Advertisement
ಭಾಗ್ಯನಗರದ ಬಾಲಾಜಿ ಪಂಕ್ಷನ್ ಹಾಲ್‌ನಲ್ಲಿ ಬೆಟ್ಟದೂರು ಅಲ್ಲಮ ಹಾಗೂ ಅನಿಮಲ್ ಫಾರ್ಮ್ ಎನ್ನುವ ಎರಡು ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
Related Articles
Advertisement
ಇಂದು ಜಾತಿ, ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಸಂಘರ್ಷ ನಡೆದಿದೆ. ಪ್ರಜಾಪ್ರಭುತ್ವ ಇಂದು ಮತಪ್ರಭುತ್ವವಾಗಿ ರೂಪಾಂತರಗೊಂಡಿದೆ. ಓಟಿಗಾಗಿ ಏನಾದರೂ ಮಾಡುತ್ತೇವೆ ಎನ್ನುವಂತ ಸಮಾಜದಲ್ಲಿ ನಾವಿದ್ದೇವೆ. ಓಟ್ ಒಂದೇ ಮಾನದಂಡವಲ್ಲ. ಪ್ರಜಾಪ್ರಭುತ್ವದಲ್ಲಿ ಓಟ್ ಒಂದು ಮಾನದಂಡವಷ್ಟೇ. ಇದು ಖಳನಾಯಕರ ಕಾಲವಾಗಿದೆ. ಪ್ರತಿ ನಾಯಕರ ಕಾಲವಲ್ಲ ಎಂದರು.
ಶ್ರೇಣಿಕೃತ ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದವರೇ ಬಂಡಾಯದ ವ್ಯವಸ್ಥೆಗೆ ಬರುವುದು. ದಲಿತರು, ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಿಗೆ ಬರುವುದೇ ಬಂಡಾಯದ ಪ್ರಜ್ಞೆಯಾಗಿದೆ. 20ನೇ ಶತಮಾನದಲ್ಲಿದ್ದ ಬಂಡಾಯದ ಪ್ರಜ್ಞೆಗೂ ಈಗಿನ ಬಂಡಾಯದ ಪ್ರಜ್ಞೆಗೂ ಸ್ವರೂಪದಲ್ಲಿನ ಬದಲಾವಣೆ ಕಾಣಬಹುದು. ಚಾರಿತ್ರ್ಯ ಕತೆಯನ್ನು ಮರೆತರೆ ವರ್ತಮಾನಕ್ಕೆ ಯಾವುದೇ ಅರ್ಥ ಇರುವುದಿಲ್ಲ. ಭೂತದ ಬೆಳಕಿನಲ್ಲಿ ವರ್ತಮಾನ ನೋಡುವುದು, ವರ್ತಮಾನದ ವಿವೇಕದಿಂದ ಭೂತವನ್ನು ಕಂಡುಕೊಳ್ಳುವುದೇ ನಿಜವಾದ ಚರಿತ್ರೆಯಾಗಿದೆ. ಡಾ| ಸಿ.ಬಿ. ಚಿಲ್ಕರಾಗಿ ಅವರು ಬೆಟ್ಟದೂರ ಅಲ್ಲಮ ಕೃತಿಯಲ್ಲಿ ಸಾಹಿತಿ ಅಲ್ಲಮಪ್ರಭು ಅವರ ವಿಚಾರಧಾರೆ ಉತ್ತಮವಾಗಿ ಬಿಂಬಿಸಿದ್ದಾರೆ. ಅವರ ಹೋರಾಟದ ಅಂಶಗಳು ಇದರಲ್ಲಿ ಅಡಕವಾಗಿವೆ ಎಂದರು.
ರಾಜ್ಯಸಭಾ ಸದಸ್ಯ ಡಾ| ಎಲ್. ಹನುಮಂತಯ್ಯ ಮಾತನಾಡಿ, ಸಾಹಿತಿ ಈಶ್ವರ ಹತ್ತಿ ಅವರ ಅನಿಮಲ್ ಫಾರ್ಮ್ ಎನ್ನುವ ಅನುವಾದಿತ ಕೃತಿ ನಿಜಕ್ಕೂ ಕನ್ನಡದ್ದೇ ಕೃತಿಯೇನೋ ಎನ್ನುವಂತೆ ಭಾಸವಾಗುತ್ತಿದೆ. ಈ ಕೃತಿಯಲ್ಲಿ ಪ್ರಾಣಿಗಳ ಲೋಕದ ಮೂಲಕ ಮನುಷ್ಯನ ನಿರಂಕುಶತೆ, ಆಡಳಿತ, ವಾಸ್ತವಿಕತೆ ನಡೆಯುವ ಅಂಶಗಳಿವೆ. ಸ್ವಾಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಇಂಗ್ಲಿಷ್ ಕೃತಿ ಬಂದಿತ್ತು. ಈ ಕಾದಂಬರಿಯು ಇಂದು ನಮ್ಮ ಸುತ್ತಲು ನಡೆಯುವ ವಿದ್ಯಮಾನಗಳ ಕುರಿತು ಬರೆಯಲಾಗಿದೆ ಎನ್ನುವಂತಿದೆ. ಈ ಮಹತ್ವದ ಕೃತಿಯು ನಿಜಕ್ಕೂ ನನ್ನ ಮನಸ್ಸು ಸೆಳೆದಿದೆ ಎಂದರು.
ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್. ಪಾಟೀಲ್, ಈಶ್ವರ ಹತ್ತಿ, ಡಾ| ಸಿ.ಬಿ. ಚಿಲಕರಾಗಿ, ಡಿ.ಎಂ. ಬಡಿಗೇರ ಸೇರಿದಂತೆ ಪ್ರಮುಖ ಸಾಹಿತಿಗಳು ಉಪಸ್ಥಿತರಿದ್ದರು.