Advertisement

ಕೆರೆಕಟ್ಟೆಗಳ ಒತ್ತುವರಿ ಭೂಮಿ ತೆರವಾಗಲಿ

04:31 PM Feb 15, 2020 | Suhan S |

ಹೊಳೆನರಸೀಪುರ: ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕೆರೆಕಟ್ಟೆಗಳ ಭೂಮಿಯನ್ನು ಅಕ್ರಮವಾಗಿ ಒತ್ತುವರಿಗೊಳಿಸಿಕೊಂಡು ಮನೆ ಮತ್ತು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.  ಹೀಗಾಗಿ ಅದನ್ನು ತೆರವುಗೊಳಿಸಲು ರಾಜ್ಯ ಲೋಕಾಯುಕ್ತ ಇಲಾಖೆ ಅಭಿಯಾನ ಆರಂಭಿಸಿದೆ ಎಂದು ಹಾಸನದ ಲೋಕಾಯುಕ್ತ ಡಿವೈಎಸ್‌ಪಿ ಭಾನು ನುಡಿದರು.

Advertisement

ಅಕ್ರಮ ಒತ್ತುವರಿ ಜಾಗ ತೆರವುಗೊಳಿಸಿ: ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 535 ಕೆರೆಗಳಿದ್ದು, ಇವುಗಳಲ್ಲಿ 290 ಕೆರೆಗಳು ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆಯ 2 ಕೆರೆಗಳು ಸೇರಿದೆ. ಪ್ರಸ್ತುತ 53 ಕೆರೆಗಳ ಸರ್ವೆ ಕಾರ್ಯ ಮುಗಿದಿದ್ದು, ಉಳಿದವುಗಳನ್ನು ಮಾರ್ಚ್‌ ಹತ್ತರೊಳಗೆ ಸರ್ವೆ ಕಾರ್ಯ ಮುಗಿಸಿ, ಅಕ್ರಮ ಒತ್ತುವರಿ ಜಾಗ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಬೇಸಿಗೆಯಲ್ಲಿ ಸಮಸ್ಯೆ ಉಲ್ಬಣವಾಗಲಿದೆ. ಹೀಗಾಗಿ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಒತ್ತುವರಿ ಕೆರೆಗಳ ಸರ್ವೆ ಹಾಗೂ ಭೂಮಿಯನ್ನು ಮುಲಾಜಿಲ್ಲದೆ ತೆರವುಗೊಳಿಸಲು ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಚ್ಚುಕಟ್ಟು ಪ್ರದೇಶಕ್ಕೆ ಕಠಿಣ ಕ್ರಮಕೈಗೊಳ್ಳಿ: ತಹಶೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ಮಾತನಾಡಿ, ತಾಲೂಕಿನಲ್ಲಿರುವ ಕೆರಗಳ ದಾಖಲೆಗಳ ಪ್ರಕಾರ, ಕೆರೆ ಅಕ್ಕಪಕ್ಕದ ರೈತರು ಭೂಮಿ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಅಂತಹ ಕೃಷಿಕರ ಹೆಸರುಗಳನ್ನು ಅಧಿಕಾರಿಗಳು ಪಟ್ಟಿ ಮಾಡಿ, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಸರ್ಕಾರ ತನ್ನ ಸುಪರ್ದಿಗೆ ತಗೆದುಕೊಳ್ಳುವಂತಾಗಬೇಕು. ಜೊತೆಗೆ ಸುಪರ್ದಿಗೆ ಒಳಗಾಗದ ಭೂಮಿಯನ್ನು ಮತ್ತೆ ಕೆರೆ ಅಚ್ಚುಕಟ್ಟು ಪ್ರದೇಶವನ್ನಾಗಿ ಮಾಡುವಲ್ಲಿ ಅಧಿಕಾರಿ ಗಳು ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಅಧಿಕಾರಿಗಳು ತಮಗಿರುವ ಸಮಸ್ಯೆಯನ್ನು ಲೋಕಾಯುಕ್ತ ಡಿವೈಎಸ್‌ಪಿ ಮುಂದೆ ಬಿಚ್ಚಿಟ್ಟರು. “ಅಕ್ರಮ ಒತ್ತುವರಿ ಭೂಮಿ ತೆರವಿಗೆ ಸಿದ್ಧರಿದ್ದೇವೆ. ಆದರೆ ಸರ್ಕಾರ ವಶಪಡಿಸಿಕೊಂಡು ಭೂಮಿಯನ್ನು ಕೆರೆ ಅಚ್ಚುಕಟ್ಟಿಗೆ ಸೇರ್ಪಡೆ ಮಾಡಲು ಹಣದ ಖರ್ಚು ಬೇಕಾಗುತ್ತದೆ. ಈ ಹಣ ನಮ್ಮಲ್ಲಿಲ್ಲ. ಹೇಗೆ ಕರ್ತ್ಯವ್ಯ ನಿರ್ವಹಿಸಬೇಕು ಎಂದು ತಿಳಿಸಬೇಕು ಮನವಿ ಮಾಡಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಕೆರೆ ಅಚ್ಚುಕಟ್ಟು ಪ್ರದೇಶವನ್ನು ವಶಪಡಿಸಿಕೊಂಡಿರುವ ಖರ್ಚಿಗೆ ತಲಾ ಒಂದು ಕೆರೆಗೆ 60 ಸಾವಿರ ರೂ.ಗಳನ್ನು ಕ್ರಿಯಾಯೋಜನೆಯನ್ನು ಸರ್ಕಾರದ ಮುಂದಿರಿಸಿ ಅವರಿಂದ ಮಂಜೂರು ಪಡೆದು ಕೆಲಸ ಪೂರ್ಣಗೊಳಿಸಲು ಕೋರಲಾಯಿತು. ಜೊತೆಗೆ ನಮ್ಮ ಸಿಬ್ಬಂದಿ ಶನಿವಾರದಿಂದಲೇ ತಾಲೂಕಿನಲ್ಲಿರುವ ಎಲ್ಲ ಕರೆಗಳ ಬಗ್ಗೆ ಪೂರ್ಣ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿ ಒತ್ತುವರಿ ಭೂಮಿ ತೆರವು ಕಾರ್ಯ ಆರಂಭಿಸಲಾಗುವುದು. ಅಕಸ್ಮಾತ್‌ ಒತ್ತುವರಿ ಭೂಮಿ ತೆರವು ಗೊಳಿಸದೇ ಇರುವವರ ವಿರುದ್ಧ ಹೊಸ ಕಾನೂನು ಪ್ರಕಾರ ಕ್ರಮ ಕೈಗೊಳ್ಳೋಣ. ಆಗ ಒತ್ತುವರಿದಾರ ನೇರ ಜೈಲು ಸೇರುತ್ತಾನೆ ಎಂದು ತಮ್ಮ ಸಿಬ್ಬಂದಿಗೆ ಮಾತಿನ ಚೈತನ್ಯ ತುಂಬಿದರು.

ತಾಪಂ ಎಂಜಿನಿಯರ್‌ ಪ್ರಭು, ತಾಪಂ ಇಒ ಕೆ.ಯೋಗೇಶ್‌, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಲೋಕಾಯುಕ್ತ ಡಿವೈಎಸ್‌ಪಿ ಭಾನು, ಸೂಚನೆ ಆಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next