ಗುರುಮಠಕಲ್: ಗ್ರಾಮೀಣ ಅಭಿವೃದ್ಧಿ ಮತ್ತು ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ವೃದ್ಧಿಸಲು ಗ್ರಾಮೀಣ ಪ್ರದೇಶದಲ್ಲಿ ಜಲ, ಸ್ವಚ್ಛತೆ ಹಾಗೂ ಉದ್ಯೋಗ ಖಾತ್ರಿಗೊಳಿಸಿ ಅಭಿವೃದ್ಧಿಗೆ ಆದ್ಯತೆ ನೀಡುವ ಗುರಿ ಅಧಿಕಾರಿಗಳು ಹೊಂದಿರಬೇಕು ಎಂದು ತಾಪಂ ಇಒ ಎಸ್.ಎಸ್. ಖಾದ್ರೋಲಿ ಹೇಳಿದರು.
ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ನಡೆದ 2022-23ನೇ ಸಾಲಿನ ಎಲ್ಲ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು.
2022-23ನೇ ಸಾಲಿನ ಮಾನವ ದಿನಗಳ ಸೃಜನೆ, ಉದ್ಯೋಗ ಖಾತ್ರಿಗಾಗಿ ಹೆಚ್ಚಿನ ಇ-ಶ್ರಮ ಕಾರ್ಡ್ ಮಾಡಿಸಬೇಕು, ಸರಿಯಾದ ಸಮಯಕ್ಕೆ ಸಂಬಳ ನೀಡಬೇಕು. ಜಿಯೋ ಟ್ಯಾಗಿಂಗ್ ಮತ್ತು ಕಾಮಗಾರಿ ಪೂರ್ಣಗೊಳಿಸಬೇಕು. ಅಲ್ಲದೇ ಪವಿತ್ರ ವನ ಮತ್ತು ನರ್ಸರಿ ಬೆಳವಣಿಗೆ, ಬೂದು ನೀರು ನಿರ್ವಹಣೆಗೆ ಆದ್ಯತೆ ನೀಡುವಂತೆ ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ, ಸಮುದಾಯ ಶೌಚಾಲಯ ಹೆಚ್ಚಿನ ರೀತಿಯಲ್ಲಿ ನಿರ್ಮಿಸಿ ಜನರಲ್ಲಿ ಅರಿವು ಮೂಡಿಸಬೇಕು. ಘನ-ದ್ರವ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ, ಒಣ-ಹಸಿ ಕಸ ವಿಲೇವಾರಿ ವಿಂಗಡಣೆ ಪ್ರಗತಿ, ಶಾಲೆ-ಅಂಗನವಾಡಿ ಶೌಚಾಲಯ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಅಮೃತ ಶಾಲೆ, ಅಮೃತ ಗ್ರಾಪಂಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಿದೆ. ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಗಳು ಎಲ್ಲರಿಗೂ ಲಭ್ಯವಾಗುವಂತೆ ನಿಗಾವಹಿಸಬೇಕು. ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸದಂತೆ ಎಲ್ಲ ಪಿಡಿಒಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಗ್ರಾಪಂ ಆಯವ್ಯಯಗಳಿಗೆ ಕರ ವಸೂಲಿ ಕಟ್ಟುನಿಟ್ಟಿನಲ್ಲಿ ವಸೂಲಿ ಮಾಡಬೇಕು ಎಂದು ಇಒ ಆದೇಶಿಸಿದರು.
ಈ ವೇಳೆ ಪಂಚಾಯತಿ ಎಡಿ ಮಲ್ಲಣ್ಣ, ನರೇಗಾ ಎಡಿ ರಾಮಚಂದ್ರ ಬಸೂದೆ, ಟಿ.ಸಿ ಬಸವರಾಜ ಶಿವುಕುಮಾರ, ಎಸ್‌ಬಿಎಂ ಸಂಯೋಜಕ ನಾರಾಯಣ ಸಿರ್ರಾ, ಪಿಡಿಒಗಳಾದ ರಾಜೇಂದ್ರಕುಮಾರ, ಸೈಯಾದ್ ಅಲಿ, ವಿಜಯಲಕ್ಷ್ಮೀ, ಬಾನುಬೇಗಂ, ಗಾಯತ್ರಿ, ಶೋಭಾ ಪಾಟೀಲ್, ಯಂಕಣ್ಣ, ನಾಗರತ್ನ, ಹನುಮಂತರೆಡ್ಡಿ, ಬ್ರಹ್ಮಯ್ಯಚಾರಿ ಸೇರಿದಂತೆ ಎಲ್ಲ ತಾಂತ್ರಿಕ ಸಹಾಯಕರು, ತಾಪಂ ಸಿಬ್ಬಂದಿ ಇದ್ದರು.