ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿರುವ ಬೆನ್ನಲ್ಲೇ ನಗರ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಸು ಸೋಲಿಗೆ ಪಕ್ಷದೊಳಗೆ ಕೆಲವರು ನಡೆಸಿರುವ ಪಿತೂರಿಯೇ ಕಾರಣವೆಂಬ ಆರೋಪಗಳು ಕೇಳಿಬಂದಿದೆ.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ನಗರ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾಜಿ ಶಾಸಕ ವಾಸು ಬೆಂಬಲಿಗರು, ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿದರು. ಅಲ್ಲದೇ ಪಕ್ಷ ವಿರೋಧಿ ಕೆಲಸ ಮಾಡಿರುವ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಾಧ್ಯಕ್ಷ ಆರ್.ಮೂರ್ತಿ ಅವರನ್ನು ಒತ್ತಾಯಿಸಿದ ಬೆಂಬಲಿಗರು, ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಾಜಿ ಶಾಸಕ ವಾಸು, ಆಕ್ರೋಶಗೊಂಡ ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಿದರು.
ಬಳಿಕ ಮಾತನಾಡಿದ ವಾಸು, ನಾನು ಸೋತರೂ ಕಡೆಯವರೆಗೂ ಕಾಂಗ್ರೆಸ್‌ನಲ್ಲೇ ಉಳಿದುಕೊಂಡು, ನಿರಂತರವಾಗಿ ಕ್ಷೇತ್ರದ ಜನರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಂಪರ್ಕದಲ್ಲಿರುತ್ತೇನೆ. ನನಗೆ ಪಕ್ಷ ಮುಖ್ಯ, ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಶಿಕ್ಷೆಯಾಗಬೇಕಿದೆ. ಪಕ್ಷಕ್ಕೆ ದ್ರೋಹ ಮಾಡಿದವರು ದೇವರಿಗೆ ದ್ರೋಹ ಮಾಡಿದಂತೆ, ಅವರಿಗೆ ಬುದ್ಧಿ ಕಲಿಸುವ ಶಕ್ತಿ ಪಕ್ಷದಲ್ಲಿರುವ ಕಾರ್ಯಕರ್ತರಿಗಿದೆ. ಚುನಾವಣೆಯಲ್ಲಿ ಎಲ್ಲಾ ಕಾರ್ಯಕರ್ತರು ಪûಾತೀತವಾಗಿ ತಮಗೆ ಬೆಂಬಲ ನೀಡಿದ್ದು, ಐದು ವರ್ಷಗಳಲ್ಲಿ ಸಾರ್ಥಕ ಕೆಲಸ ಮಾಡುವ ಮೂಲಕ ಯಾವುದೇ ಕಪ್ಪುಚುಕ್ಕೆ ಬಾರದಂತೆ ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದರು.
ಆದರೆ, ಕೆಲವರು ಕೊಂಬೆ ಮೇಲೆ ಕುಳಿತು ಮರದ ಬುಡ ಕಡಿಯುವ ಕೆಲಸ ಮಾಡಿದ್ದು, ಇದರಿಂದ ಪಕ್ಷಕ್ಕೆ ಮೋಸ ಆಗಲಿದೆ. ಹೀಗಾಗಿ ಮುಂಬರುವ ಪಾಲಿಕೆ ಚುನಾವಣೆಯಲ್ಲಿ 65 ವಾರ್ಡ್‌ಗಳಲ್ಲಿ ನನಗಾದ ಸಮಸ್ಯೆ ಯಾರಿಗೂ ಆಗಬಾರದು. ಮುಂದಿನ ದಿನಗಳಲ್ಲಿ ಪಕ್ಷ ಸದೃಢವಾಗಬೇಕಾದರೆ ಮೀರ್ ಸಾಧಿಕ್‌ನಂತಹವರನ್ನು ಪಕ್ಷದಿಂದ ತೆಗೆದುಹಾಕಬೇಕಿದೆ. ಈ ಬಗ್ಗೆ ಕಾರ್ಯಕರ್ತರು ಆರೋಗ್ಯಯುತ ಚರ್ಚೆ ನಡೆಸಬೇಕಿದ್ದು, ಚುನಾವಣೆಯಲ್ಲಿ ನನಗೆ ಮೋಸ ಆಗಿದೆ. ಇವಿಎಂಗಳನ್ನು ಹ್ಯಾಕ್ ಮಾಡಿರುವುದು ನನಗೆ ಕಡಿಮೆ ಮತ ಬರಲು ಕಾರಣವಾಗಿದೆ. ನನ್ನ ವಿರುದ್ಧ ತೀರ್ಪು ಬಾರದಿದ್ದರೂ, ನನಗೆ ಮೋಸ ಆಗಿದೆ ಎಂದು ಅಸಮಾಧಾನ ಹೊರಹಾಕಿದರು.
ಕಾರ್ಯಕ್ರಮದಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ನಗರಪಾಲಿಕೆ ಸದಸ್ಯ ಪ್ರಶಾಂತ್‌ಗೌಡ, ರಮೇಶ್, ಸುಹೇಲ್‌ಬೇಗ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಕರ್ನಾಟಕ ಮೃಗಾಲಯದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಮಾಜಿ ಮೇಯರ್ ಮೋದಾಮಣಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಂದಿನಿ ಚಂದ್ರಶೇಖರ್, ಮಾಜಿ ನಗರಾಧ್ಯಕ್ಷ ಟಿ.ಎಸ್.ರವಿಶಂಕರ್ ಮತ್ತಿತರರು ಹಾಜರಿದ್ದರು.