮದ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಶಾಸಕರು, ಸಂಬಂಧಪಟ್ಟ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾ.ಪಂ. ಹೊಸ ಕಟ್ಟಡ ಕೊನೆಯ ಹಂತದ ಕಾಮಗಾರಿ ನಡೆಯುತ್ತಿದೆ. ಜಾಲಾಡಿ, ಹೊಸ್ಕಳಿ ಭಾಗದ ನದಿ ದಂಡೆ ಬೇಡಿಕೆಯನ್ನು ಶಾಸಕರ ಗಮನಕ್ಕೆ ತರಲಾಗಿದೆ. – ನಾಗರಾಜ್ ಪುತ್ರನ್, ಕಟ್‌ಬೆಲ್ತೂರು ಗ್ರಾ.ಪಂ. ಅಧ್ಯಕ್ಷರು
–ಪ್ರಶಾಂತ್ ಪಾದೆ