ಮೈಸೂರು: ತಮ್ಮ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡುತ್ತಿರುವ ಆರೋಪಗಳೆಲ್ಲ ರಾಜಕೀಯ ಪ್ರೇರಿತ ಹಾಗೂ ನೂರಕ್ಕೆ ನೂರರಷ್ಟು ಶುದ್ಧ ಸುಳ್ಳು. ಒಂದು ವೇಳೆ ಯಡಿಯೂರಪ್ಪ ತಮ್ಮ ವಿರುದ್ಧದ ಆರೋಪಗಳನ್ನು ದಾಖಲೆ ಸಮೇತ ಸಾಬೀತು ಮಾಡಿದರೆ ಒಂದು ಕ್ಷಣ ಕೂಡ ಸಾರ್ವಜನಿಕ ಜೀವನದಲ್ಲಿರುವುದಿಲ್ಲ. ಇಲ್ಲವಾದಲ್ಲಿ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗುತ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲಿಗೆ ಹೋಗಿಬಂದ ಯಡಿಯೂರಪ್ಪ ಅವರಿಗೆ ತಮ್ಮ ವಿರುದ್ಧ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿ ನಾಯಕರು ರಾಜ್ಯದಲ್ಲಿ ಏನೆಲ್ಲಾ ಮಾಡಿದರು ಎಂಬುದು ಜನತೆಗೆ ಗೊತ್ತಿದೆ, ಅದಕ್ಕಾಗಿಯೇ ನಂತರದ ಚುನಾವಣೆಯಲ್ಲಿ 40 ಸ್ಥಾನಕ್ಕಿಳಿಸಿದರು ಎಂದು ಟೀಕಿಸಿದರು.
ಚುನಾವಣೆ ಬರಲಿ ಮುಖ್ಯಮಂತ್ರಿಯಾಗುವ ಮೊದಲು ಯಡಿಯೂರಪ್ಪ ಅವರಿಗೆ ಎಷ್ಟು ಆಸ್ತಿ ಇತ್ತು. ಮುಖ್ಯಮಂತ್ರಿ ಆದ ನಂತರ ಶಿವಮೊಗ್ಗದಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಎಂದು ಬಹಿರಂಗ ಪಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಯಡಿಯೂರಪ್ಪ ವಿರುದ್ಧ 15 ಎಫ್ಐಆರ್‌ಗಳು ದಾಖಲಾಗಿವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇಲ್ಲದಿದ್ದರೆ ಇಷ್ಟೊತ್ತಿಗೆ ಮತ್ತೆ ಯಡಿಯೂರಪ್ಪ ಜೈಲಿನಲ್ಲಿರಬೇಕಿತ್ತು. ಕೇಂದ್ರ ಸರ್ಕಾರದ ಮೂಲಕ ತಮ್ಮ ವಿರುದ್ಧದ ಕೇಸ್‌ಗಳನ್ನೆಲ್ಲ ವಜಾ ಮಾಡಿಸಿ ಕೊಳ್ಳುತ್ತಿದ್ದಾರೆ. ಅಂಥವರಿಗೆ ತನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಮಾಡುತ್ತಿರುವ ಆರೋಪಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ ಎಂದ ಅವರು, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಡೈರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಣ ನೀಡಿರುವ ಉಲ್ಲೇಖವಿದೆ ಎಂದಿದ್ದಾರೆ. ಈ ರೀತಿ ಡೈರಿಗಳಲ್ಲಿ ಬರೆದುಕೊಂಡಿದ್ದೆಲ್ಲ ಪೂರಕ ದಾಖಲಾತಿಗಳಲ್ಲ ಎಂದು ಹಿಂದೆಯೇ ಸುಪ್ರೀಂಕೋರ್ಟ್ ಹೇಳಿದೆ. ಡೈರಿಯಲ್ಲಿ ಹೆಸರಿದ್ದ ಮಾತ್ರಕ್ಕೆ ರಾಜೀನಾಮೆ ಕೊಡಬೇಕು ಎನ್ನುವುದಾದರೆ ಸಹರಾ ಡೈರಿಯಲ್ಲಿ ನರೇಂದ್ರಮೋದಿಯವರ ಹೆಸರೂ ಇತ್ತು. ಹೀಗಾಗಿ ಮೋದಿಯವರ ರಾಜೀನಾಮೆಗೂ ಯಡಿಯೂರಪ್ಪ ಆಗ್ರಹಿಸಲಿ ಎಂದರು.
ಬಿಡುಗಡೆಯಾಗದೇ ಹಣ ಹೇಗೆ ಪಡೆಯೋದು? ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣದಲ್ಲಿ 65 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಉಕ್ಕಿನ ಸೇತುವೆ ನಿರ್ಮಾಣಕ್ಕೆ ಇನ್ನೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತಿಲ್ಲವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಗೋವಿಂದರಾಜು ಡೈರಿಯಲ್ಲಿ ತಮ್ಮ ಹೆಸರಿದೆ ಎಂಬುದು ಯಡಿಯೂರಪ್ಪ ಅವರಿಗೆ ಹೇಗೆ ಗೊತ್ತಾಯಿತು? ಆದಾಯ ತೆರಿಗೆ ಇಲಾಖೆಯವರು ಇವರಿಗೇನು ಮಾಹಿತಿ ಕೊಡುತ್ತಾರಾ? ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಾಗ 150 ಕೋಟಿ ಹಣ ಸಿಕ್ಕಿದೆ ಎಂದು ದೊಡ್ಡ ಸುದ್ದಿಯಾಯಿತು.
ಈ ಬಗ್ಗೆ ಮಾಹಿತಿ ಕೊಡುವಂತೆ ತಾವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಕೇಳಿದಾಗ ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಆದರೆ, ಪ್ರಧಾನಿ ನರೇಂದ್ರಮೋದಿ ಅವರು ಉತ್ತರಪ್ರದೇಶದ ಚುನಾವಣಾ ಪ್ರಚಾರ ಸಬೆಯಲ್ಲಿ ಕರ್ನಾಟಕದ ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ 150 ಕೋಟಿ ಹಣ ಸಿಕ್ಕಿದೆ ಎಂದು ಭಾಷಣ ಮಾಡುತ್ತಾರೆ.
ಇದೆಲ್ಲ ರಾಜಕೀಯ ಪ್ರೇರಿತ ಹೇಳಿಕೆಗಳು. ಆದಾಯ ತೆರಿಗೆ ಇಲಾಖೆಯನ್ನು ಮುಂದಿಟ್ಟುಕೊಂಡು ಸರ್ಕಾರ ವನ್ನು ಅಸ್ಥಿರಗೊಳಿಸಲಾಗುವುದಿಲ್ಲ. ಕರ್ನಾಟಕ, ಪಶ್ಚಿಮಬಂಗಾಳ ರಾಜ್ಯಗಳಲ್ಲಿ ಮಾತ್ರ ಏಕೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡುತ್ತಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಕಪ್ಪು ಹಣ ಹೊಂದಿರುವ ನಾಯಕರುಗಳಿಲ್ಲವೆ ಎಂದು ಹರಿಹಾಯ್ದರು.