ಬೆಳಗಾವಿ: ದೇವಸ್ಥಾನ ಜಾಗ ಕಬಳಿಸುತ್ತಿರುವುದನ್ನು ವಿರೋಧಿಸಿ ಹೋರಾಟ ನಡೆಸಿದ್ದ ಗೌಂಡವಾಡ ಗ್ರಾಮದ ಸತೀಶ ಪಾಟೀಲನನ್ನು ಕೊಲೆ ಮಾಡಿದ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದ ಸತೀಶ ಪಾಟೀಲನ ಪತ್ನಿ ಪೂಜಾ ಪಾಟೀಲ ಬಿಕ್ಕಿ ಬಿಕ್ಕಿ ಅತ್ತರು. ಸತೀಶನ ತಂದೆ, ತಾಯಿ, ಕುಟುಂಬಸ್ಥರು, ಸಂಬಂಧಿಕರು ಸೇರಿದಂತೆ ಗ್ರಾಸ್ಥರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿ, ನ್ಯಾಯಯುತ ಹೋರಾಟ ನಡೆಸಿದ ನನ್ನ ಪತಿ ಸತೀಶನನ್ನು ದುರುಳರು ಕೊಲೆ ಮಾಡಿದ್ದಾರೆ. ನ್ಯಾಯ ಸಿಗಬೇಕಾದರೆ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ನನ್ನ ಪತಿಯನ್ನು ಸುರಕ್ಷಿತವಾಗಿ ತಂದು ಕೊಡಿ ಎಂದು ಆಗ್ರಹಿಸಿದರು.
ನನ್ನ ಪತಿ ದೇವಸ್ಥಾನದ ಜಾಗ ಉಳಿಸಲು ನ್ಯಾಯಯುತ ಹೋರಾಟ ನಡೆಸಿದ್ದಕ್ಕೆ ಕೊಲೆ ಮಾಡಲಾಗಿದೆ. ದೇವರ ಜಾಗದಲ್ಲಿ ಪ್ಲಾಟ್ ಹಾಕಿ ಹಣ ಗಳಿಸುವ ಹುನ್ನಾರ ನಡೆಸಿದ್ದರು. ಈ ಜಾಗ ದೇವಸ್ಥಾನಕ್ಕೇ ಸಿಗಬೇಕು ಎಂದು ಕಾನೂನು ಹೋರಾಟ ನಡೆಸಿದ್ದರು. ಸಮಾಜದ ಪರವಾಗಿ ನಿಂತ ನನ್ನ ಪತಿಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಇದು ನ್ಯಾಯವೇ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಕೊಲೆ ಹಂತಕರನ್ನು ಸುಮ್ಮನೆ ಬಿಡಬಾರದು. ಗೌಂಡವಾಡ ಗ್ರಾಮದ ಶ್ರೇಯೋಭಿವೃದ್ಧಿಗಾಗಿ ಸದಾ ಕನವರಿಸುತ್ತಿದ್ದ ಸತೀಶ ಪಾಟೀಲ ಗ್ರಾಮದ ಆಶಾಕಿರಣವಾಗಿದ್ದರು. ನ್ಯಾಯಕ್ಕೆ ಬೆಲೆ ಇಲ್ಲ ಎಂಬುದು ಈಗ ಅರ್ಥವಾಗುತ್ತಿದೆ. ನ್ಯಾಯದ ಪರವಾಗಿ ಹೋರಾಟ ನಡೆಸಿದವರ ಕೊಲೆ ಆಗುತ್ತ ಹೋದರೆ ಸಮಾಜದಲ್ಲಿ ಪಾಪಿಗಳಿಗೆ ಪೊಲೀಸರ ಭಯ ಇಲ್ಲವಾದಂತಾಗುತ್ತದೆ. ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸತೀಶ ಪಾಟೀಲ ಕುಟುಂಬಕ್ಕೆ ನ್ಯಾಯ ಒದಗಿಸಿ, ಕೊಲೆ ಹಂತಕರು ಹಾಗೂ ಜಾಗ ಕಬಳಿಸುತ್ತಿರುವವರಿಗೆ ಶಿಕ್ಷೆ ವಿಧಿಸಬೇಕು ಎಂದು ಗ್ರಾಮದ ಮಹಿಳೆಯರು ಆಗ್ರಹಿಸಿದರು.
ಸರ್ಕಾರ ಇದೆಯೋ ಇಲ್ಲವೋ ಎಂಬುದು ನಮಗೆ ತಿಳಿಯುತ್ತಿಲ್ಲ. ಸತೀಶ ಹಂತಕರಿಗೆ ಶಿಕ್ಷೆ ಆಗದಿದ್ದರೆ ಮುಂದೆ ಮತ್ತೆ ಇಂತಹ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಶ್ರೀ ಕಾಳಭೈರವನಾಥ, ಲಕ್ಷ್ಮೀ ಹಾಗೂ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ 27 ಎಕರೆ ಜಮೀನನ್ನು ಕಬಳಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೂಡಲೇ ಈ ಜಾಗಕ್ಕೆ ತಡೆಯಾಜ್ಞೆ ನೀಡಬೇಕು. ಕೊಲೆ ಮಾಡಿದ ಮುಖ್ಯ ಆರೋಪಿ ಓಡಾಡುತ್ತಿದ್ದು, ಈತನನ್ನು ಸೇರಿ ಒಟ್ಟು 25 ಜನರನ್ನು ಬಂಧಿಸಿ ಶಿಕ್ಷೆ ವಿಧಿಸುವಂತೆ ವಕೀಲರಾದ ಪ್ರಿಯಂಕಾ ರಾಜಗೋಳಕರ ಒತ್ತಾಯಿಸಿದರು.