ಚಿತ್ತಾಪುರ: ಕಲಾವಿದರು ಸರ್ಕಾರದ ಸೌಲಭ್ಯ ಪಡೆಯಬೇಕಾದರೆ ಕಲಾವಿದರು ಒಗ್ಗಟ್ಟಾಗಬೇಕು. ಹಳ್ಳಿಗಳಲ್ಲಿ ಉತ್ತಮ ಕಲಾವಿದರಿದ್ದಾರೆ. ಅವರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಹೀಗಾಗಿ ಗ್ರಾಮೀಣ ಕಲಾವಿದರು ಬೆಳಕಿಗೆ ಬರದೆ ಹಿಂದೆ ಉಳಿದಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಕೇಂದ್ರ ಸಮಿತಿ ಸಹ ಕಾರ್ಯದರ್ಶಿ ನಾಗಯ್ಯ ಸ್ವಾಮಿ ಅಲ್ಲೂರ ಹೇಳಿದರು.
ತಾಲೂಕಿನ ಅಲ್ಲೂರ ಬಿ. ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಭಜನಾ ಸಂಘದ ಕಲಾವಿದರಿಗೆ ಗುರುತಿನ ಚೀಟಿ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಲ್ಲ ಪ್ರಕಾರದ ಕಲಾವಿದರನ್ನು ಒಂದೇ ವೇದಿಕೆಯಡಿ ತಂದು ಅವರಿಗೆ ವೇದಿಕೆ ಒದಗಿಸಲು ಕಲ್ಯಾಣ ಕರ್ನಾಟಕ ಭಾಗದ ಏಳು ಜೀಲ್ಲೆಗಳು ಸೇರಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ ಮಾಡಲಾಗಿದೆ. ಈಗಾಗಲೇ ಈ ಒಕ್ಕೂಟಕ್ಕೆ 5000ಜನ ಕಲಾವಿದರು ಸದಸ್ಯತ್ವ ಪಡೆದಿದ್ದಾರೆ ಎಂದು ಹೇಳಿದರು.
ದುರ್ಗಾದೇವಿ ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಶಂಕರ ವಿಜಾಪುರ ಮಾತನಾಡಿ, ಅಲ್ಲೂರಿನ ಭಜನೆ ಕಲಾವಿದರು ಉತ್ತಮ ಕಲಾವಿದರಾಗಿ ದುರ್ಗಾದೇವಿ ಮತ್ತು ಅಲ್ಲೂರಿನ ಕೀರ್ತಿ ತರಬೇಕು ಎಂದು ಹೇಳಿದರು.
ಮುಖಡೋಣಿಯ ಶ್ರೀ ಮೌನೇಶ ಮಹಾರಾಜರು ಸಾನ್ನಿಧ್ಯ, ಒಕ್ಕೂಟದ ತಾಲೂಕು ಅಧ್ಯಕ್ಷ ನರಸಪ್ಪ ಚಿನ್ನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರ ಒಕ್ಕೂಟದ ಜಿಲ್ಲಾ ಸಂಚಾಲಕ ತಿಮ್ಮರಾಯ ಭೀಮನಹಳ್ಳಿ, ಗ್ರಾಪಂ ಸದಸ್ಯ ದ್ಯಾವಪ್ಪ ಗಮಗಾ, ಮುಖಂಡ ಮಲ್ಲಣ್ಣ ಮೋಶನಿ, ಡಾ|ದೇವಿಂದ್ರ ಕೊರಬಾ, ಭೀಮರಾಯ ಕರದಾಳ, ಕಲಾವಿದರಾದ ಹಣಮಂತ ಗೂಂಜೂರ, ಮಲ್ಲಪ್ಪ ಬೋಳಿ, ಮೈಲಾರಿ ತೆಳಮನಿ, ದ್ಯಾವಪ್ಪ ಚೆಟ್ಟಪನೋರ್, ನಾಗೇಶ ಗಮಗಾ, ಭೀಮರಾಯ ಗಣೆಕಲ್, ಸಣ್ಣ ಮಲ್ಲಪ್ಪ ಬೋಳಿ, ಮಾಹಾದೇವ ಗಮಗಾ, ಬಸಣ್ಣ ತೆಳೆಮನಿ ಇದ್ದರು. ದುರ್ಗಾದೇವಿ ಭಜನಾ ಕಲಾವಿದರ ಸಂಘದ ಅಧ್ಯಕ್ಷ ದೇವೀಂದ್ರ ಚೆಮ್ಮ ಸ್ವಾಗತಿಸಿದರು, ದುರ್ಗಣ್ಣ ನಿರೂಪಿಸಿದರು.